ಕುಟುಂಬದ ಮೊದಲ ಕಾರನ್ನು ಮರಳಿ ಪಡೆದ ಯುವಕ: ಪ್ರೇಮ ಕಥೆಯನ್ನೂ ಮೀರಿಸಿದ ಕಾರ್ ಕಥೆ
ಕೆಲವು ಸಂಭಂಧಗಳೇ ಹಾಗೆ, ನಾವೆಷ್ಟೇ ದೂರ ಹೋದರೂ, ಒಂದಲ್ಲಾ ಒಂದು ರೀತಿಯಲ್ಲಿ ಮತ್ತೆ ಅದನ್ನು ನಾವು ಮರಳಿ ಪಡೆದೇ ತೀರುತ್ತೇವೆ. ಇದು ಮನುಷ್ಯರ ಬಗ್ಗೆಯಾದರೂ ಸೈ, ಅಥವಾ ವಾಹನಗಳ ಕುರಿತಾದರೂ ಸರಿ. ಈ ಮೇಲಿನ ಮಾತು ಇವೆರಡಕ್ಕೂ ಅನ್ವಯಿಸುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು.
ಕೆಲವರಿಗೆ ವಾಹನಗಳೆಂದರೆ ಅದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಇರುವ ಒಂದು ಸಾಧನ ಅಷ್ಟೇ. ಆದರೆ ಇನ್ನು ಕೆಲವರಿಗೆ ಅವರ ಬಳಿಯಿರುವ ವಾಹನವೇ ಸರ್ವಸ್ವವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ, ಇಪ್ಪತ್ತು ವರ್ಷಗಳ ಹಿಂದೆ ತನ್ನ ಕುಟುಂಬ ಖರೀಧಿಸಿ ಹತ್ತು ವರ್ಷಗಳ ಹಿಂದೆ ಮಾರಾಟ ಮಾಡಿದ್ದ ಕಾರನ್ನು ಮರಳಿ ಪಡೆದಿರುವ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಂದಿನ ಲೇಖನ ಆ ಕುರಿತಾಗಿದೆ.

ಇದೀಗ ತಮ್ಮ ಕುಟುಂಬದ ಮೊದಲ ಕಾರ್ ಅನ್ನು ಮರಳಿ ಪಡೆಯುವಲ್ಲಿ ಸಫಲವಾದ ವ್ಯಕ್ತಿ, ಅದರ ಕುರಿತಾಗಿನ ತನ್ನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಈ ಕಥೆ ಆರಂಭವಾಗುವುದು 2003ನೇ ಇಸವಿಯಿಂದ. 2003ರಲ್ಲಿ ಈ ವ್ಯಕ್ತಿಯ ಕುಟುಂಬ ಮೊದಲ ಬಾರಿಗೆ ಕಾರೊಂದನ್ನು ಖರೀಧಿಸುತ್ತದೆ. ಅದುವೇ ಟಾಟಾ ಕಂಪನಿಯ ಐಕಾನಿಕ್ ಕಾರ್ ಎಂದೇ ಹೆಸರುವಾಸಿಯಾಗಿರುವ ಟಾಟಾ ಇಂಡಿಕಾ.
ವ್ಯಕ್ತಿ ವಿವರಿಸುವ ಪ್ರಕಾರ ನಾನು ಈಗ ಈ ಕಾರನ್ನು ಕೊಳ್ಳಲು ತನ್ನ ಕುಟುಂಬವೇ ಪ್ರಮುಖ ಕಾರಣ. ನಮಗೆ ಈ ಕಾರಿನೊಂದಿಗೆ ಒಂದು ರೀತಿಯ ಅವಿನಾಭಾವ ಸಂಭಂಧವಿದ್ದು, ಹಳೆಯ ನೆನಪುಗಳನ್ನು ಮತ್ತಷ್ಟು ಪುನಶ್ಚೇತನ ಗೊಳಿಸಲು ಈ ಕಾರು ಸಹಾಯವಾಗಬಲ್ಲದು ಎಂದು ಹೇಳಿದ್ದಾನೆ. 2013ರವರೆಗೆ ಅವರ ಬಳಿ ಈ ಕಾರಿದ್ದು, ಅದನ್ನು ಮನೆ ಮಂದಿಯೆಲ್ಲಾ ಸಂತೋಷದಿಂದ ಉಪಯೋಗಿಸುತ್ತಿದ್ದರು ಎಂದು ಹೇಳಿದ್ದಾನೆ.

ಆ ಸಮಯದಲ್ಲಿ ಈ ಕಾರನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಸರಿಯಾದ ಸಮಯಕ್ಕೆ ಸರ್ವೀಸ್ ಮಾಡುತ್ತಿದ್ದುದು ಮಾತ್ರವಲ್ಲದೇ ಅದಕ್ಕೆ ಫ್ರೀ ಫ್ಲೋ ಎಕ್ಸಾಸ್ಟ್ ಅನ್ನು ಸಹ ಜೋಡಿಸಿದ್ದರು. ಆಗಿನ ಕಾಲದಲ್ಲಿ ಭಾರತದಲ್ಲಿ ಲಭ್ಯವಿದ್ದ ಹ್ಯಾಚ್‌ಬ್ಯಾಕ್‌ಗಳಲ್ಲಿ ಫಿಯೆಟ್ ನಂತರ ಅತ್ಯಂತ ವೇಗದ ಹ್ಯಾಚ್‌ಬ್ಯಾಕ್ ಈ ಟಾಟಾ ಇಂಡಿಕಾ ಆಗಿತ್ತು ಎಂದು ಹೆಮ್ಮೆಯಿಂದ ತಿಳಿಸಿದ್ದಾನೆ.
ಇನ್ನು 2013ರಲ್ಲಿ ಆತನ ಕುಟುಂಬ ತಮ್ಮ ಕಾರನ್ನು ಅಪ್‌ಗ್ರೇಡ್ ಮಾಡುವ ಉದ್ದೇಶದಿಂದ ಈ ಟಾಟಾ ಇಂಡಿಕಾ ಕಾರನ್ನು ಮಾರಿ ಆ ಜಾಗಕ್ಕೆ ಬದಲಿ ಕಾರನ್ನು ತರುವಲ್ಲಿ ಯೋಜನೆಗಳನ್ನು ರೂಪಿಸಿದರು. ಈತನ ಕುಟುಂಬ ನೇರವಾಗಿ ಪೋಕ್ಸ್‌ವ್ಯಾಗನ್ ಡೀಲರ್ ಬಳಿ ತೆರಳಿ ಈ ಕಾರನ್ನು ವೆಂಟೋ ಸೆಡಾನ್ ಕಾರಿಗೆ ಎಕ್ಸ್‌ಚೇಂಜ್ ಮಾಡಿಕೊಂಢರು. ಅಲ್ಲಿಗೆ ಹತ್ತು ವರ್ಷಗಳ ಕಾಲ ತಮ್ಮ ಇಡೀ ಕುಟುಂಬ ಒಡನಾಡಿಯಾಗಿದ್ದ ಟಾಟಾ ಇಂಡಿಕಾ ಕಾರಿನ ಪ್ರಯಾಣ ಕುಟುಂಬದೊಂದಿಗೆ ಕೊನೆಯಾಗುತ್ತದೆ.
ಈ ಪ್ರಯಾಣ ಇಲ್ಲಿಗೆ ಕೊನೆಯಾಗಬಾರದು ಎಂಬುದು ವಿಧಿ ಲಿಖಿತವಾಗಿತ್ತು ಎಂದೆನಿಸುತ್ತದೆ. ಮಾರಾಟ ಮಾಡಿದ ನಂತರ ಈ ವ್ಯಕ್ತಿ ತನ್ನ ಹಳೆಯ ಕಾರನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಲೇ ಇದ್ದರು ಎಂದು ಹಂಚಿಕೊಂಡಿದ್ದಾರೆ. ಈ ಕಾರನ್ನು ಖರೀಧಿಸಿದ ಮಾಲೀಕನೂ ಸಹ ಅದನ್ನು ಸರಿಯಾದ ಸಮಯದಲ್ಲಿ ಸರ್ವೀಸ್ ಮಾಡಿಸುತ್ತಾ ಇರುತ್ತಾರೆ.
ಹಲವಾರು ಸಮಯಗಳ ಸತತ ಪ್ರಯತ್ನಗಳ ಬಳಿಕ ಈ ಕಾರನ್ನು ಖರೀಧಿಸಿದ ಮಾಲೀಕನ ನಂಬರ್ ಅನ್ನು ಪರಿವಾಹನ್ ಆ್ಯಪ್ ಮೂಲಕ ಕಂಡು ಹಿಡಿಯುತ್ತಾರೆ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಖುಷಿಪಟ್ಟ ಈ ವ್ಯಕ್ತಿ ಕೂಡಲೇ ಆ ಕಾರು ಮಾಲೀಕನಿಗೆ ಕರೆ ಮಾಡಿ, ಆ ಕಾರಿನ ಮೇಲೆ ತಮಗೆ ಮತ್ತು ತಮ್ಮ ಕುಟುಂಬಕ್ಕಿರುವ ನಂಟನ್ನು ವಿವರಿಸುತ್ತಾರೆ. ಈ ಮೂಲಕ ಒಂದೊಳ್ಳೆ ಡೀಲ್‌ಗೆ ಆ ಕಾರನ್ನು ಮರಳಿ ಪಡೆಯುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications