ಮರ್ಸಿಡಿಸ್ ಬೆಂಝ್ ಲಗ್ಷುರಿ ಮೊಬೈಲ್ ಹೋಮ್
ಆಧುನಿಕ ಜಗತ್ತಿನಲ್ಲಿ ಮೊಬೈಲ್ ಹೋಮ್‌ಗಳಿಗೂ ಪ್ರಾಮುಖ್ಯತೆ ಹೆಚ್ಚುತ್ತಲೇ ಇದೆ. ತಮ್ಮ ಬಿಡುವಿಲ್ಲದ ಜೀವನದಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಅಥವಾ ಸೆಲೆಬ್ರಿಟಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಮೊಬೈಲ್ ಹೋಮ್‌ಗಳನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ.
ಈ ಹಿಂದೆಯೂ ಹಲವು ವಿಭಿನ್ನತೆಗಳನ್ನು ಹೊಂದಿರುವ ಮೊಬೈಲ್ ಹೋಮ್‌ಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಈ ಬಾರಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಸರದಿ. ಈ ಬಾರಿ ಎಲ್ಲ ಭೂಪ್ರದೇಶಗಳಿಗೂ ಹೊಂದಿಕೆಯಾಗುವ ಜೆಟ್ರೋಸ್ 6x6 ಟ್ರಕ್ (Zetros 6x6 truck) ಅನ್ನು ಬೆಂಝ್ ಅಭಿವೃದ್ಧಿಪಡಿಸಿದೆ. ಹಾಗಿದ್ದರೆ ಬನ್ನಿ ಇದರ ವಿಶೇಷತೆಗಳ ಬಗ್ಗೆ ಅರಿಯೋಣವೇ...

ಮರ್ಸಿಡಿಸ್ ಬೆಂಝ್ ಜೆಟ್ರೋಸ್ 6x6 ಟ್ರಕ್, 7.2 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, ಗರಿಷ್ಠ 1300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತಿದೆ. ಇದು ಎಲ್ಲ ಆರು ಚಕ್ರಗಳಿಗೂ ಪವರ್ ವಿತರಿಸಲಿದೆ.

ಸಹಜವಾಗಿಯೇ ಆಕಾರ ತುಂಬಾನೇ ದೊಡ್ಡದಾಗಿರುವುದರಿಂದ ಟ್ರಕ್ ಅನ್ನು ಎಲ್ಲ ಪ್ರದೇಶಕ್ಕೆ ಹೊತ್ತೊಯ್ಯಲು ಸ್ವಲ್ಪ ಕಷ್ಟಕರವಾಗಬಹುದು. ಇದಕ್ಕಾಗಿಯೇ ಆಫ್ ರೋಡ್ ಕ್ವಾಡ್ ಬೈಕ್ ಸಹ ಈ ಟ್ರಕ್‌ನಲ್ಲಿ ಸಾಗಿಸುವ ಅವಕಾಶ ಮಾಡಿಕೊಡಲಾಗಿದೆ.

ಇನ್ನು ಒಳಭಾಗಗಕ್ಕೆ ತರಳಿದಾಗ ಐಷಾರಾಮಿ ಅನುಭವ ನಿಮ್ಮನ್ನು ಆವರಿಸಲಿದೆ. ಇದರೊಳಗೆ ಬೆಡ್ ರೂಂ, ಶೌಚಾಲಯ ಹಾಗೂ ಅಡುಗೆ ಕೋಣೆಗಳ ಸೌಲಭ್ಯವಿರುತ್ತದೆ. ಅಷ್ಟೇ ಅಲ್ಲದೆ ಎರಡು ದೊಡ್ಡದಾದ ಎಲ್‌ಸಿಡಿ ಟಿವಿ, ಸ್ಯಾಟಲೈಟ್ ಕಮ್ಯೂನಿಕೇಷನ್ ಸಿಸ್ಟಂ ಮತ್ತು ಬೋಸ್ ಸೌಂಡ್ ಸಿಸ್ಟಂ ಕೂಡಾ ಲಭ್ಯವಿರಲಿದೆ.

ಟ್ರಕ್ ಒಳಗಡೆ ಲೈಟ್ಸ್ ಮತ್ತು ಎಲೆಕ್ಟ್ರಾನಿಕ್‌ಗಳು ಡೀಸೆಲ್ ಜನರೇಟರ್‌ನಿಂದ ಕೆಲಸ ಮಾಡಲಿದೆ. ಅಂತೆಯೇ ಹೆಚ್ಚುವರಿಯಾಗಿ ಎರಡು 80 ವ್ಯಾಟ್ ಸೋಲರ್ ಪ್ಯಾನೆಲ್ ಕೂಡಾ ಟ್ರಕ್ ಮೇಲ್ಗಡೆ ಲಗತ್ತಿಸಲಾಗಿದೆ.

ಅಂದ ಹಾಗೆ ಮಂಗೋಲಿಯಾದ ಉದ್ಯಮಿಗಳು ಈ ಬೆಲೆಬಾಳುವ ಮೊಬೈಲ್ ಹೋಮ್‌ಗಳನ್ನು ಹೊಂದಿದ್ದಾರೆ. ಅಲ್ಲದೆ ವಾರಂತ್ಯದಲ್ಲಿ ಹಂಟಿಂಗ್ ಹಾಗೂ ಹಿಮಾವೃತ ಪ್ರದೇಶಗಳಿಗೆ ಸಾಹಸ ಪಯಣಕ್ಕಾಗಿ ಇದನ್ನು ಬಳಕೆ ಮಾಡುತ್ತಿದ್ದಾರೆ.


Click it and Unblock the Notifications