ಸುರಕ್ಷತೆಯಲ್ಲಿ 'ಮಹೀಂದ್ರಾ ಸ್ಕಾರ್ಪಿಯೋ ಎನ್' ಉತ್ತಮ: ಜಖಂಗೊಂಡರೂ ಮಾಜಿ ಶಾಸಕನ ಜೀವ ಉಳಿಯಿತು
ದೇಶದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಕಾರಣಗಳಿಗೆ ರಸ್ತೆ ಅಪಘಾತಗಳು ನಡೆಯುತ್ತಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಾಹನ ತಯಾರಕ ಕಂಪನಿಗಳು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುತ್ತವೆ. ಇದೀಗ, ಮಹೀಂದ್ರಾದ ಈ ಎಸ್‌ಯುವಿ ಮತ್ತೊಮ್ಮೆ ಸೆಫ್ಟಿಯಲ್ಲಿ ತಾನೇ ಉತ್ತಮವೆಂದು ಸಾಬೀತುಪಡಿಸಿದ್ದು, ಇಲ್ಲಿದೆ ವಿವರ.
ನೂತನ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‌ಯುವಿಗಳು, ವಿತರಣೆ ಆರಂಭವಾದಾಗಿನಿಂದಲೂ ಹಲವಾರು ಅಪಘಾತಗಳಿಗೆ ತುತ್ತಾಗಿವೆ. ಬಿಹಾರದಲ್ಲೂ ಅಂತಹದ್ದೇ ಮತ್ತೊಂದು ಘಟನೆ ರಾಷ್ಟ್ರೀಯ ಹೆದ್ದಾರಿ -77ರಲ್ಲಿ ನಡೆದಿದೆ. ಸೀತಾಮರ್ಹಿ ಪಟ್ಟಣಕ್ಕೆ ಮಾಜಿ ಶಾಸಕಯೊಬ್ಬರು ತಮ್ಮ ಸಿಬ್ಬಂದಿಯೊಂದಿಗೆ ಸ್ಕಾರ್ಪಿಯೊದಲ್ಲಿ ತೆರಳುತ್ತಿದ್ದರು. ಆದರೆ, ಇದ್ದಕ್ಕಿದಂತೆ ಕಾರಿನ ಮುಂಭಾಗಕ್ಕೆ ವೇಗವಾಗಿ ಬೈಕ್ ವೊಂದು ಬರುತ್ತದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಸ್ಕಾರ್ಪಿಯೊ ನಿಯಂತ್ರಣ ಕಳೆದಕೊಂಡು ರಸ್ತೆ ತಡೆಗೋಡೆಗೆ ಅಪ್ಪಳಿಸುತ್ತದೆ.

ಅಪಘಾತ ಎಷ್ಟು ಭೀಕರವಾಗಿ ಸಂಭವಿಸಿದೆ ಅಂದರೆ, ಗುದ್ದಿದ ರಭಸಕ್ಕೆ ಮಹೀಂದ್ರಾ ಸ್ಕಾರ್ಪಿಯೊ ಎನ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜುಗೊಂಡಿದೆ. ಆದರೆ, ಈ ಎಸ್‌ಯುವಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದ ಕಾರಣ, ಮಾಜಿ ಶಾಸಕ ಹಾಗೂ ಜೊತೆಯಲ್ಲಿದ್ದವರೆಲ್ಲರೂ ಸಣ್ಣ ಪುಟ್ಟ ಗಾಯಗಳಾಗಿ ಸಾವಿನ ದವಡೆಯಿಂದ ಸುಲಭವಾಗಿ ಬಚಾವ್ ಆಗಿದ್ದಾರೆ. ಆಕ್ಸಿಡೆಂಟ್ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಅತ್ಯಂತ ಸುರಕ್ಷತಾ ಎಸ್‌ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಒಂದಾಗಿದೆ. ಇದು ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34 ಅಂಕಗಳಿಗೆ 29.25 ಅಂಕಗಳನ್ನು ಗಳಿಸಿ, 5 ಸ್ಟಾರ್ ರೇಟಿಂಗ್ ಪಡೆದಿದೆ. ಅದೇಕೋ ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ ಕೇವಲ 28.93 ಅಂಕಗಳನ್ನು ಪಡೆದು 3 ಸ್ಟಾರ್ ರೇಟಿಂಗ್ ಗಳಿಸಿದೆ.
ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ ಎಂಬುದನ್ನು ನೋಡಿವುದಾದರೆ, ಇದು 6 ಏರ್‌ಬ್ಯಾಗ್‌ಗಳು, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಶಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಹಾಗೂ ರೇರ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ಸ್ ಸೇರಿದಂತೆ ಹತ್ತು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಹಾಗೂ ರೂಪಾಂತರಗಳ ಬಗ್ಗೆ ಮಾತನಾಡುವುದಾದರೆ, ಕೆಲದಿನಗಳ ಹಿಂದಷ್ಟೇ ಈ ಎಸ್‌ಯುವಿಯ Z6 ರೂಪಾಂತರದ ವಿತರಣೆಯನ್ನು ಮೊದಲ ಗ್ರಾಹಕ ಪಡೆದುಕೊಂಡಿದ್ದಾರೆ. ಸ್ಕಾರ್ಪಿಯೋ ಎನ್ 2022ರಲ್ಲಿ 6 ಹಾಗೂ 7 ಆಸನ ವ್ಯವಸ್ಥೆಯಲ್ಲಿ ಒಟ್ಟು 5 ರೂಪಾಂತರಗಳಲ್ಲಿ ಬಿಡುಗಡೆಯಾಗಿತ್ತು. Z2 ಎಂಟ್ರಿ ಲೆವೆಲ್ ವೇರಿಯೆಂಟ್ ಆಗಿದ್ದು, Z8 ಟಾಪ್ ಎಂಡ್ ಮಾದರಿಯಾಗಿದ್ದು, ರೂ.12.74 ಲಕ್ಷದಿಂದ ರೂ.24.05 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 2.2-ಲೀಟರ್ ಡೀಸೆಲ್ (132 PS ಪವರ್, 300 Nm ಪೀಕ್ ಟಾರ್ಕ್), 2 ಲೀಟರ್ ಟರ್ಬೊ ಪೆಟ್ರೋಲ್ (200 PS ಪವರ್, 370 Nm ಪೀಕ್ ಟಾರ್ಕ್) ಎಂಜಿನ್ ಪಡೆದಿದ್ದು, 6-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.
ಈ ಎಸ್‌ಯುವಿ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಕೆಲವು ಮಾದರಿಗಳನ್ನು ವಿತರಣೆ ಪಡೆಯಲು ಗ್ರಾಹಕರು, 56 ರಿಂದ 58 ವಾರಗಳು ಕಾಯಲೇಬೇಕು. ಜೊತೆಗೆ ಭಾರತದ ಮಾರುಕಟ್ಟೆಯಲ್ಲಿ ಕಳೆದೊಂದು ದಶಕದಿಂದಲ್ಲೂ ಸ್ಕಾರ್ಪಿಯೋ ಎನ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದ್ದು, ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಖರೀದಿದಾರರಿಗೆ ಇಷ್ಟವಾಗಿದೆ.


Click it and Unblock the Notifications