Expressway: ಬೆಂಗಳೂರು-ಪುಣೆ ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಹೆದ್ದಾರಿ ಬರುತ್ತೆ, 7 ಗಂಟೆ ಪ್ರಯಾಣ?
ಬಹುನಿರೀಕ್ಷಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ (Bengaluru-Pune Expressway) ಕಾಮಗಾರಿ ಅತಿ ಶೀಘ್ರದಲ್ಲೇ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನೂತನ ಹೆದ್ದಾರಿ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ಮಾತ್ರ ಬಾಕಿಯಿದೆ. ಹೊಸ ಎಕ್ಸ್‌ಪ್ರೆಸ್‌ವೇಯಿಂದ ಎರಡು ರಾಜ್ಯದ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದ್ದು, ಪ್ರಯಾಣದ ಅವಧಿಯು ಕಡಿಮೆಯಾಗಲಿದೆ.
ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದ 9 (ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪ ಈ ಳ, ಗದಗ, ಬಾಗಲಕೋಟೆ, ಬೆಳಗಾವಿ) ಮತ್ತು ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ (ಸಾಂಗ್ಲಿ, ಸತಾರ, ಪುಣೆ) ಹಾದು ಹೋಗಲಿದೆ ಎಂಬ ವಿವರಗಳು ಲಭ್ಯವಾಗಿವೆ. ನೂತನ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಹೊತ್ತಿದೆ.

ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯೋಜನೆಗೆ ಸರಿ ಸುಮಾರು 21,000 ಎಕರೆಯಷ್ಟು ಜಾಗದ ಅವಶ್ಯಕತೆ ಇದೆ. ಅದಕ್ಕಾಗಿ ಕರ್ನಾಟಕದಲ್ಲಿ ಬರೋಬ್ಬರಿ 12,355 ಎಕರೆ ಹಾಗೂ ಮಹಾರಾಷ್ಟ್ರದಲ್ಲಿ 7,166 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಎನ್‌ಹೆಚ್‌ಎಐ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ನೂತನ ಹೆದ್ದಾರಿ ನಿರ್ಮಾಣಕ್ಕೆ ರೂ.50,000 ಕೋಟಿಗೂ ಅಧಿಕ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮೊದಲಿಗೆ 6 ಪಥಗಳಲ್ಲಿ ಸಿದ್ಧಗೊಳ್ಳಲಿದೆ. ಆ ಬಳಿಕ 8 ಪಥಗಳಿಗೆ ವಿಸ್ತರಣೆ ಮಾಡಬಹುದು. 2028ರ ಅಂತ್ಯದೊಳಗೆ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದು ವಿವಿಧ ಫ್ಲೈಓವರ್, ಓವರ್ ಬ್ರಿಡ್ಜ್ ಹಾಗೂ ಇಂಟರ್‌ಚೇಂಜ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಹೊಸ ಎಕ್ಸ್‌ಪ್ರೆಸ್‌ವೇ 700 ಕಿ.ಮೀ ಉದ್ದವಿರಲಿದೆ. ಬೆಂಗಳೂರು ಮತ್ತು ಪುಣೆ ಮಧ್ಯೆ ಸದ್ಯವಿರುವ 14 ರಿಂದ 15 ಗಂಟೆಗಳ ಪ್ರಯಾಣದ ಅವಧಿಯು 7 ಗಂಟೆಗಳಿಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗವನ್ನು ಗಂಟೆಗೆ 120 ಕಿ.ಮೀಗೆ ನಿಗದಿಪಡಿಸಬಹುದು ಎಂಬ ವಿವರಗಳು ಲಭ್ಯವಾಗಿವೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಕೂಡ ಬಹುತೇಕ ಪೂರ್ಣ:
ಈ ಹೆದ್ದಾರಿಯು 2026ರ ಜೂನ್‌ನಲ್ಲಿ ಲೋಕಾರ್ಪಣೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದು 262 ಕಿಲೋಮೀಟರ್ ಉದ್ದವಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹಾದು ಹೋಗಲಿದೆ. ಅದರಲ್ಲೂ ರಾಜ್ಯದಲ್ಲಿ 71 ಕಿಲೋಮೀಟರ್ ಉದ್ದದ ರಸ್ತೆಯಿದ್ದು, ಕಾಮಗಾರಿಯು ಪೂರ್ಣಗೊಂಡಿದ್ದು, ವಾಹನಗಳು ಕೂಡ ಸಂಚರಿಸುತ್ತಿವೆ. ಆದರೆ, ತಮಿಳುನಾಡು ಮತ್ತು ಆಂಧ್ರದಲ್ಲಿ ಹೆದ್ದಾರಿ ನಿರ್ಮಾಣದ ಕೆಲಸಗಳು ಇನ್ನೂ ಮುಂದುವರಿಯುತ್ತಿದೆ.
ನೂತನ ಎಕ್ಸ್‌ಪ್ರೆಸ್‌ವೇಯನ್ನು ರೂ.17,000 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನೂತನ ಹೆದ್ದಾರಿಯು 4 ಪಥಗಳನ್ನು ಒಳಗೊಂಡಿರಲಿದೆ. ವಾಹನಗಳ ಸಂಚಾರ ಹೆಚ್ಚಳವಾದರೆ, 8 ಪಥಗಳಿಗೂ ಮೇಲ್ದರ್ಜೆಗೇರಿಸಬಹುದು. ಪ್ರಸ್ತುತ ಬೆಂಗಳೂರು ಮಹಾನಗರಿಯಿಂದ ಕಡಲ ನಗರಿ ಚೆನ್ನೈಗೆ ಹೋಗಲು 5 ರಿಂದ 6 ಗಂಟೆ ಬೇಕಾಗುತ್ತದೆ. ಅದು 3 ಗಂಟೆಗಳಿಗೆ ಇಳಿಯುವ ಸಂಭವವಿದೆ.
ಹೊಸ ಹೆದ್ದಾರಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪ ಆರಂಭಿಕ ಬಿಂದುವನ್ನು ಹೊಂದಿದ್ದು, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ. ಇದು ರಾಜ್ಯದ ಬೆಂ.ಗ್ರಾಂ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರುಗಳಿಗೆ ಸಂಪರ್ಕ ಕೊಂಡಿಯಾಗಿದೆ. 17 ಮೇಲ್ಸೇತುವೆ & 41 ಕೆಳ ಸೇತುವೆಗಳನ್ನು ಪಡೆದಿದೆ. ವಾಹನಗಳ ವೇಗಮಿತಿಯನ್ನು 120 ಕಿ.ಮೀಗೆ ಸೀಮಿತಗೊಳಿಸಬಹುದು ಎನ್ನಲಾಗಿದೆ. ಈಗಾಗಲೇ, ಕರ್ನಾಟಕ ವಿಭಾಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.


Click it and Unblock the Notifications








