ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ 23ರ ಯುವತಿ.. ಹಾರಿಹೋಯ್ತು ಪ್ರಾಣಪಕ್ಷಿ: ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಗಳಿಸಲು ಯುವ ಜನರು ರೀಲ್ಸ್ ಮೊರೆ ಹೋಗುತ್ತಾರೆ. ಅದಕ್ಕಾಗಿ ಎಂತಹ ದುಃಸ್ಸಾಹಸಕ್ಕೆ ಬೇಕಾದರೂ ಕೈ ಹಾಕುತ್ತಾರೆ. ಕೆಲವೊಮ್ಮೆ ತಮ್ಮ ಪ್ರಾಣಕ್ಕೂ ಕುತ್ತು ತಂದುಕೊಳ್ಳುತ್ತಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿಯೂ ಅಂತಹದೇ ಘಟನೆ ನಡೆದಿದ್ದು, ಇನ್‌ಸ್ಟಾಗ್ರಾಮ್ (Instagram) ರೀಲ್ಸ್ ಚಿತ್ರೀಕರಣದ ವೇಳೆ 23 ವರ್ಷದ ಯುವತಿಯೊಬ್ಬಳು, ಕಾರು ಬೆಟ್ಟದಿಂದ ಉರುಳಿ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆ. ಸದ್ಯ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯ ದಾರುಣ ಅಂತ್ಯವನ್ನು ಕಂಡು ನೆಟ್ಟಿಗರು ಮರುಕಪಟ್ಟಿದ್ದಾರೆ.
ಸಂಭಾಜಿನಗರದ ಸ್ಥಳೀಯ ನಿವಾಸಿಯಾಗಿರುವ ಶ್ವೇತಾ ದೀಪಕ್ ಸುರ್ವಾಸೆ ಅವರು, ಟೊಯೊಟಾ ಎಟಿಯೋಸ್ (Toyota Etios) ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಆಕಸ್ಮಿಕವಾಗಿ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದಾರೆ. ಹಿಮ್ಮುಖವಾಗಿ ಕಾರು ವೇಗವಾಗಿ ಚಲಿಸಿದ್ದು, ಬೆಟ್ಟದಿಂದ ಉರುಳಿದೆ. ಘಟನೆಯ ಕುರಿತಂತೆ ಮಾಹಿತಿ ದೊರೆತ ಕೊಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರನ್ನು ಮೇಲೆತ್ತಿದ್ದಾರೆ. ಆ ಬಳಿಕ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಡ್ರೈವಿಂಗ್ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲದ ಶ್ವೇತಾ, ತನ್ನ ಸ್ನೇಹಿತ ಶಿವರಾಜ್ ಸಂಜಯ್ ಮುಳೆಯೊಂದಿಗೆ ಶೂಲಿಭಂಜನದ ದತ್ತಧಾಮ ದೇವಸ್ಥಾನ ಸಮೀಪ ರೀಲ್ ಚಿತ್ರೀಕರಣ ಮಾಡಲು ಬಂದಿದ್ದರು ಎನ್ನಲಾಗಿದೆ. ಆಗ ಈ ಅಪಘಾತ ಸಂಭವಿಸಿದೆ. ಮಳೆಗಾಲದ ಸಂದರ್ಭದಲ್ಲಿ ದೇಗುಲದ ಬಳಿ, ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಹಲವು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೆಟ್ಟದಲ್ಲಿ ಗಟ್ಟಿಮುಟ್ಟಾದ ತಡೆಗೋಡೆ ಇದ್ದಿದ್ದರೆ, ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.
ನೀವು ಕಾರು ಚಾಲನೆ ಮಾಡುವುದನ್ನು ಕಲಿಯುತ್ತಿದ್ದೀರಾ.. ಈ ಅಂಶಗಳನ್ನು ಗಮನಿಸಿ: ನುರಿತ ಮಾರ್ಗದರ್ಶಕರ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿ ಡ್ರೈವಿಂಗ್ ಕಲಿಯಬೇಕು. ಕಾರಿನ ಕುರಿತಂತೆ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಂಡ ನಂತರವೇ ಹತ್ತಬೇಕು. ಉದಾಹರಣೆಗೆ ಎಕ್ಸಲೇಟರ್, ಬ್ರೇಕ್, ಕ್ಲಚ್, ರಿವರ್ಸ್ ಗೇರ್ ಮುಂತಾದವುಗಳ ಬಗ್ಗೆ ಚೆನ್ನಾಗಿ ಅರಿಯಬೇಕು. ಆ ಬಳಿಕ, ನೀವು ಕಾರಿನಲ್ಲಿ ಕುಳಿತು ಡ್ರೈವಿಂಗ್ ಮಾಡುವುದನ್ನು ಅಭ್ಯಸಿಸಬಹುದು.

ಡ್ರೈವಿಂಗ್ ಮಾಡುವುದನ್ನು ಕಲಿಯುವಾಗ ಸಾರ್ವಜನಿಕ ರಸ್ತೆಗಳಲ್ಲಿ ಕಾರನ್ನು ಎಂದಿಗೂ ಓಡಿಸಬೇಡಿ. ಮೊದಲಿಗೆ ಖಾಲಿಯಿರುವ ವಿಶಾಲ ಮೈದಾನದಲ್ಲಿ ಚಾಲನೆ ಮಾಡುವುದನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡಿರಿ. ನಿಮ್ಮ ಚಾಲನಾ ಕೌಶಲ್ಯದ ಬಗ್ಗೆ ಸಂಪೂರ್ಣವಾಗಿ ವಿಶ್ವಾಸ ಮೂಡಿದಾಗ ಅಗತ್ಯ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)ಯೊಂದಿಗೆ ಕಾರನ್ನು ಸಾರ್ವಜನಿಕ ರಸ್ತೆಗೆ ತೆಗೆದುಕೊಂಡು ಹೋಗಿ ಓಡಿಸಿರಿ.
ಅಪಘಾತ ತಡೆಯುವುದು ಹೇಗೆ: ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು. ಇದರೊಟ್ಟಿಗೆ ಹೆದ್ದಾರಿಯಲ್ಲಿ ನಿಗದಿತ ವೇಗಮಿತಿಯಲ್ಲಿ ವಾಹನಗಳನ್ನು ಓಡಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕುವುದನ್ನು ಮರೆಯಬೇಡಿ. ಮಧ್ಯಪಾನ ಅಥವಾ ಫೋನ್‌ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಚಲಾಯಿಸಬೇಡಿ.
ಭಾರತದಲ್ಲಿ ರಸ್ತೆ ಅಪಘಾತ ಸಂಬಂಧಿತ ಸಾವಿನ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCBR) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2021ರಲ್ಲಿ ದೇಶದಲ್ಲಿ ಗಂಟೆಗೆ 46 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸುಮಾರು 17 ಸಾವುಗಳು ದಾಖಲಾಗಿವೆ. ಆ ವರ್ಷ ಒಟ್ಟು 4,03,116 ರಸ್ತೆ ಅಪಘಾತಗಳು ನಡೆದಿದ್ದು, 3,71,884 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸರಿ ಸುಮಾರು 1,55,622 ಮೃತಪಟ್ಟಿದ್ದಾರೆ ಎಂದು ಅದೇ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications