ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ; ಬಿಎಂಡಬ್ಲ್ಯು ಅಧಿಕೃತ ವಾಹನ
ಅಂತೂ ಇಂತೂ ಕೊನೆಗೂ ದೇಶದ ಪ್ರಧಾನ ಮಂತ್ರಿ ಅವರ ಅಧಿಕೃತ ವಾಹನ ಯಾವುದು ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ. ಹೌದು, ಇದುವರೆಗೆ ಸ್ವದೇಶಿ ನಿರ್ಮಿತ ಮಹೀಂದ್ರ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಳಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇನ್ನು ಮುಂದೆ ತಮ್ಮ ಅಧಿಕೃತ ವಾಹನ ಬಿಎಂಡಬ್ಲ್ಯು 7 ಸಿರೀಸ್‌ನಲ್ಲಿ ಪಯಣಿಸಲಿದ್ದಾರೆ.
ಇವನ್ನೂ ಓದಿ: ಸ್ಕಾರ್ಪಿಯೊಗೆ ಜೈ ಅನ್ನಿ: ಮೋದಿಗೆ ಮಹೀಂದ್ರ
ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್
ಪ್ರಧಾನಿ ಅಧಿಕೃತ ವಾಹನ ಬಳಕೆಯ ಕುರಿತು ಇದುವರೆಗೆ ಹಲವಾರು ಊಹಾಪೋಹಗಳಿದ್ದವು. ಆದರೆ ಭದ್ರತೆಯ ದೃಷ್ಟಿಕೋನದಲ್ಲಿ ಮೋದಿಗೆ ಬಿಎಂಡಬ್ಲ್ಯು ವಾಹನ ಬಳಕೆ ಮಾಡುವಂತೆ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಸೂಚನೆ ನೀಡಿದೆ. ಈ ಬೆಳವಣಿಗೆಗಳು ಮಹೀಂದ್ರಗೆ ಹಿನ್ನಡೆಯಾಗಿ ಪರಿಣಮಿಸಿದ್ದು, ಈ ದೇಶೀಯ ವಾಹನ ತಯಾರಕ ಸಂಸ್ಥೆಯು ಇನ್ನು ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎಂಬುದು ಸ್ಪಷ್ಟವಾಗಿದೆ. ಕೇವಲ ನಿರ್ವಹಣೆ ಹಾಗೂ ಆಯಾಮದ ವಿಚಾರದಲ್ಲಿ ಮಾತ್ರವಲ್ಲ ಗರಿಷ್ಠ ಸುರಕ್ಷತೆ ಒದಗಿಸುವುದರಲ್ಲೂ ಮಹೀಂದ್ರ ನಂಬಿಕೆ ಗಿಟ್ಟಿಸಿಕೊಳ್ಳಬೇಕಾಗಿದೆ.

ಪ್ರಮಾಣ ವಚನ ಸಮಾರಂಭಕ್ಕೆ ತಮ್ಮ ನೆಚ್ಚಿನ ಸ್ಕಾರ್ಪಿಯೊ ಕಾರಲ್ಲೇ ಆಗಮಿಸಿದ್ದ ಮೋದಿ, ಇದೀಗ ಗರಿಷ್ಠ ಭದ್ರತೆಯ ಬಿಎಂಡಬ್ಲ್ಯು 7 ಸಿರೀಸ್ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನೇ ಬಳಕೆ ಮಾಡುತ್ತಿದ್ದರು. ಆದರೆ ಮೋದಿ ಕಾರಿನಲ್ಲಿ ಅನೇಕ ಬದಲಾವಣೆಗಳು ಕಂಡುಬರಲಿದೆ. ಇದರಂತೆ ಪ್ರಧಾನಿಯಾದ ಮೊದಲ ದಿನದಲ್ಲೇ ಬಿಎಂಡಬ್ಲ್ಯು 7 ಸಿರೀಸ್ ಕಾರಿನಲ್ಲೇ ಮೋದಿ ಕಾರ್ಯಾಲಯಕ್ಕೆ ಆಗಮಿಸಿದ್ದರು.

ಮೋದಿಗೆ ಬೇಕಾದ ಸಕಲ ರೀತಿಯ ಭದ್ರತಾ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧ ಎಂದು ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಸಿಒಡಿ ಆನಂದ್ ಮಹೀಂದ್ರ ವಿನಂತಿಕೊಂಡರೂ ಸಹ ಯಾವುದೇ ಫಲವುಂಟಾಗಲಿಲ್ಲ.

ಚುನಾವಣಾ ಪ್ರಚಾರದ ವೇಳೆ ದೇಶದ್ಯಾಂತ ಮೇಡ್ ಇನ್ ಇಂಡಿಯಾ ಸ್ಕಾರ್ಪಿಯೊದಲ್ಲೇ ಸುತ್ತಾಡುತ್ತಿದ್ದರು. ಆದರೆ ಮಾಜಿ ಪಿಎಂ ರಾಜೀವ್ ಗಾಂಧಿ ಬಳಿಕ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಪ್ರಧಾನಿ ಎಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿಗೆ ಗರಿಷ್ಠ ಭದ್ರತೆ ಒದಗಿಸಲು ವಿಶೇಷ ರಕ್ಷಣಾ ಪಡೆ ನಿರ್ಧರಿಸಿತ್ತು.

ಇದಕ್ಕೂ ಮೊದಲು ಸ್ಕಾರ್ಪಿಯೊ ಕಾರನ್ನೇ ಬಳಕೆ ಮಾಡುವಂತೆ ಮೋದಿಗೆ ಆನಂದ್ ಮಹೀಂದ್ರ ಪತ್ರ ಬರೆದಿದ್ದರು. ಅಲ್ಲದೆ ದೇಶದ ಪ್ರಧಾನಿಯೊಬ್ಬರು ಸ್ವದೇಶಿ ನಿರ್ಮಿತ ಸ್ಕಾರ್ಪಿಯೊದಲ್ಲಿ ಪಯಣಿಸಿದ್ದಲ್ಲಿ ನಮ್ಮ ಹಾಗೂ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರವಾಗಲಿದೆ ಎಂದಿದ್ದರು.

1988ನೇ ಇಸವಿಯಲ್ಲಿ ಸ್ಥಾಪಿತಗೊಂಡಿದ್ದ ವಿಶೇಷ ರಕ್ಷಣಾ ಪಡೆಯು (ಎಸ್‌ಪಿಜಿ) ದೇಶದ ಪ್ರಧಾನಿ ಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಒದಗಿಸುವಲ್ಲಿ ಕಟುಬದ್ಧವಾಗಿದೆ. ಅಲ್ಲದೆ ಮಹೀಂದ್ರಗಿಂತಲೂ ಹೆಚ್ಚು ಭದ್ರತೆಯನ್ನು ಒಳಗೊಂಡಿರುವ ಬಿಎಂಡಬ್ಲ್ಯು 7 ಸಿರೀಸ್ ಹೆಚ್ಚು ಸೂಕ್ತ ಎಂದು ಸಲಹೆ ನೀಡಿತ್ತು.

ದೇಶದ ಅತ್ಯಂತ ಸುರಕ್ಷಿತ ವಾಹನ ಎಂದು ಗುರುತಿಸಿಕೊಂಡಿರುವ ಪ್ರಧಾನಿ ಅವರ ಬಿಎಂಡಬ್ಲ್ಯು 7 ಸಿರೀಸ್, ಬಾಂಬ್, ಗುಂಡಿನ ದಾಳಿ ಹಾಗೂ ರಾಸಾಯನಿಕ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.

ವಿಶೇಷವಾಗಿ ತಯಾರಿಸಲ್ಪಟ್ಟ ಬಿಎಂಡಬ್ಲ್ಯು 7 ಸಿರೀಸ್ ಕಾರಿನ ಮಗದೊಂದು ವೈಶಿಷ್ಟ್ಯವೆಂದರೆ ಇದು ಫ್ಲ್ಯಾಟ್ ಟೈರ್‌ನಲ್ಲೇ ಸುಮಾರು ಕೀ.ಮೀ.ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಳವಡಿಸಲಾಗಿರುವ ಮುಂದುವರಿದ ಶಾಖ ಸಂದೇಕಗಳು ಕ್ಷಿಪಣಿ ಹಾಗೂ ಆ್ಯಸಿಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕ ಒದಗಿಸುತ್ತದೆ.

ಮಾಜಿ ಎಸ್‌ಪಿಜಿ ಅಧಿಕಾರಿಯೊಬ್ಬರ ಪ್ರಕಾರ ಪ್ರಧಾನಿ ದರ್ಜೆಯ ಹುದ್ದೆಯಲ್ಲಿರುವವರಿಗೆ ಸ್ಕಾರ್ಪಿಯೊ ಯೋಗ್ಯ ವಾಹನವಲ್ಲ. ಇದರ ಉದ್ದಳತೆಯು ವಿಶೇಷವಾಗಿಯೂ ಎತ್ತರ ಸುರಕ್ಷತೆಗೆ ಬೆದರಿಕೆಯಾಗಲಿದೆ ಎಂದಿದ್ದರು. ಅಲ್ಲದೆ ಮೋದಿಗೆ ಒದಗಿಸಲಾಗಿರುವ ಬಿಎಂಡಬ್ಲ್ಯು 7 ಸಿರೀಸ್ 760ಎಲ್‌ಐ ಹೈ ಸೆಕ್ಯೂರಿಟಿ ಎಡಿಷನ್, ಸಾಮಾನ್ಯ ಹೈ ಸೆಕ್ಯೂರಿಟಿ ವಾಹನಗಳಿಗಿಂತಲೂ ಗರಿಷ್ಠ ಮಟ್ಟದ ಭದ್ರತೆಯನ್ನು ಪಡೆದುಕೊಂಡಿದೆ.

ಅಷ್ಟೇ ಅಲ್ಲದೆ ವಿಶೇಷ ಪರಣಿತಿ ಪಡೆದ ಚಾಲಕರು ಇದನ್ನು ಚಾಲನೆ ಮಾಡಲಿದೆ. ಬಿಎಂಡಬ್ಲ್ಯು ಇದಕ್ಕಾಗಿ ವಿಶೇಷ 'ಟ್ರೈನಿಂಗ್ ಫಾರ್ ಫ್ರೊಫೆಷನಲ್' ಎಂಬ ತರಬೇತಿಯನ್ನು ಚಾಲಕರಿಗೆ ನೀಡುತ್ತಿದ್ದು, ತೀವ್ರತರ ಪರಿಸ್ಥಿತಿಯಲ್ಲೂ ಹೇಗೆ ವಾಹನ ನಿಭಾಯಿಸಬೇಕು ಎಂಬುದನ್ನು ಪಠಿಸಲಿದ್ದಾರೆ. ಅತ್ಯಂತ ನುರಿತ ಭದ್ರತಾ ಪಡೆಯ ಮಾರ್ಗದರ್ಶನದಲ್ಲಿ ದಾಳಿ ವೇಳೆಯಲ್ಲೂ ಹೇಗೆ ಪಾರು ಮಾಡಬೇಕು ಎಂಬುದನ್ನು ಚಾಲಕರಿಗೆ ಹೇಳಿಕೊಡಲಿದ್ದಾರೆ.

ವೈಯಕ್ತಿಕರಣಗೊಳಿಸಿದ ಮೋದಿ ಕಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಬಿಎಂಡಬ್ಲ್ಯು ಕಾರುಗಳ ಸೇರ್ಪಡೆ, ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳ ಸ್ಥಾಪನೆಯಾಗಲಿದೆ. ಬಾಂಬ್ ಸ್ಕ್ವಾಡ್‌ಗಳ ಹೊರತಾಗಿ ಮೋದಿ ಕಾವಲು ಪಡೆಯಲ್ಲಿ ಒಂಬತ್ತು ಕಾರುಗಳು ಸುತ್ತಾಡುವ ನಿರೀಕ್ಷೆಯಿದೆ. ಈ ಪೈಕಿ ಕನಿಷ್ಠ ಎರಡು ಕಾರುಗಳು ಬಿಎಂಡಬ್ಲ್ಯು ನಕಲಿ ಮಾದರಿಗಳನ್ನು ಹೊಂದುವ ಸಾಧ್ಯತೆಯಿದ್ದು, ಐದು ಬೆಂಗಾವಲು ವಾಹನಗಳಿರಲಿದೆ. ಹಾಗೆಯೇ ಬೆದರಿಕಾ ಪ್ರಮಾಣವನ್ನು ಪರಿಗಣಿಸಿ ಎಸ್‌ಪಿಜಿ, ಪ್ರಧಾನ ಮಂತ್ರಿಗಾಗಿ ನಕಲಿ ಮಾರ್ಗಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಇವೆಲ್ಲದರ ಜೊತೆಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಸದಾ ಸುತ್ತಾಡುತ್ತಿರುವ ನರೇಂದ್ರ ಮೋದಿಗಾಗಿ ಏರ್ ಇಂಡಿಯಾ ಒನ್ ವಿಮಾನದ ವಿಶೇಷ ಸೇವೆಯನ್ನು ಪಡೆಯುವ ಸಾಧ್ಯತೆಯಿದೆ. ಇದು ಗರಿಷ್ಠ ಭದ್ರತೆಯೊಂದಿಗೆ ಯಾವುದೇ ಕ್ಷಣದಲ್ಲಾದರೂ ದೇಶದ ಪ್ರಧಾನ ಮಂತ್ರಿಯ ಪ್ರಯಾಣದ ಬೇಡಿಕೆಗಳನ್ನು ಪೂರೈಸಲಿದೆ.

ಪವರ್: 439 ಬಿಎಚ್‌ಪಿ
ವೇಗವರ್ಧನೆ: 7.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
ಟ್ರಾನ್ಸ್‌ಮಿಷನ್: 6 ಸ್ಪೀಡ್ ಆಟೋಮ್ಯಾಟಿಕ್


Click it and Unblock the Notifications








