Tata Indica: ಪ್ರೀತಿಯ 'ಟಾಟಾ ಇಂಡಿಕಾ' ಸಿಕ್ಕಿಬಿಡ್ತು.. ಈ ಕಾರಿಗಾಗಿ ಇಡೀ ಕುಟುಂಬವೇ ತಪಸ್ಸು ಮಾಡಿತ್ತು!
ಹೊಸ ಕಾರು ಖರೀದಿಸುವುದು ನಮ್ಮ ದೇಶದ ಮಧ್ಯಮ ವರ್ಗದ ಜನರ ದೊಡ್ಡ ಕನಸು. ಕೆಲವರಿಗೆ ಭಾವನಾತ್ಮಕ ವಿಷಯವು ಹೌದು. ಅದರಲ್ಲಿಯೂ ತಾವು ಖರೀದಿಸಿದ ಮೊದಲ ಕಾರಿನ ಮೇಲೆ ಹೆಚ್ಚಿನ ಅಭಿಮಾನ ಇಟ್ಟುಕೊಂಡಿರುತ್ತಾರೆ. ಆದರೆ, ಬಹುತೇಕರು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಆ ಕಾರನ್ನು ಮಾರಾಟ ಮಾಡಿರುತ್ತಾರೆ.
ಆ ನಂತರ, ಬೇರೆ ಕಾರುಗಳನ್ನು ಕೊಂಡುಕೊಂಡಿರುತ್ತಾರೆ. ಆದರೆ, ಮೊದಲ ಕಾರಿನೊಂದಿಗಿರುವ ಅಭಿನಭಾವ ಸಂಬಂಧವನ್ನು ಇವುಗಳೊಂದಿಗೆ ಹೊಂದಲು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ ತಮ್ಮ ಮೊದಲ ಕಾರಿನ ಹುಡುಕಾಟವನ್ನು ಆರಂಭಿಸುತ್ತಾರೆ. ಹಲವರು ಅದರಲ್ಲಿ ಯಶಸ್ವಿಯಾಗುತ್ತಾರೆ. ಮತ್ತೆ ಕೆಲವರಿಗೆ ಅದು ಕನಸಾಗಿಯೇ ಉಳಿದು ಬಿಡುತ್ತದೆ. ಇದೀಗ, ಬರೋಬ್ಬರಿ 10 ವರ್ಷಗಳ ಬಳಿಕ, ಕುಟುಂಬವೊಂದಕ್ಕೆ ತಮ್ಮ ಪ್ರೀತಿಯ 'ಟಾಟಾ ಇಂಡಿಕಾ' ಪುನಃ ಸಿಕ್ಕಿದೆ.

ಸುಮಿತ್ ಎಂಬುವವರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಟಾಟಾ ಇಂಡಿಕಾ ಪಕ್ಕದಲ್ಲಿ ಅವರ ಪೋಷಕರೊಂದಿಗೆ ನಿಂತಿದ್ದಾರೆ. 2003ರಲ್ಲಿ ಇಂಡಿಕಾ ಕಾರನ್ನು ಖರೀದಿಸಿದ್ದ ಈ ಕುಟುಂಬ ಕೆಲ ಕಾರಣಗಳಿಗೆ 2013ರಲ್ಲಿ ಮಾರಾಟ ಮಾಡಿತ್ತು. ಅದೇಕೋ ತಮ್ಮ ಮೊದಲ ಕಾರನ್ನು ಬಿಟ್ಟಿರಲಾಗದೇ ಅದರ ಹುಡುಕಾಟ ಪ್ರಾರಂಭಿಸಿತ್ತು. ಅಂತಿಮವಾಗಿ ಇಂಡಿಕಾ, ಅವರ ಕುಟುಂಬ ಸದಸ್ಯನಾಗಿ ಮತ್ತೆ ದೊರೆತ್ತಿದ್ದು, ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿದೆ.
ಈ ಬಗ್ಗೆ ಸ್ವತಃ ಸುಮಿತ್ ಅವರು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, 'ಹತ್ತು ವರ್ಷಗಳ ನಿರಂತರ ಹುಡುಕಾಟದ ಬಳಿಕ ನಮ್ಮ ಕುಟುಂಬಕ್ಕೆ ಪುನಃ ಟಾಟಾ ಇಂಡಿಕಾ ದೊರತಿದೆ. ಮಹಾರಾಷ್ಟ್ರದ ಅಕೋಲಾದಲ್ಲಿದ್ದ ಈ ಕಾರನ್ನು ಈಗಿನ ಮಾಲೀಕರು ಖುಷಿಯಿಂದಲೇ ನೀಡಿದ್ದಾರೆ. ಅವರಿಗೂ ಧನ್ಯವಾದ ಅರ್ಪಿಸುತ್ತೇನೆ. ಇಷ್ಟು ವರ್ಷಗಳ ಇಂಡಿಕಾ ಕಾರಿನ ಹುಡುಕಾಟದಲ್ಲಿ ನನಗೆ ಸಾಕಷ್ಟು ಸ್ನೇಹಿತರು, ಪ್ರೀತಿ ತೋರಿಸಿ, ಸಹಕರಿಸಿದ್ದಾರೆ. ನನ್ನ ಪೋಷಕರ ಸಂತೋಷಕ್ಕೆ ಪಾರವೇ ಇಲ್ಲ' ಎಂದು ಹೇಳಿದ್ದಾರೆ.
