ಬಿಸಿಲಿನ ಕಾರಣವಂತೂ ಅಲ್ಲ.. ಯುವಕನಿಂದ ನಡುರಸ್ತೆಯಲ್ಲಿಯೇ ಸ್ನಾನ: ಯಾಕೆಂದು ಗೊತ್ತಾದ್ರೆ ಸರಿ ಕೋಪ ಬರುತ್ತೆ!
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದು ಕ್ರೇಜ್ ಆಗಿದ್ದು, ಅದಕ್ಕಾಗಿ ಯುವಕರು ಚಿತ್ರ, ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲೂ ದ್ವಿಚಕ್ರ ವಾಹನಗಳನ್ನು ಬಳಸಿ, ವಿಭಿನ್ನ ಸ್ಟಂಟ್ ಮಾಡುವುದು ಹವ್ಯಾಸವಾಗಿ ಬಿಟ್ಟಿದೆ. ಆದರೆ, ಇಲ್ಲೊಬ್ಬ ಯುವಕ ಬೇಗ ಖ್ಯಾತಿಗಳಿಸಲು ಹೋಗಿ, ಸರಿಯಾಗಿಯೇ ದಂಡ ಕಟ್ಟಿದ್ದಾನೆ.
ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪನ್ನೀರಸೆಲ್ವಂ ಪಾರ್ಕ್ ಟ್ರಾಫಿಕ್ ಸಿಗ್ನಲ್ ಜಂಕ್ಷನ್ ನಲ್ಲಿ ಸ್ನಾನ ಮಾಡಿದ ದ್ವಿಚಕ್ರ ವಾಹನ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು 21 ವರ್ಷದ ವೆಲ್ಲೋಡ್‌ನ ಎಸ್.ಪಾರ್ತಿಬನ್ ಎಂದು ಗುರುತಿಸಲಾಗಿದೆ. ಪೊಲೀಸರು ಈ ಹುಚ್ಚಾಟ ನಡೆದಿದ್ದಕ್ಕಾಗಿ ಸುಮಾರು ರೂ.3,500 ದಂಡ ವಿಧಿಸಿದ್ದಾರೆ.

ಸದ್ಯ, ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಹೆಲ್ಮೆಟ್ ಧರಿಸದ ಈ ಯುವಕ ಟ್ರಾಫಿಕ್ ಸಿಗ್ನಲ್ ನಲ್ಲಿಯೇ ತನ್ನ ಸ್ಕೂಟರ್ ನಲ್ಲಿ ಇಟ್ಟುಕೊಂಡಿದ್ದ ಸಣ್ಣ ಬಕೆಟ್‌ನಿಂದ ನೀರನ್ನು ತೆಗೆದುಕೊಂಡು ಮೈತುಂಬ ಸುರಿದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ. ಅಲ್ಲೇ, ಪಕ್ಕದಲ್ಲಿ ಇದ್ದ ಇತರೆ ವಾಹನ ಸವಾರರು ಕೂಡ ಆತನ ಮೇಲೆ ನೀರನ್ನು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು ಎಂದು ಪೊಲೀಸರು ಹೇಳಿದ್ದಾರೆ.
ಅಷ್ಟಕ್ಕೂ ಆತ ನಡುರಸ್ತೆಯಲ್ಲಿ ಸ್ನಾನ ಮಾಡಿದ ಕಾರಣ ಕೇಳಿದರೇ ಸರಿಯಾಗಿಯೇ ಕೋಪ ಬರುತ್ತದೆ. ಸ್ನೇಹಿತ ಕಟ್ಟಿದ 10 ರೂಪಾಯಿ ಚಾಲೆಂಜ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಲೈಕ್ ಪಡೆಯಲು ಈ ಕೆಲಸ ಮಾಡಿದ್ದಾನೆ ಎಂದು ಪೋಲಿಸರು ಹೇಳಿದ್ದಾರೆ. ಇದಕ್ಕೂ ಮೊದಲು ಇಂತಹ ಹಲವು ಕುಚೇಷ್ಟೆಗಳನ್ನೇ ಈತ ಮಾಡಿದ್ದ. ಹಸಿ ಮೀನು ತಿನ್ನುವುದು, ಸಕ್ಕರೆಯ ಬದಲಿಗೆ ಉಪ್ಪಿನ ಟೀ ಕುಡಿಯುವಂತಹ ಕೆಲಸಗಳನ್ನು ಮಾಡಿದ್ದಾನೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು, ಯುವಕನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ದಂಡವನ್ನು ವಿಧಿಸಿದ್ದಾರೆ. ಆದರೆ, ಕೇವಲ 10 ರೂಪಾಯಿಗೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಈ ರೀತಿಯ ಹುಚ್ಚಾಟ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಿರುತ್ತಾರೆ. ಇದರಿಂದ ರಕ್ಷಣೆ ಪಡೆಯಲು ಅಲ್ಲಿನ ಜನರು ವಿವಿಧ ಉಪಾಯಗಳನ್ನು ಮಾಡುತ್ತಾರೆ. ಮತ್ತೆ ಕೆಲವು ಮಂದಿ, ಈ ಪರಿಸ್ಥಿತಿಯನ್ನು ಇತರರಿಗೆ ತಿಳಿಯುವಂತೆ ಮಾಡಲು ವಿಭಿನ್ನ ಪ್ರಯತ್ನ ಮಾಡಿ, ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಕಳೆದ ವಾರ ತಂಜಾವೂರಿನಲ್ಲಿ ಹೀಗೆ ಮಾಡಲು ಹೋಗಿ, ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿಯೇ ಸ್ಥಾನ ಮಾಡಿದ್ದರು.
ಆ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲಿನ ಪೊಲೀಸರು ರಸ್ತೆಯಲ್ಲಿ ಈ ಕೆಲಸ ಮಾಡಿದ ವ್ಯಕ್ತಿ ಹಾಗೂ ಆತನ ಸ್ನೇಹಿತನಿಗೆ ದಂಡ ವಿಧಿಸಿದ್ದರು. ಇನ್ನು, ತಮಿಳುನಾಡಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ಬಳಸಿ, ಸ್ಟಂಟ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಪೊಲೀಸರು, ಇಂತಹ ಕೃತ್ಯ ವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications