ಆಟೋ ರಿಕ್ಷಾದಲ್ಲಿ ಪಯಣಿಸುವ ಮೆಕ್ಸಿಕನ್ ರಾಯಭಾರಿ; ಭಾರತೀಯರಿಗಿಲ್ಲದ ಕಾಳಜಿ!
ಬಹುಶ: ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೂತನಿವಾಸ ಪ್ರತಿನಿಧಿಗಳು ಸಂಚರಿಸುವ ವಿಶ್ವದ ಮೊದಲ ಆಟೋ ರಿಕ್ಷಾ ಇದಾಗಿರಬಹುದು. ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ ಮೆಲ್ಬಾ ಪ್ರಿಯ ತಮ್ಮ ಅಧಿಕೃತ ಪ್ರಯಾಣಕ್ಕಾಗಿ ಜನ ಸಾಮಾನ್ಯರ ಆಟೋ ರಿಕ್ಷಾವನ್ನೇ ಆಶ್ರಯಿಸಿಕೊಂಡಿದ್ದಾರೆ. ಇದು ನಿಜಕ್ಕೂ ಐಷಾರಾಮಿ ಕಾರುಗಳಲ್ಲಿ ಸುತ್ತಾಡುತ್ತಿರುವ ದೇಶದ ರಾಜಕೀಯ ವ್ಯಕ್ತಿಗಳಿಗೆ ನಾಚಿಕೆಯನ್ನುಂಟು ಮಾಡಿದೆ.
ಮೆಕ್ಸಿಕೊದಲ್ಲಿ ಐಷಾರಾಮಿ ಕಾರುಗಳಿಗೇನು ಕೊರತೆಯಿಲ್ಲ. ಆಕೆ ಬಯಸಿದ್ದಲ್ಲಿ ಇದಕ್ಕಿಂತಲೂ ಮಿಗಿಲಾದ ಐಷಾರಾಮಿ ವಾಹನಗಳಲ್ಲಿ ಸಂಚರಿಸಬಹುದಾಗಿದೆ. ಆದರೆ ಭಾರತದಲ್ಲಿ ಲಕ್ಷಗಟ್ಟಲೆ ಮಂದಿ ಆಟೋ ರಿಕ್ಷಾವನ್ನು ಆಶ್ರಯಿಸಿಕೊಂಡಿದ್ದಾರೆ. ತಾನು ಸಹ ಆಟೋ ರಿಕ್ಷಾ ಸಂಚಾರವನ್ನು ಇಷ್ಟಪಡುವುದಾಗಿ ಹೃದಯ ವೈಶಾಲತೆ ತೋರಿದ್ದಾರೆ.

ರಾಯಭಾರಿ ಆಗುವುದಕ್ಕಿಂತಲೂ ಮೊದಲೇ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದು, ಆಟೋ ರಿಕ್ಷಾ ಸಂಚಾರದ ಅನುಭವ ಪಡೆದುಕೊಂಡಿದ್ದೇನೆ. ರಾಯಭಾರಿ ಆದ ಬಳಿಕವೂ ಲಕ್ಷಗಟ್ಟಲೆ ಭಾರತೀಯರು ಆಟೋ ರಿಕ್ಷಾದಲ್ಲಿ ಸಂಚರಿಸುವಾಗ ತನಗ್ಯಾಕೆ ಆಗಬಾರದು ? ಎಂದು ವಿವರಿಸುತ್ತಾರೆ.

ಮಾತು ಮುಂದುವರಿಸಿದ ಈಕೆ, ರಾಯಭಾರಿ ಆದವರು ಆಟೋ ರಿಕ್ಷಾಗಳನ್ನೆಕ್ಕೆ ಬಳಸಬಾರದು ? ಎಂದು ಮರು ಪ್ರಶ್ನೆ ಹಾಕುತ್ತಾರೆ.

ಈಕೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಧಿಕೃತ ಪ್ರಯಾಣಕ್ಕಾಗಿ ಸಿಎನ್ ಜಿ ಚಾಲಿತ ಆಟೋ ರಿಕ್ಷಾವನ್ನು ಬಳಕೆ ಮಾಡುತ್ತಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿದೆ.

ದೆಹಲಿಯಲ್ಲಿ ಮಾಲಿನ್ಯ ಮಟ್ಟ ವೃದ್ಧಿಸುತ್ತಲೇ ಇದ್ದು, ಅಪಾಯಕಾರಿ ಎನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು ಎಂದು ಪ್ರಿಯ ಸಲಹೆ ನೀಡುತ್ತಾರೆ.

ಪರಿಸರ ಸ್ನೇಹಿ ಆಟೋಗಳನ್ನು ಬಳಕೆ ಮಾಡುವುದರಿಂದ ಮಾಲಿನ್ಯ ಮಟ್ಟ ಕಡಿಮೆಯಾಗಲಿದ್ದು, ಪರಿಸರಕ್ಕೆ ತಾನು ಹಿಂತಿರುಗಿಸುವ ಅಲ್ಪ ಮಟ್ಟದ ಕೊಡುಗೆಯಾಗಿರಲಿದೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ.

ಆಟೋವನ್ನು ಖರೀದಿಸುವುದು ಅಷ್ಟು ಸುಲಭ ಪ್ರಕ್ರಿಯೆ ಆಗಿರಲಿಲ್ಲ. ಇದಕ್ಕಾಗಿ ವಿದೇಶಾಂಗ ಸಚಿವಾಲಯದ ಅನುಮತಿಯನ್ನು ಗಿಟ್ಟಿಸಿಕೊಳ್ಳಬೇಕಾಗಿತ್ತು.

ಪ್ರಸ್ತುತ ಆಟೋದಲ್ಲಿ ಮೆಕ್ಸಿಕನ್ ರಸ್ತೆ ಕಲಾವಿದ ಸ್ಯಾಂಕೊ ವಿಶೇಷ ಕಲಾ ಚಿತ್ತಾರವನ್ನು ಮಾಡಿದ್ದಾರೆ. ಇದು ಹೊಸ ಚೈತನ್ಯವನ್ನು ತುಂಬಿಕೊಂಡಿದೆ.

ಈ ನಡುವೆ ಮೆಕ್ಸಿಕೋ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ಕೊಟ್ಟಾಗಲೂ ಇದೇ ವಾಹನವನ್ನು ಸಂಚಾರಕ್ಕಾಗಿ ಬಳಕೆ ಮಾಡಿದ್ದಾರೆ. ಅಲ್ಲದೆ ಇದು ನಮ್ಮ ಅಧಿಕೃತ ಗಾಡಿ ಎಂದು ಹೇಳಿಕೊಂಡಿದ್ದರು.

ಇದರ ಚಾಲಕ ಜಗದೀಶ್ ದುಗ್ಗಾಲ್ ತಮ್ಮ ಮಾತಿನಲ್ಲೇ ಹೇಳುವಂತೆಯೇ, 'ಮೆಕ್ಸಿಕನ್ ರಾಯಭಾರಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಬಹುದಾದ್ದಲ್ಲಿ ಭಾರತೀಯ ಗಣ್ಯರಿಗ್ಯಾಕೆ ಆಗಬಾರದು ?ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ತಾನು ಕೂಡಾ ದೆಹಲಿ ನಿವಾಸಿ ಎಂದು ಹೆಮ್ಮೆಪಟ್ಟುಕೊಳ್ಳುತ್ತಿರುವ ಮೆಕ್ಸಿಕನ್ ರಾಯಭಾರಿ, ನಿಜಕ್ಕೂ ಭಾರತದ ರಾಜಕೀಯ ವ್ಯಕ್ತಿಗಳಿಗೆ ಮಾದರಿಯೆನಿಸಿಕೊಂಡಿದ್ದಾರೆ.


Click it and Unblock the Notifications








