ADAS ಫೀಚರ್ ಬಳಸಿಕೊಂಡು ಚಲಿಸುತ್ತಿರುವ ಕಾರಿನಲ್ಲಿ ಮಂಗನಾಟ : ಸ್ಟೀಯರಿಂಗ್ ಬಿಟ್ಟು ಬರ್ಗರ್ ತಿಂದ ಭೂಪ
ತಂತ್ರಜ್ಞಾನಗಳನ್ನು ಜವಾಬ್ದಾರಿಯಿಂದ ಮನುಷ್ಯನ ಅವಶ್ಯಕತೆಗೆ ಬಳಸಬೇಕು ನಿಜ. ಆದರೆ ಅದನ್ನೇ ತಮ್ಮ ಮೂರ್ಖತನಗಳನ್ನು ಪ್ರದರ್ಶನ ಮಾಡುವುದಕ್ಕಾಗಿ ಬಳಸುವುದು ಎಷ್ಟರ ಮಟ್ಟಿಗೆ ಸರಿ. ಹೌದು ಇಲ್ಲೊಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ತೋರಿದ ವರ್ತನೆ ನೋಡಿದರೆ ನಿಜಕ್ಕೂ ನಾವು ಇಂತಹ ತಂತ್ರಜ್ಞಾನಗಳನ್ನು ಪಡೆಯಲು ಅರ್ಹರಾ ಎಂಬ ಸಂಶಯ ಬರುತ್ತದೆ.
ಮಹೀಂದ್ರಾ ಕಂಪೆನಿಯ ಫ್ಲ್ಯಾಗ್‌ಶಿಪ್ ಎಸ್‌ಯುವಿ ಕಾರಾದಂತಹ ಎಕ್ಸ್‌ಯುವಿ 700 ನ ಅಡಾಸ್ ಫೀಚರನ್ನು ಚಲಾವಣೆಯಲ್ಲಿಟ್ಟು, ಕಾರು ಚಲಿಸುತ್ತಿರುವಾಗಲೇ ಡ್ರೈವರ್ ಸೀಟ್‌ನಲ್ಲಿ ಲಂಚ್ ಮಾಡುತ್ತಾ ಅಡಾಸ್ ಫೀಚರನ್ನು ದುರುಪಯೋಗ ಪಡಿಸಿಕೊಂಡ ಚಾಲಕನೊಬ್ಬನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಕುರಿತಾಗಿ ನೆಟ್ಟಿಗರು ಪರ ವಿಎರೋಧ ಚರ್ಚೆಗಳಲ್ಲಿ ತೊಡಗಿದ್ದು, ಬಹುತೇಕ ಜನರು ಈ ಯುವಕನ ವರ್ತನೆಯ ವಿರುದ್ದ ಅಸಮಧಾನ ಹೊರಹಾಕುತ್ತಿದ್ದಾರೆ.
ಎಕ್ಸ್‌ಯುವಿ 700 ಎಂಬ ಎಸ್‌ಯುವಿಯು ಮಹೀಂದ್ರಾ ಕಂಪನಿ ತಯಾರಿಸಿರುವ ಕಾರುಗಳಲ್ಲಿಯೇ ಅತ್ಯುತ್ತಮವಾದ ಎಸ್‌ಯುವಿ ಎಂದರೆ ತಪ್ಪಾಗಲಾರದು. ಅತ್ಯಾಧುನಿಕ ಫೀಚರ್‌ಗಳಿಂದ ಪವರ್ ಪ್ಯಾಕ್ ಆಗಿ ಬಂದಿರುವ ಕಾರಿದು. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಕಾರುಗಳಲ್ಲಿ ಎಕ್ಸ್‌ಯುವಿ 700 ಸಹ ಒಂದು. ಇನ್ನು ಇದರಲ್ಲಿರುವಂತಹ ಜನಪ್ರಿಯ ಪೀಚರ್ ಎಂದರೆ ಅದು ಲೆವೆಲ್ 2 ಅಡಾಸ್ ( Advanced Driver Assistance System ).
ಲೆವೆಲ್ 2 ಅಡಾಸ್ ಫೀಚರನ್ನು ಪರಿಚಯಿಸಿದ ಮೊಟ್ಟ ಮೊದಲ ಭಾರತೀಯ ಕಾರು ತಯಾರಿಕಾ ಕಂಪನಿಯೆಂದರೆ ಅದು ಮಹೀಂದ್ರ. ಅಡಾಸ್ ಎಂಬುದು ದುಬಾರಿ ಟೆಸ್ಲಾ ಕಾರುಗಳಲ್ಲಿ ಸಿಗುವಂತಹ ಆಟೋ ಪೈಲಟ್ ರೀತಿಯ ಫೀಚರ್. ಈ ಫೀಚರ್‌ನ ಸಹಾಯದಿಂದ ಡ್ರೈವರ್ ಕಾರು ಚಲಾವಣೆ ಪ್ರಾರಂಭಿಸಿದ ಮೇಲೆ ಕಾರಿನಲ್ಲಿ ಅಳವಡಿಸಿರುವ ಕ್ಯಾಮೆರಾ ಮತ್ತು ರಾಡಾರ್ ಅನ್ನು ಬಳಸಿಕೊಂಡು ಡ್ರೈವರ್‌ನ ಸಹಾಯವಿಲ್ಲದೆ ಆ ರಸ್ತೆಯನ್ನು ಅವಲೋಕನ ಮಾಡಿಕೊಂಡು ಕಾರು ಮುಂದಕ್ಕೆ ಚಲಿಸುತ್ತದೆ.