ಟಾಟಾ ಇಂಡಿಕಾ ಕಾರಿನ ಬಗ್ಗೆ ಕೆಲವೊಂದು ವಿಚಾರಗಳನ್ನು ಹೇಳುವುದಾದರೆ, ಇದನ್ನು ಕಂಪನಿಯು 1998ರಲ್ಲಿ ಆಟೋ ಎಕ್ಸ್‌ಪೋ ಅನಾವರಣ ಮಾಡಿತ್ತು. ದೇಶೀಯವಾಗಿ ವಿನ್ಯಾಸ ಮಾಡಿದ್ದ ಈ ಕಾರು, ಬಿಡುಗಡೆಯಾಗಿದ್ದ ಕೆಲವೇ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿತ್ತು. ಅದಕ್ಕೆ ಸಾಕ್ಷಿ ಎಂಬಂತೆ 115,000 ಬುಕಿಂಗ್ ಆಗಿತ್ತು. ಆ ಕಾಲಘಟ್ಟದಲ್ಲಿ ಅಗ್ಗದ ಕಾರೆಂದು ಖ್ಯಾತಿಗಳಿಸಿದ್ದ ಇಂಡಿಕಾ, ರೂ. 2.59 ಲಕ್ಷದಿಂದ ರೂ.3.9 ಲಕ್ಷ. ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು.
ಪ್ಯಾಸೆಂಜರ್ ಹಾಗೂ ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದ್ದ ಟಾಟಾ ಇಂಡಿಕಾ ಟ್ಯಾಕ್ಸಿ ಸೇವೆಯಿಂದಲೇ ದೇಶಾದ್ಯಂತ ಹೆಚ್ಚು ಪ್ರಸಿದ್ದಿಯಾಗಿತ್ತು. ಜೊತೆಗೆ ಎಷ್ಟೋ ಜನರ ಜೀವನಕ್ಕೆ ಆಧಾರಾವಾಗಿತ್ತು. ಇದು ಎರಡು ಎಂಜಿನ್ ಆಯ್ಕೆಗಳನ್ನೂ ಹೊಂದಿತ್ತು. ಅವುಗಳೆಂದರೆ, 1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್. ವಿಶೇಷವೆಂದರೆ, ಭಾರತದಲ್ಲಿ ಡೀಸೆಲ್ ಎಂಜಿನ್ ಹೊಂದಿದ ಮೊದಲ ಹ್ಯಾಚ್‌ಬ್ಯಾಕ್ ಇದಾಗಿತ್ತು.
ಆ ಕಾಲದಲ್ಲಿಯೇ ಟಾಟಾ ಇಂಡಿಕಾ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಆಕರ್ಷಕ ಕ್ಯಾಬಿನ್ ವಿನ್ಯಾಸವನ್ನು ಹೊಂದಿತ್ತು. ಎಸಿ ಹಾಗೂ ಪವರ್ ವಿಂಡೋವಂತಹ ಆಯ್ಕೆಗಳನ್ನು ಪಡೆದಿತ್ತು. ಇಂಡಿಕಾ ಅಬ್ಬರಕ್ಕೆ ಬೇರೆ ಕಂಪನಿಗಳಿಗೆ ತಡೆಯೊಡ್ಡಲು ಸಾಧ್ಯವಾಗಲೇ ಇಲ್ಲ. ಆದರೂ ಭಾರತದ ಮಾರುಕಟ್ಟೆಯಲ್ಲಿ ಮಾರುತಿ 800 ಹಾಗೂ ಮಾರುತಿ ಜೆನ್ ಪ್ರತಿಸ್ಪರ್ಧಿ ಕಾರುಗಳಾಗಿದ್ದವು. ಅಲ್ಲದೆ, ದಶಕಗಳ ಕಾಲ ಇಂಡಿಕಾ ಭಾರತದಲ್ಲಿ ಮನೆಮಾತಾಗಿತ್ತು.
ಇನ್ನು, ಮೊದಲ ಕಾರಿನ ಮೇಲೆ ಪ್ರತಿಯೊಬ್ಬರು ತಮ್ಮದೇ ಸೆಂಟಿಮೆಂಟ್ ಹೊಂದಿರುತ್ತಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ತಾವು ಮೊದಮೊದಲು ಉಪಯೋಗಿಸುತ್ತಿದ್ದ ಮಾರುತಿ 800 ಕಾರಿಗೆ ಹುಡುಕಾಟ ನಡೆಯುತ್ತಿದ್ದಾರೆ. ಆ ಕಾರು ಈವರೆಗೆ ಅವರಿಗೆ ಸಿಕ್ಕಿಲ್ಲ. ಆದರೆ, ಈ ಕುಟುಂಬ ತಮ್ಮ ಟಾಟಾ ಇಂಡಿಕಾ ಕಾರನ್ನು ಹತ್ತು ವರ್ಷಗಳ ನಂತರ ತಮ್ಮದಾಗಿಸಿಕೊಂಡಿದ್ದು, ಅದನ್ನು ಖುಷಿಯಿಂದಲ್ಲೇ ಭರ ಮಾಡಿಕೊಂಡಿದೆ.


Click it and Unblock the Notifications