ಮಾರುತಿ 800 ಶಿಕಾರಿ ಮಾಡಲು ಹೊರಟ ಮಮ್ಮುಟ್ಟಿ
2012ರಲ್ಲಿ 'ಶಿಕಾರಿ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹತ್ತಿರವಾಗಿರುವ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, ಭಾರತದ ಮೊದಲ ಮಾರುತಿ 800 ಕಾರನ್ನು ಖರೀದಿಸಲು ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ತಮ್ಮ ಕಾರು ಸಂಗ್ರಹಾಲಯದಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿರುವ ಮಮ್ಮುಟ್ಟಿ ಅವರಿಗೆ ದೇಶದ ಮೊದಲ ಮಾರುತಿ 800 ತಮ್ಮ ದಾಗಿಸಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಹಾಗಿದ್ದರೂ ಮಾರುತಿ 800 ಶೋಚನೀಯ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಬೆನ್ನಲ್ಲೇ ಅದೃಷ್ಟ ಖುಲಾಯಿಸಿದ್ದು, ಮಮ್ಮುಟ್ಟಿ ಜೊತೆಗೆ ಇನ್ನಿತರ ಮೂಲಗಳಿಂದಲೂ ಬೇಡಿಕೆ ವ್ಯಕ್ತವಾಗಿದೆ.

ಮಮ್ಮುಟ್ಟಿ ಕಾರು ಅಭಿರುಚಿಗೆ ಬಗ್ಗೆ ಚರ್ಚಿಸುವುದಾದರೆ '369' ಅದೃಷ್ಟ ಸಂಖ್ಯೆಯ ಕಾರುಗಳನ್ನೇ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಈ ವಿಶಿಷ್ಟ ನಂಬರ್ ಪ್ಲೇಟ್ ಪಡೆಯುವುದಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.

ಮಲಯಾಳಂ ಚಿತ್ರರಂಗದ ಬಿಗ್ 'ಎಂ' ನಟರ ಪೈಕಿ ಓರ್ವರಾಗಿರುವ 63ರ ಹರೆಯದ ಮಮ್ಮುಟ್ಟಿ ಈಗ ಮೊದಲ ಮಾರುತಿ 800 ಕಾರಿನ ಮೇಲೆ ಕಣ್ಣಾಯಿಸಿದ್ದಾರೆ. ಇದನ್ನು 1983ನೇ ಇಸವಿಯಲ್ಲಿ ಹರ್ಪಾಲ್ ಸಿಂಗ್ ಎಂಬವರಿಗೆ ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಕೀಲಿ ಹಸ್ತಾಂತರಿಸಿದ್ದರು.

ಆದರೆ ಇತ್ತೀಚೆಗಿನ ದಿನಗಳಲ್ಲಿ ಆಶ್ರಯದಾತರಿಲ್ಲದೆ ತುಕ್ಕು ಹಿಡಿಯುತ್ತಿದ್ದ ಮಾರುತಿ 800 ಬಗ್ಗೆ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಿರಿಯ ನಟ ಹಾಗೂ ಅತ್ಯುತ್ತಮ ನಟನೆಗಾಗಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಮ್ಮುಟ್ಟಿ ಉತ್ಸುಕತೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಮ್ಮುಟ್ಟಿ, "ಇಂದೊಂದು ಸಾಮಾನ್ಯ ಕಾರಲ್ಲ. ಇದು ಜನಸಾಮಾನ್ಯರಲ್ಲಿ ಕ್ರಾಂತ್ರಿಕಾರಿ ಬದಲಾವಣೆಯನ್ನುಂಟುಮ ಮಾಡಿರುವ ಕಾರು. ನಾನೀಗಲೂ ಲಕ್ಕಿ ಡ್ರಾದಲ್ಲಿ ಹರ್ಪಾಲ್ ಸಿಂಗ್ ಅವರಿಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಕಾರು ಹಸ್ತಾಂತರಿಸಿರುವ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

"ಇದೀಗ ಮಾರುತಿ 800 ಕಾರನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾಕೆಂದರೆ ಇದೇ ಕಾರಿನಿಂದಲೇ ಭಾರತ ತನ್ನ ಸಂಚಾರವನ್ನು ಆರಂಭಿಸಿತ್ತು ಎಂಬುದು ಮುಂದಿನ ಪೀಳಿಗೆಯವರಿಗೆ ಗೊತ್ತಾಗಬೇಕು" ಎಂದಿದ್ದಾರೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಮಮ್ಮುಟ್ಟಿ ಅವರ ಮೊದಲ ಕಾರು ಸಹ ಮಾರುತಿಯದ್ದೇ ಆಗಿದೆ. ಅಲ್ಲದೆ ಈಗ ತಮ್ಮ ಸಂಗ್ರಹಾಲಯದಲ್ಲಿ ಅನೇಕ ಐಷಾರಾಮಿ ಕಾರುಗಳನ್ನು ಇರಿಸಿಕೊಂಡಿದ್ದಾರೆ.

ಮಮ್ಮುಟ್ಟಿ ಕಾರುಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಜಾಗ್ವಾರ್ ಎಕ್ಸ್ ಜೆ-ಎಲ್ ನಿಂದ ಆರಂಭಿಸಿ ಬಿಎಂಡಬ್ಲ್ಯು 530ಡಿ, ಬಿಎಂಡಬ್ಲ್ಯು 525 ಡಿ, ಫೋಕ್ಸ್ ವ್ಯಾಗನ್ ಪಸ್ಸಾಟ್ ಎಕ್ಸ್2, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್, ಆಡಿ ಎ7 ಸ್ಪೋರ್ಟ್ಸ್ ಬ್ಯಾಕ್, ಆಡಿ ಕ್ಯೂ7, ಸ್ಕೋಡಾ, ಆಡಿ ಎ8, ಟೊಯೊಟಾ ಫಾರ್ಚ್ಯುನರ್, ಮರ್ಸಿಡಿಸ್ ಬೆಂಝ್ ಎಎಂಜಿ, ಟೊಯೊಟಾ ಲ್ಯಾಂಡ್ ಕ್ರೂಸರ್, ಮಿನಿ ಕೂಪರ್, ಬಿಎಂಡಬ್ಲ್ಯು ಎಂ3 ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಒಟ್ಟಿನಲ್ಲಿ ಮಲಯಾಳಂ ಸೂಪರ್ ಸ್ಟಾರ್ ಆಸೆ ನನಸಾದಿತೇ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ದೊರಕಲಿದ್ದು, ದೇಶದ ಮೊದಲ ಮಾರುತಿ 800 ಕಾರು ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications