ಹೆಸರಿಗೆ ಮಾತ್ರ ದುಬಾರಿ ಕಾರು... ಅತಿವೇಗದಲ್ಲಿ ಡಿಕ್ಕಿಯಾದ್ರೆ ಉಳಿಯೋದೆ ಡೌಟು!
ಲ್ಯಾಂಬೋರ್ಗಿನಿ ವಿಶ್ವದ ಅತ್ಯಂತ ದುಬಾರಿ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ. ಮೂಲತಃ ಇದು ಇಟಾಲಿಯನ್ ಬ್ರಾಂಡ್ ಆಗಿದ್ದು, ಭಾರತದಲ್ಲೂ ಜನಪ್ರಿಯತೆ ಪಡೆದಿದೆ. ಭಾರತದಲ್ಲಿ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಈ ಲ್ಯಾಂಬೋರ್ಗಿನಿ ಕಾರುಗಳನ್ನು ಹೊಂದಿದ್ದಾರೆ. ಅತಿ ವಿರಳವಾಗಿ ಕಾಣಿಸಿಕೊಳ್ಳುವ ಈ ಕಾರುಗಳು ರ್ಯಾಲಿ ಅಥವಾ ಈವೆಂಟ್‌ಗಳಿದ್ದಲ್ಲಿ ಒಮ್ಮೆಲೆ ಹೊರಬರುತ್ತವೆ.
ಇತ್ತೀಚೆಗೆ ಲ್ಯಾಂಬೊರ್ಗಿನಿ ಬ್ರ್ಯಾಂಡ್ ತನ್ನ 60ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಣಯಿಸಿತ್ತು. ಆಚರಣೆಯ ಭಾಗವಾಗಿ, ಭಾರತದಲ್ಲಿನ ಲ್ಯಾಂಬೋರ್ಗಿನಿ ಮಾಲೀಕರ ಸಮುದಾಯವು ರಾಜಸ್ಥಾನದಲ್ಲಿ ರ್ಯಾಲಿಯನ್ನು ಆಯೋಜಿಸಿದ್ದರು. ರ್ಯಾಲಿಗಾಗಿ ಹಲವಾರು ವಿಲಕ್ಷಣ ಕಾರುಗಳು ಬಂದಿದ್ದವು. ಆದರೆ ಇದೇ ರ್ಯಾಲಿಯಲ್ಲಿ ಬಹುಕೋಟಿ ಬೆಲೆಯ ಲ್ಯಾಂಬೋರ್ಗಿನಿ ಹ್ಯುರಾಕನ್ ಕಾರು ಅಪಘಾತಕ್ಕೀಡಾಗಿರುವ ಅಹಿತಕರ ಘಟನೆ ನಡೆದಿದೆ. ಈ ಅಪಘಾತದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ಜೈಸಲ್ಮೇರ್‌ಗೆ ಹೋಗುವ ಹೆದ್ದಾರಿಯ ಮಧ್ಯದಲ್ಲಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ಬೆಂಗಾವಲು ಪಡೆಯಾಗಿದ್ದ ಅವೆಂಟಡಾರ್, ಹುರಾಕನ್, ಉರುಸ್ ಮತ್ತು ಹುರಾಕನ್ STO ಗಳನ್ನು ನೋಡಬಹುದು. ಸುಂದರವಾದ ಬಣ್ಣದ ಹಲವಾರು ಲ್ಯಾಂಬೋರ್ಗಿನಿ ಕಾರುಗಳನ್ನು ಸಹ ಇಲ್ಲಿ ನೋಡಬಹುದು. ವರದಿಗಳ ಪ್ರಕಾರ ಬೆಂಗಾವಲು ಪಡೆಯಲ್ಲಿ ಸುಮಾರು 60 ಕಾರುಗಳಿದ್ದವು ಎನ್ನಾಲಾಗಿದೆ.
