Vande Sadharan: ಕಡಿಮೆ ಖರ್ಚಿನ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ಶೀಘ್ರ ಸಂಚಾರ.. ವಿಶೇಷತೆ, ಮಾರ್ಗಗಳಾವುವು?
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಪ್ರೀಮಿಯಂ ಸೆಮಿ ಹೈ-ಸ್ವೀಡ್ ರೈಲುಗಳಾಗಿ ಖ್ಯಾತಿ ಗಳಿಸಿವೆ. ಶೀಘ್ರದಲ್ಲೇ ದೂರದ ಊರುಗಳಿಗೆ ಕಡಿಮೆ ಖರ್ಚಿನಲ್ಲಿ ಜನರು ಪ್ರಯಾಣಿಸಲು ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ವಂದೇ ಸಾಧಾರಣ್ ಎಕ್ಸ್‌ಪ್ರೆಸ್ (Vande Sadharan Express) ಓಡಿಸಲಿದೆ.
ವಂದೇ ಸಾಧಾರಣ್ ರೈಲುಗಳು, ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೋಲಿಕೆಯಾದರೂ ಕೊಂಚ ಭಿನ್ನವಾಗಿವೆ. ಇವು, 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲವು. ಜೊತೆಗೆ ಇಂಟರ್‌ಸಿಟಿ ಪ್ರಯಾಣಕ್ಕೆ ಹೆಚ್ಚು ಸ್ಕೂಕ್ತವಾಗಿದ್ದು, ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡಬಹುದಾಗಿದೆ. ಸದ್ಯ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವಿಶೇಷ ಸಂದರ್ಭ ಹೊರತುಪಡಿಸಿ, ರಾತ್ರಿ ಪ್ರಯಾಣಕ್ಕೆ ಉಪಯೋಗಿಸಲಾಗುತ್ತಿಲ್ಲ.

ಈ ವಂದೇ ಸಾಧಾರಣ್ ಎಕ್ಸ್‌ಪ್ರೆಸ್ 22 ಕೋಚ್‌ಗಳು, ಮುಂಭಾಗ ಹಾಗೂ 2 ಎಂಜಿನ್‌ಗಳನ್ನು ಒಳಗೊಂಡಿರುತ್ತದೆ. ಕಾಯ್ದಿರಿಸದ 12 ಸ್ಲೀಪರ್ ಕೋಚ್‌ಗಳು ಮತ್ತು 8 ಜನರಲ್ ಕೋಚ್‌ಗಳು ಇರಲಿದ್ದು, 1,800 ಪ್ರಯಾಣಿಕರು ವಂದೇ ಸಾಧಾರಣ್ ರೈಲಿನಲ್ಲಿ ಆರಾಮದಾಯವಾಗಿ ಪ್ರಯಾಣಿಸಬಹುದು. ಈ ರೈಲು 2 ಲಗೇಜ್ ಬೋಗಿಗಳನ್ನು ಒಳಗೊಂಡಿರುತ್ತದೆ.
ವಂದೇ ಸಾಧಾರಣ್ ರೈಲು 130 kmph ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ವೇಗವನ್ನು 110 kmph ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ. ಇದು ನಾನ್ ಎಸಿ ರೈಲು ಆಗಿದ್ದು, ಬಯೋ-ವ್ಯಾಕ್ಯೂಮ್ ಟಾಯ್ಲೆಟ್, ಎಲ್‌ಇಡಿ ಲೈಟ್, ಫ್ಯಾನ್, ಪ್ರಯಾಣಿಕರ ಮಾಹಿತಿ ಒದಗಿಸುವ ವ್ಯವಸ್ಥೆ (Passenger Information System) ಮೊಬೈಲ್ ಚಾರ್ಜಿಂಗ್ ಪೋರ್ಟ್ ಹೊಂದಿರುತ್ತದೆ.

ಆದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಂತೆ ಸ್ವಯಂಚಾಲಿತ ಬಾಗಿಲು ಹಾಗೂ ಪ್ಯಾಂಟ್ರಿ ವ್ಯವಸ್ಥೆಯಿರುವುದಿಲ್ಲ ಎಂದು ಹೇಳಲಾಗಿದೆ. ಹೊಸ ವಂದೇ ಸಾಧಾರಣ್ ರೈಲು ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿತ್ತು. ನವೆಂಬರ್ 8ರಂದು ಅಹಮದಾಬಾದ್ (Ahmedabad) - ಮುಂಬೈ (Mumbai) ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು.
ಈ ವೇಳೆ, ವಂದೇ ಸಾಧಾರಣ್ ಎಕ್ಸ್‌ಪ್ರೆಸ್ ಗಂಟೆಗೆ 130 ಕಿ.ಮೀ ವೇಗದಲ್ಲಿ ಸಂಚರಿಸಿದೆ ಎಂದು ವರದಿಯಾಗಿತ್ತು. ಮುಂಬೈ - ಅಹಮದಾಬಾದ್ ಮಾರ್ಗದ ಹೊರತಾಗಿ, ಮುಂಬೈ - ನವದೆಹಲಿ, ಪಾಟ್ನಾ - ನವದೆಹಲಿ, ಹೌರಾ - ನವದೆಹಲಿ, ಹೈದರಾಬಾದ್ - ನವದೆಹಲಿ, ಮತ್ತು ಎರ್ನಾಕುಲಂ - ಗುವಾಹಟಿ ಮಾರ್ಗದಲ್ಲಿ ಈ ರೈಲು ಸಂಚರಿಸುವ ಸಾಧ್ಯತೆಯಿದೆ.

ದೇಶಾದ್ಯಂತ ರೈಲ್ವೆ ಇಲಾಖೆಯು 30 ಮಾರ್ಗಗಳಲ್ಲಿ ವಂದೇ ಸಾಧಾರಣ್ ರೈಲು ಓಡಾಟವನ್ನು ಆರಂಭಿಸಲು ನಿರ್ಧರಿಸಿದ್ದು, ಅದಕ್ಕಾಗಿ 400 ರೈಲುಗಳನ್ನು ಚೆನ್ನೈ ಕೋಚ್ ಇಂಟಿಗ್ರೇಟೆಡ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ ಎಂಬ ವಿವರಗಳು ಲಭ್ಯವಾಗಿವೆ. ಈ ರೈಲು ಕರ್ನಾಟಕದ ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಕಲಬುರಗಿ-ಬೆಂಗಳೂರು, ಶಿವಮೊಗ್ಗ-ಬೆಂಗಳೂರು, ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಂದೇ ಸಾಧಾರಣ್ ಚಲಿಸಿದರೆ ಪ್ರಯಾಣಿಸಿದರೆ ದೊಡ್ಡ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನು, ರೈಲ್ವೆ ಇಲಾಖೆಯು 'ವಂದೇ ಭಾರತ್ ಸ್ಲೀಪರ್' ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 2024ರ ಫೆಬ್ರವರಿ ವೇಳೆಗೆ ಸಂಚಾರ ಪ್ರಾರಂಭಿಸುವ ನೀರಿಕ್ಷೆ ಇದೆ. ಈ ರೈಲು, 857 ಬರ್ತ್‌ಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಸಮೀಪದ ನಗರಗಳ ಪ್ರಯಾಣಕ್ಕೆ ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಪಿಡಿಸುತ್ತಿದ್ದು, ಇದು 12 ಬೋಗಿಗಳನ್ನು ಹೊಂದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications