1,40,937 ಕಿ.ಮೀಗಳಿಗೆ ಏರಿಕೆಯಾದ ರಾಷ್ಟ್ರೀಯ ಹೆದ್ದಾರಿಗಳ ಉದ್ದ
ನವೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು ಸುಮಾರು 1,40,937 ಕಿ.ಮೀಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ದೇಶಾದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು 2014ರ ಏಪ್ರಿಲ್ ನಲ್ಲಿ ಸುಮಾರು 91,287 ಕಿ.ಮೀಗಳಾಗಿತ್ತು.

ಈ ನವೆಂಬರ್ ಅಂತ್ಯದ ವೇಳೆಗೆ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು ಸುಮಾರು 1,40,937 ಕಿ.ಮೀಗಳಾಗಿದೆ ಎಂದು ಅವರು ಹೇಳಿದರು. 2014 - 15ರಿಂದ ಈ ವರ್ಷದ ನವೆಂಬರ್ ಅಂತ್ಯದವರೆಗೆ ಸುಮಾರು 82,058 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುರಿಯನ್ನು ಹೊಂದಲಾಗಿತ್ತು. ಈ ಅವಧಿಯಲ್ಲಿ ಸುಮಾರು 68,068 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಗಡ್ಕರಿ ಹೇಳಿದರು.

ಸುಮಾರು ರೂ. 1,13,000 ಕೋಟಿ ರೂಪಾಯಿ ವೆಚ್ಚದ 4,970 ಕಿ.ಮೀ ವ್ಯಾಪ್ತಿಯ 49 ಯೋಜನೆಗಳು ಈಗ ವಿವಿಧ ಹಂತಗಳಲ್ಲಿವೆ. ಈ ಯೋಜನೆಗಳನ್ನು 2023 - 2024 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದರು. ಇಲಾಖೆಯು 27 ಹೆಚ್ಚುವರಿ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಥವಾ ಪ್ರವೇಶ ನಿಯಂತ್ರಿತ ಹೆದ್ದಾರಿಗಳ ಪರಿಕಲ್ಪನೆಯನ್ನು ಒಟ್ಟು ರೂ. 3.6 ಲಕ್ಷ ಕೋಟಿ ಹೂಡಿಕೆಯೊಂದಿಗೆ ಆರಂಭಿಸಿದೆ ಎಂದು ಗಡ್ಕರಿ ಹೇಳಿದರು.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿರವರು, ವಿಶ್ವಬ್ಯಾಂಕ್ ಸಾಲದ ನೆರವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಂಟರ್ ಕನೆಕ್ಟಿವಿಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಂ (ಎನ್‌ಎಚ್‌ಐಐಪಿ) ಅಡಿಯಲ್ಲಿ 1,100 ಕಿ.ಮೀ ರಸ್ತೆ ಯೋಜನೆಗಳ ಪೈಕಿ ಸುಮಾರು 990 ಕಿ.ಮೀಗಳ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದಕ್ಕಾಗಿ ಸುಮಾರು ರೂ. 5,565 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಫಾಸ್ಟ್ಯಾಗ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷದ ಡಿಸೆಂಬರ್ 11 ರವರೆಗೆ ಒಟ್ಟು ಟೋಲ್ ಪ್ಲಾಜಾ ಶುಲ್ಕದ ಸುಮಾರು 96%ನಿಂದ 97%ನಷ್ಟು ಶುಲ್ಕವನ್ನು ಫಾಸ್ಟ್‌ಟ್ಯಾಗ್ ಮೂಲಕ ಸಂಗ್ರಹಿಸಲಾಗಿದೆ ಎಂದು ಹೇಳಿದರು. 2020 - 21 ರಲ್ಲಿ ರೂ. 27,744.15 ಕೋಟಿ ಟೋಲ್ ಶುಲ್ಕವನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾಗಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡ್ವಾನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಎಟಿಎಂಸಿ) ಸಹಾಯದಿಂದ ರಸ್ತೆ ಸುರಕ್ಷತೆಯನ್ನು ಬಲಪಡಿಸುತ್ತಿದೆ. ಈ ತಂತ್ರಜ್ಞಾನವು ಮಿತಿ ಮೀರಿದ ವಾಹನಗಳ ಮೇಲೆ ನಿರ್ಬಂಧಗಳನ್ನು ಹಾಕಿ, ಹೆದ್ದಾರಿಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರ ಜೊತೆಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಸುರಕ್ಷತಾ ಆಡಿಟ್ ನಡೆಸಲಾಗುತ್ತಿದೆ.

ಇದರ ಅಡಿಯಲ್ಲಿ ಹೆದ್ದಾರಿಗಳಲ್ಲಿರುವ ಅಪಘಾತ ಪೀಡಿತ ಬ್ಲಾಕ್ ಸ್ಪಾಟ್ ಗಳನ್ನು ತೆಗೆದುಹಾಕಲಾಗುತ್ತಿದೆ. ಸದ್ಯಕ್ಕೆ 4,500 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಂದು ಸಾವಿರ ಬ್ಲಾಕ್ ಸ್ಪಾಟ್ ಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಈ ಹಿಂದೆ 2500 ಬ್ಲಾಕ್ ಸ್ಪಾಟ್ ಗಳನ್ನು ಸರಿಪಡಿಸಲಾಗಿದೆ. ದೇಶದಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಸಾರಿಗೆ ಸಚಿವ ನಿತಿನ್ ಗಡ್ಕರಿ ರವರು ಹೆದ್ದಾರಿಯಲ್ಲಿ ವಾಹನಗಳ ವೇಗವನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.

ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಚಲಿಸುವ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಲು ಸಂಸತ್ತಿನಲ್ಲಿ ಶೀಘ್ರದಲ್ಲೇ ಮಸೂದೆಯನ್ನು ಮಂಡಿಸುವುದಾಗಿ ಅವರು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚತುಷ್ಪಥ ರಸ್ತೆಗಳ ವೇಗದ ಮಿತಿ ಪ್ರತಿ ಗಂಟೆಗೆ ಕನಿಷ್ಠ 100 ಕಿ.ಮೀ ಆಗಿರಬೇಕು. ಇನ್ನು ದ್ವಿಪಥ ಹಾಗೂ ನಗರ ರಸ್ತೆಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಹಾಗೂ 75 ಕಿ.ಮೀಗಳಿಗೆ ಹೆಚ್ಚಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ.

ದೇಶವು ಮಾಲಿನ್ಯ ಹಾಗೂ ಆರ್ಥಿಕ ಸಮಸ್ಯೆಗಳತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಪೆಟ್ರೋಲಿಯಂಗಾಗಿ ವಾರ್ಷಿಕ ರೂ. 8 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಪ್ರಮಾಣವು ರೂ. 25 ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಪ್ಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಇಲಾಖೆಯು ಈ ವರ್ಷ ಇದುವರೆಗೂ 12,000 ಕಿಮೀ ರಸ್ತೆ ನಿರ್ಮಾಣದ ಗುರಿಯಲ್ಲಿ 5,600 ಕಿ.ಮೀ ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯ ಹೊರತಾಗಿಯೂ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಗಿರಿಧರ್ ಅರಮನೆ ರವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಗಿರಿಧರ್ ಅರಮನೆ ರವರು, ಈ ವರ್ಷ ಸುಮಾರು 12 ಸಾವಿರ ಕಿ.ಮೀ ಗುರಿ ಹೊಂದಿದ್ದು, ಇಲ್ಲಿಯವರೆಗೆ 5,600 ಕಿ.ಮೀ ಗುರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಉಳಿದ ರಸ್ತೆ ನಿರ್ಮಾಣ ಕಾರ್ಯವು ಸಹ ಉತ್ತಮ ಸ್ಥಿತಿಯಲ್ಲಿವೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ನಮ್ಮ ಗುರಿಯನ್ನು ಪೂರೈಸುವ ಬಗ್ಗೆ ಭರವಸೆ ಹೊಂದಿದ್ದೇವೆ ಎಂದು ತಿಳಿಸಿದರು.

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 2018 ಹಾಗೂ 2019 ರ ಅವಧಿಗೆ ಹೋಲಿಸಿದರೆ ಈಗಿರುವ ರಸ್ತೆ ನಿರ್ಮಾಣದ ವೇಗವು ಉತ್ತಮವಾಗಿಲ್ಲ. ಈಗ ನಾವು 6 ಲೇನ್ ಹಾಗೂ 8 ಲೇನ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಲೇನ್ - ಕಿ.ಮೀ ನಿರ್ಮಾಣವು ಐತಿಹಾಸಿಕ ಸರಾಸರಿಗೆ ಹೋಲಿಸಿದರೆ 1.5 ಪಟ್ಟು ಹತ್ತಿರದಲ್ಲಿದೆ. 2018 ಹಾಗೂ 2019ರ ಅವಧಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷವು ಉತ್ತಮವಾಗಿಲ್ಲ.

ನಮ್ಮ ಗುರಿ ಹೆಚ್ಚಾಗಿದ್ದು, ನಾವು ಈಗ ನಿರ್ಮಿಸುತ್ತಿರುವ ರಸ್ತೆಗಳು ಹಿಂದಿನ ರಸ್ತೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ಗಿರಿಧರ್ ಅರಮನೆ ಹೇಳಿದರು. 2018 ಹಾಗೂ 2019 ರಲ್ಲಿ ಮುಖ್ಯವಾಗಿ ನಾಲ್ಕು ಲೇನ್ ಹಾಗೂ ದ್ವಿಪಥಕ್ಕೆ ಹೋಲಿಸಿದರೆ ನಾವು ಈಗ ಹೆಚ್ಚಾಗಿ ಎಂಟು ಲೇನ್, ಎಕ್ಸ್‌ಪ್ರೆಸ್‌ವೇ ಹಾಗೂ ಕೆಲವು ರಾಜ್ಯಗಳಲ್ಲಿ ಆರು ಪಥದ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ನಿರ್ಮಾಣವು ತುಂಬಾ ಹೆಚ್ಚಾಗಿದೆ. ನಾವು ಲೇನ್ ಕಿ.ಮೀ ಅನ್ನು ನೋಡಿದಾಗ, ಆ ಎರಡು ವರ್ಷಗಳಿಗಿಂತ ಸುಮಾರು 1.5ರಿಂದ 1.8 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಭಾರತಮಾಲಾ ಯೋಜನೆ ಬಗ್ಗೆ ಮಾತನಾಡಿದ ಅವರು, ಈವರೆಗೆ ನಾವು 6,600 ಕಿ.ಮೀಗಳ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದಾರೆ.


Click it and Unblock the Notifications