ಅಪಘಾತಕ್ಕೀಡಾದ ಲ್ಯಾಂಬೋರ್ಗಿನಿ ಹುರಾಕನ್ ಬೆಂಗಾವಲು ಪಡೆಯ ಭಾಗವಾಗಿತ್ತು ಎನ್ನಲಾಗಿದೆ. ಈ ಸೂಪರ್ ಕಾರನ್ನು ಅತಿವೇಗದಲ್ಲಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ. ಇನ್ನೂ ಕೆಲ ಮೂಲಗಳ ಪ್ರಕಾರ, ಕಾರಿನ ಮುಂದೆ ಹಸು ಬಂದ ಕಾರಣ ಕಾರು ನಿಯಂತ್ರಣ ಸಿಗದೇ ಅಪಘಾತವಾಗಿದೆ ಎಂದು ಹೇಳಲಾಗಿದೆ. ಜೈಸಲ್ಮೇರ್‌ನಿಂದ ಸುಮಾರು 10 ಕಿ.ಮೀ ಮುಂದಿರುವ ಮೂಲ್ ಸಾಗರ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಏನೇ ಆಗಲಿ, ಹಾನಿಗೊಳಗಾದ ಲ್ಯಾಂಬೋರ್ಗಿನಿ ಹ್ಯುರಾಕನ್ ರಸ್ತೆಯ ಬದಿಯಲ್ಲಿ ಬಿದ್ದಿರುವುದನ್ನು ಕಂಡರೆ ಎಷ್ಟೇ ದುಬಾರಿ ಐಷಾರಾಮಿ ಕಾರುಗಳಾಗಲಿ ಅತಿವೇಗ ಅನಾಹುತ ಖಚಿತ ಎಂಬುದನ್ನು ಸೂಚಿಸುತ್ತದೆ. ಕಾರು ರಸ್ತೆಯಿಂದ ಸುಮಾರು 30 ಅಡಿಗಳಷ್ಟು ಜಾರಿ ರಸ್ತೆಯ ಪಕ್ಕದ ಪೊದೆಗಳು ಮತ್ತು ಮರಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ಧೂಳಿನಿಂದ ಆವೃತವಾಗಿರುವುದನ್ನು ನಾವು ನೋಡಬಹುದು.
ಅದೃಷ್ಟವಶಾತ್ ಚಾಲಕನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಮತ್ತೊಂದು ಟ್ಯಾಕ್ಸಿ ವ್ಯವಸ್ಥೆ ಮಾಡಿ, ವಾಪಸ್ ಕಳುಹಿಸಲಾಗಿದೆ ಎಂದು ಅಲ್ಲಿನವರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಬೇರೆ ಯಾವುದೇ ವಾಹನಗಳು ರಸ್ತೆಯಲ್ಲಿ ಇರಲಿಲ್ಲ. ಹುರಾಕನ್ ಕಾರು ಬೇರೆ ಯಾವುದಾದರೂ ಕಾರಿಗೆ ಡಿಕ್ಕಿ ಹೊಡೆದಿದ್ದರೆ, ಇನ್ನೂ ದೊಡ್ಡ ಅಪಘಾತವಾಗುತ್ತಿತ್ತು. ಈ ಅಪಘಾತದಲ್ಲಿ ಭಾಗಿಯಾದ ಕಾರಿನ ಮಾಲೀಕರು ಮತ್ತು ಕಾರಿಗೆ ಉಂಟಾದ ಹಾನಿಯ ಬಗ್ಗೆ ನಿಖರವಾದ ವಿವರಗಳು ತಿಳಿದಿಲ್ಲ.

ಲ್ಯಾಂಬೋರ್ಗಿನಿ ಹುರಾಕನ್: ಈ ಕಾರನ್ನು ವಾಸ್ತವವಾಗಿ 2013 ರಲ್ಲಿ ಐಕಾನಿಕ್ ಗಲ್ಲಾರ್ಡೊಗೆ ಬದಲಿಯಾಗಿ ಪರಿಚಯಿಸಲಾಯಿತು. 5.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ V10 ಪೆಟ್ರೋಲ್ ಎಂಜಿನ್‌ನಿಂದ ಇದು ಚಾಲಿತವಾಗಿದ್ದು, 640 PS ಪವರ್ ಮತ್ತು 600 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹುರಾಕನ್ ಬೆಲೆಯು ಭಾರತದಲ್ಲಿ ಸದ್ಯ 3.12 ಕೋಟಿ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








