ಚುನಾವಣಾ ಪ್ರಚಾರಕ್ಕೆ ಮೋದಿ ಬಳಸುತ್ತಿರುವ ಕಾರಿನಲ್ಲಿದೆ ಶತ್ರುಗಳ ಊಹೆಗೂ ನಿಲುಕದ ಭದ್ರತೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣ ಪ್ರಚಾರ ರಂಗೇರುತ್ತಿದೆ. ಬಿಜೆಪಿ ಮತ್ತೊಮ್ಮೆ ತನ್ನ ಸರ್ಕಾರವನ್ನು ಹೇಗಾದರೂ ಮಾಡಿ ಅಧಿಕಾರಕ್ಕೆ ತರಲು ಮಾಸ್ಟರ್ ಪ್ಲಾನ್‌ಗಳನ್ನು ರೂಪಿಸಿಕೊಂಡಿದ್ದು, ಈಗ ರಂಗಕ್ಕೆ ನೇರವಾಗಿ ಪ್ರಧಾನಿ ಮೋದಿಯವರನ್ನು ಇಳಿಸಿದೆ. ತುಮಕೂರಿನಲ್ಲಿ ಅವರು ರೋಡ್ ಶೋ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಆದರೆ ಮೋದಿ ಪ್ರಚಾರಕ್ಕೆ ಬಳಸಿರುವ ಕಾರಿನ ಬಗ್ಗೆ ನಿಮಗೆ ಎಷ್ಟು ಗೊತ್ತು? ಪ್ರಚಾರದ ಸಮಯದಲ್ಲಿ ಅಷ್ಟು ಮಂದಿಯಲ್ಲಿ ಈ ಕಾರು ಯಾವ ಮಟ್ಟಿಗೆ ರಕ್ಷಣೆ ನೀಡಬಲ್ಲದು, ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವೆಲ್ಲಾ ಆಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಶಸ್ತ್ರಾಸ್ತ್ರ ಹೊಂದಿರುವ ಈ ರೇಂಜ್ ರೋವರ್ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ವಿಶ್ವದ ಪವರ್‌ಫುಲ್ ನಾಯಕರಲ್ಲಿ ಮೋದಿ ಕೂಡ ಒಬ್ಬರಾಗಿದ್ದಾರೆ. ಅವರು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ, ಪ್ರಯಾಣಿಸುವ ವಾಹನಗಳು ಸುಧಾರಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಶಸ್ತ್ರಸಜ್ಜಿತವಾಗಿರುತ್ತವೆ. ಕಳೆದ ಬಾರಿ ಯುಪಿ ಚುನಾವಣಾ ಪ್ರಾಚಾರ ಮಾಡಿದಾಗ ಮಹೀಂದ್ರಾ ಥಾರ್ ಎಸ್‌ಯುವಿನಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಟಾಟಾ ಒಡೆತನದ ಪ್ರಮುಖ ಕಾರಿನಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.
ಈ ಕಾರು ಟಾಟಾ ಗ್ರೂಪ್ ಕಂಪನಿಯ ಲ್ಯಾಂಡ್ ರೋವರ್ ತಯಾರಿಸಿದ ರೇಂಜ್ ರೋವರ್ ಕಾರಾಗಿದೆ. ಇದು ಸಾಮಾನ್ಯವಾಗಿಯೇ ಇತರ ಕಾರುಗಳಿಗಿಂತ ನಿರ್ಮಾಣ ಗುಣಮಟ್ಟ, ಸುಧಾರಿತ ವೈಶಿಷ್ಟ್ಯಗಳು, ಪರ್ಫಾಮೆನ್ಸ್ ನಲ್ಲಿ ಹೇಳಿ ಮಾಡಿಸಿದಂತಿರುತ್ತದೆ. ಆದರೆ ಈಗ ಪ್ರಧಾನಿ ಮೋದಿ ಓಡಾಡಲು ಇನ್ನೂ ಹಲವು ರಹಸ್ಯ ಶಸ್ತ್ರಾಸ್ತ್ರಗಳೊಂದಿಗೆ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ವಿನ್ಯಾಸದಲ್ಲಿ ಈ ಕಾರು ಇತರ ರೇಂಜ್ ರೋವರ್ ಕಾರುಗಳನ್ನು ಹೋಲುತ್ತದೆಯಾದರೂ, ಪ್ರಚಾರಕ್ಕಾಗಿ ಸಂಪೂರ್ಣವಾಗಿ ಮಾರ್ಪಡಿಸಲಾಗಿದೆ. ಭದ್ರತಾ ಕಾರಣಗಳಿಂದಾಗಿ, ಈ ಶಸ್ತ್ರಾಸ್ತ್ರಗಳ ರಹಸ್ಯಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಆದರೆ ಹೊರಗಿನಿಂದ ದಾಳಿ ನಡೆದರೆ ಕಾರಿನೊಳಗಿನ ರಹಸ್ಯ ಆಯುಧಗಳನ್ನು ಬಳಸಿ ಪ್ರತಿದಾಳಿ ನಡೆಸಲು ಎಲ್ಲಾ ಅನುಕೂಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಂಪೂರ್ಣ ಬುಲೆಟ್ ಪ್ರೂಫ್ ಬಾಡಿಯನ್ನು ಈ ಕಾರು ಹೊಂದಿದೆ.
ಸುರಕ್ಷತಾ ವೈಶಿಷ್ಟ್ಯಗಳಿಗೆ ಧಕ್ಕೆಯಾಗದಂತೆ ಕಾರಿನ ಒಳಗಿನಿಂದ ಹೊರಗೆ ಸಂವಹನ ನಡೆಸುವಂತೆಯು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ಚಾಸಿಸ್ ಅನ್ನು ಪ್ರಯಾಣಿಕರ ಸುರಕ್ಷತೆ ಮತ್ತು ಐಷಾರಾಮಿ ಮತ್ತು ಕಾರಿನಲ್ಲಿರುವ ಶಸ್ತ್ರಾಸ್ತ್ರಗಳ ಬಳಕೆಯ ಸುಲಭತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಕಾರು ಕೇವಲ 7.4 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಗರಿಷ್ಠ 193 ಕಿ.ಮೀ ವೇಗದಲ್ಲಿ ಚಲಿಸುತ್ತದೆ.
ಈ ಕಾರಿನ ದೇಹವನ್ನು ನಿರ್ಮಾಣದ ಸಮಯದಲ್ಲಿ ಯಾವುದೇ ರೀತಿಯ ದಾಳಿಯನ್ನು ತಡೆದುಕೊಳ್ಳುವಷ್ಟು ಶಕ್ತಿಯುತವಾಗಿ ವಿನ್ಯಾಸಗೊಳಿಸಲಾಗಿದೆ. ಐಇಡಿ ಬಾಂಬ್ ಸ್ಫೋಟಗೊಂಡರೂ ವಾಹನದಲ್ಲಿದ್ದವರಿಗೆ ತೊಂದರೆಯಾಗದಂತೆ ಗಟ್ಟಿಮುಟ್ಟಾಗಿ ಕಾರಿನ ಬಾಡಿಯನ್ನು ವಿನ್ಯಾಸಗೊಳಿಸಲಾಗಿದೆ. ಭದ್ರತಾ ಕಾರಣಗಳಿಂದಾಗಿ ನಿಖರವಾದ ಬೆಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಈ ಕಾರಿನ ಬೆಲೆ ಸುಮಾರು 10 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕಾರು ಎರಡು 10-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಚ್ಚಿನ ರೆಸಲ್ಯೂಶನ್ ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 5.0 ಲೀಟರ್ V8 ಎಂಜಿನ್ ಹೊಂದಿದ್ದು, 400 bhp ಪವರ್ ಅನ್ನು ಹೊರಹಾಕುತ್ತದೆ. ಮಳೆ, ಪ್ರವಾಹ, ಚಂಡಮಾರುತ, ಹಿಮ, ಮರಳು, ಗುಡ್ಡ ಹೀಗೆ ಎಲ್ಲ ರೀತಿಯ ಸ್ಥಳಗಳಲ್ಲಿ ಸುಲಭವಾಗಿ ಸಂಚರಿಸುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ.


Click it and Unblock the Notifications








