ರೋಡ್ ಸೇಫ್ಟಿ AI ಕ್ಯಾಮೆರಾ ಫೋಟೋ: ಗಂಡ - ಹೆಂಡತಿ ದೂರ.. ಏನಾಯ್ತು?
ಕೇರಳ ರಾಜ್ಯದ ರಸ್ತೆಗಳಲ್ಲಿ ಅಳವಡಿಸಲಾಗಿರುವ 'ರೋಡ್ ಸೇಫ್ಟಿ ಕ್ಯಾಮೆರಾ'ಗಳು ವಿವಾದದಿಂದ ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿವೆ. ಇದೀಗ, ಗಂಡ ಹೆಂಡತಿ ನಡುವೆ ಜಗಳಕ್ಕೆ ಕಾರಣವಾಗಿ ಅವರಿಬ್ಬರೂ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅಂದುಕೊಂಡಿದ್ದೀರಾ ಹಾಗಾದ್ರೆ ಈ ಸ್ಟೋರಿ ಓದಿ.
ವ್ಯಕ್ತಿಯೊಬ್ಬನಿಂದ ಟ್ರಾಫಿಕ್ ರೋಲ್ಸ್ ಉಲ್ಲಂಘನೆ ಸಂಬಂಧ, ಅತ್ಯಾಧುನಿಕ ಅಥವಾ ಕೃತಕ ಬುದ್ದಿಮತ್ತೆ ಕ್ಯಾಮೆರಾ (AI)ದಿಂದ ತೆಗೆದ ಫೋಟೋಗಳು ಹಾಗೂ ವಿವರವನ್ನು ಒಳಗೊಂಡ ನೋಟಿಸ್ ಅನ್ನು ಸಾರಿಗೆ ಇಲಾಖೆ ಕಳುಹಿಸಿದೆ. ಇದು ಆತನ ಕುಟುಂಬದಲ್ಲಿ ಸಮಸ್ಯೆ ಉಂಟು ಮಾಡಿದೆ. ಅಂತಿಮವಾಗಿ, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಂಧನಕ್ಕೂ ಕಾರಣವಾಗಿದೆ.

ಇಡುಕ್ಕಿ ಮೂಲದ ವ್ಯಕ್ತಿಯೊಬ್ಬ ಏಪ್ರಿಲ್ 25ರಂದು ಹೆಲ್ಮೆಟ್ ಧರಿಸದೆ, ತನ್ನ ಸ್ನೇಹಿತೆಯನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಆದರೆ, ಈ ವಾಹನ ಆತನ ಪತ್ನಿ ಹೆಸರಿನಲ್ಲಿ ನೋಂದಣಿ ಆಗಿದ್ದು, ಸಂಚಾರಿ ನಿಯಮದ ಉಲ್ಲಂಘನೆಯ ವಿವರ ಹಾಗೂ ಪಾವತಿಸಬೇಕಾದ ದಂಡದ ಮೊತ್ತದ ಬಗ್ಗೆ ಆಕೆಯ ಮೊಬೈಲ್ ಫೋನ್‌ಗೆ ಸಾರಿಗೆ ಇಲಾಖೆಯಿಂದ ಮೆಸೇಜ್ ಬಂದಿದೆ.
ಇಲ್ಲಿಂದ ನೋಡಿ.. ಅಸಲಿ ಆಟ ಶುರುವಾಗಿದೆ. ಮೆಸೇಜ್ ನೋಡಿದ ಹೆಂಡತಿ, ಗಂಡನಿಗೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತ ಮಹಿಳೆ ಯಾರೆಂದು ಪ್ರಶ್ನೆ ಮಾಡಿದ್ದಾಳೆ. 'ಆ ಮಹಿಳೆ ನನ್ನ ಸ್ನೇಹಿತೆಯಷ್ಟೇ. ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಸ್ಕೂಟರ್‌ನಲ್ಲಿ ಕೇವಲ ಲಿಫ್ಟ್ ಕೊಟ್ಟೆ' ಎಂದು ಆತ ಹೇಳಿದ್ದಾನೆ. ಆದರೆ, ಹೆಂಡತಿ ಇದನ್ನು ನಂಬಿಲ್ಲ. ಅಲ್ಲಿಂದ ವಾಗ್ವಾದಗಳು ನಡೆದು ಇಬ್ಬರ ನಡುವೆ ದೊಡ್ಡ ಜಗಳವಾಗಿದೆ.
ಮೇ 5ರಂದು ಕರಮನ ಪೊಲೀಸ್ ಠಾಣೆಗೆ ತೆರಳಿದ ಆಕೆ, ತನ್ನ ಹಾಗೂ ಮೂರು ವರ್ಷದ ಮಗುವಿನ ಮೇಲೆ ಗಂಡ ದೌರ್ಜನ್ಯ ವೆಸಗಿದ್ದಾನೆ ಎಂದು ಕಂಪ್ಲೇಟ್ ನೀಡಿದ್ದಾಳೆ. ದೂರನ್ನು ಆಧರಿಸಿ, ಪೊಲೀಸರು ಆತನನ್ನು ವಶಕ್ಕೆ ಪಡೆದು, ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಸದ್ಯ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಇನ್ನು, ಈ ಘಟನೆ ಕೆಲವರಿಗೆ ಅಚ್ಚರಿ ತಂದಿದೆ. ರೋಡ್ ಸೇಫ್ಟಿ ಯೋಜನೆಯಾದ 'ಸೇಫ್ ಕೇರಳ' ಭಾಗವಾಗಿ ರಸ್ತೆಗಳಲ್ಲಿ ಕ್ಯಾಮೆರಾ ಹಾಕುವ ಕುರಿತಂತೆ ಕೇರಳದಲ್ಲಿ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಕ್ಯಾಮೆರಾ ಅಳವಡಿಸುವ ವಿಚಾರದಲ್ಲಿ ಭಾರೀ ಹಗರಣ ನಡೆದಿದೆ ಎಂದು ಆಡಳಿತರೂಢ ಎಲ್‌ಡಿಎಫ್ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಟ್ರಾಫಿಕ್ ರೋಲ್ಸ್ ಉಲ್ಲಂಘಿಸಿದ ವಾಹನ ಹಾಗೂ ಅದರ ಚಾಲಕನ ಫೋಟೋವನ್ನು AI ಕ್ಯಾಮೆರಾಗಳು ಸೆರೆಹಿಡಿದು, ಸಾರಿಗೆ ಇಲಾಖೆಯ ಕಂಟ್ರೋಲ್ ರೂಮ್ ಗೆ ಕಳುಹಿಸುತ್ತವೆ. ಇವು ಸೌರಶಕ್ತಿ ಚಾಲಿತವಾಗಿದ್ದು, 4G ಕನೆಕ್ಟಿವಿಟಿ ಸಿಮ್ ಬಳಸಿ, ಡೇಟಾವನ್ನು ವರ್ಗಾಯಿಸಲಾಗುತ್ತದೆ. ಆರು ತಿಂಗಳವರೆಗಿನ ಉಲ್ಲಂಘನೆ ದೃಶ್ಯಾವಳಿ ಸಂಗ್ರಹಿಸುವ ವ್ಯವಸ್ಥೆ ಇದರಲ್ಲಿದ್ದು, ಒಂದು ದಿನದಲ್ಲಿ ಬರೋಬ್ಬರಿ 30,000 ದಂಡದ ನೋಟಿಸ್ ಕಳುಹಿಸಬಹುದು ಎಂದು ಕೇರಳ ಸಾರಿಗೆ ಇಲಾಖೆ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications