Electric scooters: ಬಡವರು ಇ-ಸ್ಕೂಟರ್ ಖರೀದಿಸಲು ಸರ್ಕಾರವೇ ರೂ.40,000 ಕೊಡುತ್ತದೆ.. ಎಲ್ಲಿ?
ದೇಶದಲ್ಲಿ 2070ರ ವೇಳೆಗೆ ಸಂಪೂರ್ಣ ಶೂನ್ಯ ಹೊರಸೂಸುವಿಕೆಯ ವಾಹನಗಳು ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಯಸಿದೆ. ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದು, ವಿವಿಧ ರಾಜ್ಯ ಸರ್ಕಾರಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತೆರಿಗೆ ರಿಯಾಯಿತಿ ಸೇರಿದಂತೆ ಹಲವು ಕೊಡುಗೆಯನ್ನು ನೀಡುತ್ತಿವೆ.
ಎಲೆಕ್ಟ್ರಿಕ್ ಸ್ಕೂಟರ್ (Electric scooter) ಖರೀದಿಸುವ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ರೂ.40,000 ಆರ್ಥಿಕ ನೆರವು (Financial Assistance) ನೀಡುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (CM Mohan Yadav) ಭಾನುವಾರ ಹೇಳಿದ್ದಾರೆ. ಈ ಕುರಿತು ಗ್ವಾಲಿಯರ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಘೋಷಣೆ ಮಾಡಿದ್ದಾರೆ.

ಕಾರ್ಮಿಕರು ಮರಣ ಹೊಂದಿದರೆ ಹಾಗೂ ದೈಹಿಕವಾಗಿ ಅಸಮರ್ಥರಾದ ಸಂದರ್ಭದಲ್ಲಿ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ರೂ.1 ಲಕ್ಷದಿಂದ ರೂ.4 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕೌಶಲ್ಯರಹಿತ ಕಾರ್ಮಿಕರ ಮಾಸಿಕ ವೇತನವನ್ನು ರೂ.11,450, ಅರೆ ಕೌಶಲ್ಯ ಕಾರ್ಮಿಕರ ತಿಂಗಳ ಸಂಬಳವನ್ನು ರೂ.12,446 ಹಾಗೂ ಕೃಷಿ ಕಾರ್ಮಿಕರ ವೇತನವನ್ನು ರೂ.9,160ಕ್ಕೆ ಅಧಿಕಗೊಳಿಸಲಾಗಿದೆ ಎಂದು ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಅಲ್ಲಿನ ಸರ್ಕಾರವು ಈಗಾಗಲೇ ದೊಡ್ಡಮಟ್ಟದ ಸಬ್ಸಿಡಿಯನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರ (Karnataka Government) ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಕಳೆದ ಜನವರಿ ತಿಂಗಳಲ್ಲಿ ತೆರಿಗೆ ರಿಯಾಯಿತಿಯನ್ನು ಘೋಷಣೆ ಮಾಡಿತ್ತು.

ಹಳೆಯ ವಾಹನಗಳನ್ನು ಗುಜರಿಗೆ (ಸ್ಕ್ರ್ಯಾಪ್) ಹಾಕಿ, ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರೂ.1,000 ದಿಂದ ರೂ.40,000 ತೆರಿಗೆ ವಿನಾಯಿತಿಯನ್ನು ನೀಡಲಾಗುವುದು ಎಂದು ತಿಳಿಸಿತ್ತು. ರಾಜ್ಯದಲ್ಲಿ ನೂತನ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ಈ ಹಿಂದೆ ವರದಿಯಾಗಿತ್ತು.
ಫೆಬ್ರವರಿ 16ರಂದು ಮಂಡಿಸಿದ್ದ ರಾಜ್ಯ ಬಜೆಟ್ನಲ್ಲಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಿಎಂ ಸಿದ್ದರಾಮಯ್ಯ ಅವರು ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದರು. ರಾಜ್ಯದಲ್ಲಿ 2,500 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ರೂ.35 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.
ಇನ್ನು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಕಾರ್ಮಿಕರಿಗೆ ರೂ.40,000 ಆರ್ಥಿಕ ನೆರವು ನೀಡುವುದಾಗಿ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಅವರು ಘೋಷಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಬಡವರು ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಸಾಧ್ಯವಾಗುತ್ತದೆ. ಈ ರೀತಿಯ ಯೋಜನೆಯನ್ನು ಎಲ್ಲ ಸರ್ಕಾರಗಳು ಜಾರಿಗೊಳಿಸಿದರೆ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಬರುವ ದಿನಗಲ್ಲಿ ದೇಶದ ಎಲ್ಲೆಲ್ಲಿ ಇಂತಹ ಕಾರ್ಯಕ್ರಮಗಳು ಅನುಷ್ಠಾನವಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications