ಸತ್ಯ ಘಟನೆ: "ಯಮನ ರೂಪ ತಾಳಿದ ಅಪಾಯಕಾರಿ ಗಾಳಿಪಟ"

Posted By:

ಸತ್ಯ ಘಟನೆ:

'ಪಟ ಪಟ ಹಾರೋ ಗಾಳಿಪಟ'...ಹೌದು, ಗಾಳಿಪಟ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳಂತೂ ಗಾಳಿಪಟ ತುಂಬಾನೇ ಇಷ್ಟಪಡುತ್ತಾರೆ. ಬಾನ್ನೆತ್ತರಕ್ಕೆ ಬೆಳ್ಳಕ್ಕಿ ತರಹನೇ ಸ್ವಚ್ಛಂದವಾಗಿ ವಿಹರಿಸುವ ಗಾಳಿಪಟಗಳ ವೀಕ್ಷಣೆ ತುಂಬಾನೇ ಚೆಂದ. ಅಷ್ಟಕ್ಕೂ ಗಾಳಿಪಟ ಹಾರಾಡಲು ದಾರ ಪೋಣಿಸಬೇಕಾಗಿರುವ ಅಗತ್ಯ ನಿಮಗೆಲ್ಲರಿಗೂ ಗೊತ್ತೇ ಇದೆ. ಇಂತಹ ಸಾಮಾನ್ಯ ದಾರಗಳು ಬೇಗನೇ ತುಂಡಾಗುವುದರಿಂದ ಮಾರುಕಟ್ಟೆಯಲ್ಲಿ ಪುಕ್ಕಟೆ ಬೆಲೆಯಲ್ಲಿ ದೊರಕುವ ಮಂಜ ಥ್ರೆಡ್ (ನೂಲು) ಬಳಕೆ ಮಾಡುತ್ತಾರೆ.

ನಿಮಗೆ ನೆನಪಿರಲಿ ಮೈದಾ ಹಿಟ್ಟಿಗೆ ಗಾಜಿನ ಪುಡಿಯನ್ನು ಬೆರೆಸಿ ಮಾಡಿರುವಂತಹ ಇಂತಹ ಮಂಜ ದಾರಗಳು ಜೀವಕ್ಕೆ ತುಂಬಾನೇ ಅಪಾಯಕಾರಿಯಾಗಿರುತ್ತದೆ. ಮಕ್ಕಳು ಅಥವಾ ಹಿರಿಯರು ತಿಳಿದೋ ತಿಳಿಯದೆಯೋ ಮಾಡುವಂತಹ ಇಂತಹ ಅನಾಹುತಕ್ಕೆ ಪಾಪ ರಸ್ತೆ ಸಂಚಾರಿಗಳು ಬಲಿಯಾಗುತ್ತಿದ್ದಾರೆ.

ನೆರೆಯ ಚೆನ್ನೈ ಹಾಗೂ ಮುಂಬೈ ಮಹಾ ನಗರಗಳಲ್ಲಿ ಸಮುದ್ರ ತೀರಾ ಪ್ರದೇಶ ಇರುವುದರಿಂದ ಇಂತಹ ಗಾಳಿಪಟಗಳ ಬಳಕೆ ಬಹಳ ಹೆಚ್ಚಾಗಿ ಕಂಡುಬರುತ್ತದೆ. ಹೌದು, ಅಲ್ಲಿ ದೂರದ ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಹರಸಿಕೊಂಡಿರುವ ನನ್ನ ಮಿತ್ರ ಧೀರಜ್ ಕೂಡ್ಲು ಎಂಬವರಿಗೂ ಇಂತಹದೊಂದು ಅಪಾಯ ಎದುರಾಗಿತ್ತು.

ಎಂದಿನಂತೆ ಕಳೆದ ಭಾನುವಾರ (ಮಾರ್ಚ್ 23) ತಮ್ಮ ದಿನನಿತ್ಯ ಅಗತ್ಯಗಳಿಗಾಗಿ ಬೈಕ್‌ನಲ್ಲಿ (ಹೀರೊ ಹಂಕ್) ಸಂಚರಿಸುತ್ತಿದ್ದ ಚೆನ್ನೈ ಲೂಕಸ್ (ಪಾಡಿ) ಬ್ರಿಡ್ಜ್‌ ಹೆದ್ದಾರಿ ದಾಟುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಕುತ್ತಿಗೆಗೊಂದು ಕುಣಿಕೆಯೊಂದು ಸಿಕ್ಕಿಹಾಕಿಕೊಂಡಿತ್ತು. ತನಗೇನಾಯ್ತೆಂಬದನ್ನು ಅರಿಯುವಷ್ಟರಲ್ಲಿ ಗಾಳಿಪಟದ ದಾರ ಗಾಳಿಯ ವೇಗಕ್ಕೆ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಸ್ನೇಹಿತ ಧೀರಜ್ ಬೈಕ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಧೀರಜ್ ಹೇಳುವ ಪ್ರಕಾರ ತನ್ನ ಪ್ರೀತಿಪಾತ್ರರ ಪ್ರಾರ್ಥನೆ ಅಥವಾ ಯಾರದ್ದೋ ಪುಣ್ಯ ಎಂಬಂತೆ ಕೂದೆಲೆಳೆಯ ಅಂತರದಲ್ಲಿ ತಾನು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಚೆನ್ನೈ ಎಂಬ ಮಹಾನಗರದಲ್ಲಿ ಬೀದಿ ಬೀದಿಗಳಲ್ಲೂ ಗಾಳಿಪಟ ಹಾರಾಟ ಮಜಾ ಸವಿಯುವ ಮಕ್ಕಳು ಅಥವಾ ಹಿರಿಯರ ಗುಂಪು ಕಾಣಿಸಿಗುವುದು ಅತಿ ಸಾಮಾನ್ಯ. ಹಾಗಿರುವಾಗ ಗಾಳಿಪಟದ ದಾರ ಒಡೆಯದಿರಲು ಇಂತಹ ನಿಷೇಧಿತ ಮಂಜ ದಾರಗಳನ್ನು ಗಾಳಿಪಟಕ್ಕೆ ಪೋಣಿಸುತ್ತಾರೆ. ಆದರೆ ಒಮ್ಮೆ ಬಾನೆತ್ತರಕ್ಕೆ ಹಾರಿದ ಗಾಳಿಪಟದ ಪರಿಸ್ಥಿತಿಯೇನು ಎಂಬುದನ್ನು ಅರಿಯಲು ಅಂಥವರು ಇಷ್ಟಪಡುವುದಿಲ್ಲ ಅಥವಾ ತಮ್ಮ ದನಿವಿನಿಂದಾಗಿ ಅರ್ಧದಲ್ಲೇ ಬಿಟ್ಟು ತಮ್ಮ ಪಾಡಿಗೆ ತೆರಳುತ್ತಾರೆ.

ಹೀಗೆ ತುಂಡರಿಸಲ್ಪಟ್ಟ ಗಾಳಿಪಟವು ಗಾಳಿಯ ವೇಗಕ್ಕೆ ತೇಲುತ್ತಾ ಸಾಗಿ ಎಲ್ಲೋ ಮರದ ರೆಂಬೆ ಅಥವಾ ನಿಧಾನವಾಗಿ ರಸ್ತೆ ಪ್ರದೇಶಗಳತ್ತ ತನ್ನ ಪಯಣ ಬೆಳೆಸುತ್ತದೆ. ಧೀರಜ್ ಪ್ರಕಾರ ಪ್ರಯಾಣದ ವೇಳೆ ಇಂತಹ ಗಾಳಿಪಟಗಳನ್ನು ಗುರುತಿಸುವುದು ತುಂಬಾನೇ ಕಷ್ಟಕರ. ಯಾಕೆಂದರೆ ಇಂತಹ ಸೂಕ್ಷ್ಮ ದಾರಗಳು ಕಣ್ಣಿಗೆ ಕಾಣಸಿಗುವುದಿಲ್ಲ. ಪ್ರಸ್ತುತ ಒಂದು ಕ್ಷಣಕ್ಕೆ ಸ್ವರ್ಗಲೋಕವನ್ನೇ ಕಂಡುಬಂದಿರುವ ಧೀರಜ್ ಇದೀಗ ಜೀವ ಸಿಕ್ಕಿರುವುದಕ್ಕೆ ದೇವರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕುತ್ತಿಗೆಯಲ್ಲಿ ಆಗಿರುವ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿರುವ ಅವರು, ಚೆನ್ನೈ ಕೋಳತ್ತೂರ್‌ನ ರಾಜಮಂಗಲ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ.

manja kites

ಜೀವ ರಕ್ಷಿಸಿದ ಕರವಸ್ತ್ರ...

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಚೆನ್ನೈನಲ್ಲಿ ಇದೀಗ ಸೆಕೆಯ ದಗೆ ನೆತ್ತಿಗೇರುತ್ತಿದೆ. ಏರುಹೊತ್ತಿಗೆ 3.30ಕ್ಕೆ ಸರಾಸರಿ 40ರಿಂದ 50 ಕೀ.ಮೀ. ವೇಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಧೀರಜ್, ಸಾಮಾನ್ಯಕ್ಕಿಂತ ವಿಭಿನ್ನವಾಗಿ ಬಿಸಿಲ ದೆಗೆಯಿಂದ ಪಾರಾಗಲು, ಕುತ್ತಿಗೆಗೆ ಕರವಸ್ತ್ರ ಪೋಣಿಸಿದ್ದರು. ಅದೃಷ್ಟವೆಂಬಂತೆ ಇದೇ ಕರವಸ್ತ್ರ ಯಮನ ರೂಪದಲ್ಲಿ ಬಂದಿದ್ದ ಗಾಳಿಪಟ ದಾರವು ಕುತ್ತಿಗೆಯನ್ನು ಸೀಳುವುದರಿಂದ ಪಾರಾಗಲು ನೆರವಾಗಿದೆ.

ಒಟ್ಟಿನಲ್ಲಿ ನನ್ನ ಮಿತ್ರನಿಗೆ ಆಗಿರುವ ಪರಿಸ್ಥಿತಿ ನಿಮಗೂ ಎದುರಾಗಲೂಬಹುದು. ಆದರೆ ಯಾವತ್ತೂ ಗಾಳಿಪಟದಲ್ಲಿ ಇಂತಹ ಅಪಾಯಕಾರಿ ನಿಷೇಧಿತ ದಾರ ಬಳಸದಂತೆ ಬೇಡಿಕೊಳ್ಳುತ್ತಿದ್ದೇವೆ. ಧೀರಜ್ ಅವರೇ ಹೇಳುವ ಪ್ರಕಾರ ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ. ಯಾಕೆಂದರೆ ಕ್ಷಣಮಾತ್ರದಲ್ಲಿ ಎದುರಾಗುವ ಇಂತಹ ಅಪಾಯಗಳಿಂದ ಪಾರಾಗುವುದಾದರೂ ಹೇಗೆ? ಯಾವುದಕ್ಕೂ ಬೈಕ್‌ಗಳಲ್ಲಿ ಪಯಣಿಸುವಾಗ ಸ್ವಲ್ಪ ಎಚ್ಚರಿಕೆಯಿಂದಿರಿ. ಕೇವಲ ಬೈಕ್ ಸವಾರಿಗರಿಗಷ್ಟೇ ಅಲ್ಲ, ಮರದ ರೆಂಬೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಇಂತಹ ಮಂಜ ದಾರಗಳಿಂದಾಗಿ ಬಾನತ್ತೆರದಲ್ಲಿ ಹಾರುವ ಪಕ್ಷಿಗಳು ಸಹ ತಮ್ಮ ರೆಕ್ಕೆ ತುಂಡರಿಸಲ್ಪಟ್ಟು ಹಾರಾಡುವುದಕ್ಕೂ ಚಡಪಡಿಸುತ್ತವೆ.

English summary
Manja Thread used for kites puts two wheeler riders in jeopardy

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark