ಹೆಡ್‍ಫೋನ್ ಬಳಸುತ್ತಿದ್ದ ಆಟೋ ಚಾಲಕರಿಗೆ ಶಾಕ್ ಕೊಟ್ಟ ಟ್ರಾಫಿಕ್ ಪೊಲೀಸರು..!
ವಾಹನ ಚಾಲನೆ ಮಾಡುವಾಗ ಹೆಡ್‍ಫೋನ್‍ಗಳನ್ನು ಬಳಸುವುದು ಅಪಾಯಕಾರಿ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಹೆಡ್‍ಫೋನ್ ಬಳಸಿದರೆ ದಂಡ ವಿಧಿಸಲಾಗುತ್ತದೆ.

ಹೆಡ್‍ಫೋನ್ ಬಳಸಿ ಮಾತನಾಡಿದರೆ, ಮ್ಯೂಸಿಕ್ ಕೇಳಿದರೆ ರಸ್ತೆಯ ಮೇಲಿರಬೇಕಾದ ಗಮನವು ಬೇರೆ ಕಡೆಗೆ ಹೋಗಿ ಅಪಘಾತಗಳಾಗುತ್ತವೆ. ಇದು ಅಪರಾಧವೆಂದು ಗೊತ್ತಿದ್ದರೂ ವಾಹನ ಸವಾರರು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ವಾಹನ ಸವಾರಿ ವೇಳೆ ಹೆಡ್‍ಫೋನ್ ಬಳಕೆ ಭಾರತದ ರಸ್ತೆಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ.

ವಾಹನ ಸವಾರಿ ವೇಳೆಯಲ್ಲಿ ಆಟೋರಿಕ್ಷಾ ಡ್ರೈವರ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಡ್‍ಫೋನ್ ಬಳಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಲ್ಲಿನ ಮೀರಾ ರೋಡ್‍ನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಾಚರಣೆಯಲ್ಲಿ ವಾಹನ ಚಾಲನೆ ಮಾಡುವಾಗ ಹೆಡ್‍ಫೋನ್ ಬಳಸುತ್ತಿದ್ದ ಆಟೋ ಡ್ರೈವರ್‍ಗಳ ತಪಾಸಣೆ ನಡೆಸಲಾಯಿತು. ಆಟೋ ಡ್ರೈವರ್‍ಗಳ ಬಳಿಯಿದ್ದ ಹೆಡ್‍ಫೋನ್‍ಗಳನ್ನು ವಶಕ್ಕೆ ಪಡೆಯಲಾಯಿತು.

ಈ ರೀತಿ ವಶಕ್ಕೆ ಪಡೆದ ಹೆಡ್‍ಫೋನ್‍ಗಳಿಗೆ ಬೆಂಕಿಯಿಟ್ಟು ನಾಶ ಪಡಿಸಲಾಯಿತು. ಪೊಲೀಸರು ಹೆಡ್‍ಫೋನ್ ಬಳಸಿ ಆಟೋರಿಕ್ಷಾ ಚಲಾಯಿಸದಂತೆ ಆಟೋ ಚಾಲಕರಿಗೆ ಹಲವು ಬಾರಿ ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೇ ಹೆಡ್‍ಫೋನ್ ಬಳಸುತ್ತಿದ್ದ ಕಾರಣಕ್ಕೆ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಪೊಲೀಸರು ಕೈಗೊಂಡಿದ್ದ ಈ ವಿಶೇಷ ಕಾರ್ಯಾಚರಣೆಯ ವೀಡಿಯೊ ಹೆಚ್‍ಪಿ ಲೈವ್ ನ್ಯೂಸ್‍ನಲ್ಲಿ ವೈರಲ್ ಆಗಿದೆ. ಹೆಡ್‍ಫೋನ್ ಹಾಕಿಕೊಂಡು ಆಟೋ ಚಾಲನೆ ಮಾಡುತ್ತಿದ್ದ ಚಾಲಕರ ಹೆಡ್‍ಫೋನ್‍ಗಳನ್ನು ಕಸಿದುಕೊಂಡು ಅವುಗಳಿಗೆ ಬೆಂಕಿ ಹಚ್ಚುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಈ ಕಾರ್ಯಾಚರಣೆಯ ನಂತರ ಹೆಡ್‍ಫೋನ್ ಬಳಸಿ ಆಟೋರಿಕ್ಷಾ ಚಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗ ಬಹುದಾದರೂ ಹೆಡ್‍ಫೋನ್‍ಗಳಿಗೆ ಬೆಂಕಿ ಹಚ್ಚಿದ್ದರಿಂದ ತ್ಯಾಜ್ಯದ ಜೊತೆಗೆ ವಾಯು ಮಾಲಿನ್ಯವು ಸಹ ಉಂಟಾಗಿದೆ. ಪೊಲೀಸರ ಈ ಕ್ರಮಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಡ್‍ಫೋನ್‍ಗಳನ್ನಾಗಲಿ ಅಥವಾ ಪ್ಲಗ್ ಇನ್ ಟೈಪ್ ಇಯರ್‍ಫೋನ್‍ಗಳನ್ನಾಗಲಿ ಬಳಸಿದರೆ ಅವುಗಳಿಂದ ಬೇರೆ ವಾಹನಗಳು ಮಾಡುವ ಶಬ್ದವು ಕೇಳಿಸುವುದಿಲ್ಲ. ಇದರಿಂದ ಹೆಚ್ಚು ವಾಹನಗಳಿರುವ ರಸ್ತೆಗಳಲ್ಲಿ ತೊಂದರೆಯಾಗುತ್ತದೆ.
ಒಂದು ವೇಳೆ ಹೆಡ್‍ಫೋನ್ ಮೂಲಕ ಯಾರ ಜೊತೆಯಾದರೂ ಮಾತನಾಡುತ್ತಿದ್ದರೆ, ಆಗ ಗಮನವು ಬೇರೆ ಕಡೆಗೆ ಹೋಗುವ ಸಾಧ್ಯತೆಗಳಿರುತ್ತವೆ. ಇದರಿಂದ ಅಪಘಾತಗಳಾಗುತ್ತವೆ. ಇದರ ಬದಲು ಸ್ಪೀಕರ್‍ಗಳಿಂದ ಹಾಡುಗಳನ್ನು ಕೇಳಿದರೆ ಅಷ್ಟೇನೂ ತೊಂದರೆಗಳಾಗುವುದಿಲ್ಲ.

ಗಮನಿಸಬೇಕಾದ ಸಂಗತಿಯೆಂದರೆ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಬ್ಲೂಟೂಥ್ ಬಳಸಿ ಫೋನ್ ಕಾಲ್‍ಗಳನ್ನು ಅಟೆಂಡ್ ಮಾಡುವುದು ಸಹ ಕಾನೂನು ಬಾಹಿರ. ಇದಕ್ಕಾಗಿ ಪೊಲೀಸರು ದಂಡ ವಿಧಿಸಬಹುದು. ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತನಾಡುವ ಬದಲು, ತೀರಾ ಅನಿವಾರ್ಯ ಎನಿಸಿದರೆ ವಾಹನಗಳನ್ನು ಪಕ್ಕಕ್ಕೆ ಹಾಕಿ ಮಾತನಾಡುವುದು ಒಳ್ಳೆಯದು.


Click it and Unblock the Notifications