ವಿದೇಶಗಳಲ್ಲಿ ಈ ಆಟೋ ಪೈಲಟ್ ಅಥವಾ ಅಡಾಸ್‌ನಂತಹ ಫೀಚರ್‌ಗಳು ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡುತ್ತದೆಯಾದರೂ ನಮ್ಮ ಭಾರತದ ರಸ್ತೆಗಳಲ್ಲಿ ಈ ಫೀಚರ್‌ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ನಡುವೆ ಈ ಫೀಚರ್‌ಗಳನ್ನು ಹಲವು ರೀತಿಯಲ್ಲಿ ದುರುಪಯೋಗಪಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಸುದ್ದಿಗಳೂ ಸಹ ಹರಿದಾಡುತ್ತಿದ್ದುದನ್ನು ನಾವು ಈ ಹಿಂದೆಯೇ ನೋಡಿದ್ದೆವೆಯೂ ಸಹ.
@Ri_rider ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಈ ವಿಡಿಯೋ ಅಪ್‌ಲೋಡಾಗಿದ್ದು, ಇದರಲ್ಲಿ ಡ್ರೈವರ್ ಸೀಟ್‌ನಲ್ಲಿ ಕೂತಿರುವ ವ್ಯಕ್ತಿ ಅಡಾಸ್ ಫೀಚರನ್ನು ಆನ್ ಮಾಡಿಕೊಂಡು ಬರ್ಗರ್ ತಿನ್ನುತ್ತಿರುವುದನ್ನು ಕಾಣಬಹುದು. ಇನ್ನು ನೇರವಾದ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದು, ಕಾರಿನ ವೇಗ ಗಂಟೆಗೆ ಸುಮಾರು 80 ಕಿಮೀ ವೇಗದಲ್ಲಿರುವುದನ್ನು ಗಮನಿಸಬಹುದು. ಇನ್ನು ಕಾರು ಚಾಲಕ ಕಾರಿನ ವೇಗವನ್ನು ಕಡಿಮೆಗೊಳಿಸದೇ ಆಹಾರ ಸೇವನೆ ಮಾಡುತ್ತಿರುವುದು ಅಪಾಯದ ಮಟ್ಟವನ್ನು ಹೆಚ್ಚಿಸುತ್ತಿದೆ ಎಂದರೆ ತಪ್ಪಾಗಲಾರದು.
ವಿಡಿಯೋದಲ್ಲಿ ಆತ ಅಪಾಯಕಾರಿಯಾದ ವರ್ತನೆಯನ್ನು ತೊರುತ್ತಿರುವುದು ಮಾತ್ರವಲ್ಲದೇ ಇದೇ ರೀತಿಯ ಫೀಚರನ್ನು ಹೊಂದಿರುವ ಕಾರು ಮಾಲೀಕರನ್ನು ಈ ರೀತಿಯ ಪ್ರಯೋಗವನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾನೆ. “ನಾನು ಕಾರು ಚಲಾಯಿಸುತ್ತಿರುವಾಗಲೇ ಆಟೋ ಪೈಲಟ್ ಸಹಾಯದಿಂದ ಲಂಚ್ ಮಾಡಬಲ್ಲೆ, ನೀವೇನೇನು ಮಾಡಬಲ್ಲಿರಿ” ಎಂಬ ತಲೆ ಬರಹವನ್ನು ವಿಡಿಯೋದಲ್ಲಿ ಬರೆದಿದ್ದಾನೆ. ಇದು ನಿಜಕ್ಕೂ ಸಹ ಲೆವೆಲ್ 2 ಅಡಾಸ್ ಅನ್ನು ಬಳಸಿಕೊಂಡು ಮಾಡುತ್ತಿರುವ ಮೂರ್ಖತನದ ವರ್ತನೆ ಅಲ್ಲದೆ ಇನ್ನೇನು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಕಾರಿನಲ್ಲಿರು ಅಡಾಸ್ ಫೀಚರನ್ನು ಎಚ್ಚರಿಕೆಯಿಂದ ಬಳಸಿ, ಅದನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಕಾರು ಕಂಪನಿಗಳೇ ತಮ್ಮ ಗ್ರಾಹಕರಿಗೆ ಎಚ್ಚರಿಕೆಯನ್ನು ಕೊಡುತ್ತಿದೆ. ಆದರೆ ನಮ್ಮಲ್ಲಿ ಆ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿ ಅದರ ದುರುಪಯೊಗ ಮಾಡಲಾಗುತ್ತಿದೆ. ಇದು ನಿಜಕ್ಕೂ ಅತೀ ಹೆಚ್ಚು ಅಪಾಯಕಾರಿಯಾದಂತಹ ವರ್ತನೆ. ಅಡಾಸ್‌ನಂತಹ ಫೀಚರ್‌ಗಳನ್ನು ಚಾಲಕನ ಸಹಾಯಕ್ಕಾಗಿ ಬಳಸಿಕೊಳ್ಳಬೇಕೇ ವಿನಹ, ಸಂಪೂರ್ಣವಾಗಿ ಅದನ್ನೇ ನಂಬಿಕೊಂಡು ಹೆಚ್ಚಿನ ಅಪಾಯಕ್ಕೆ ಆಸ್ಪದ ನೀಡಬಾರದು.


Click it and Unblock the Notifications