ನೂತನ ಸಚಿವರಿಗೆ ಲಕಲಕ ಹೊಳೆಯುವ ಕಾರುಗಳು ಸಿದ್ಧ
ತೀವ್ರ ಕಸರತ್ತಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಮೊದಲ ಹಂತದ 29 ಮಂದಿ ಸಚಿವರ ಪಟ್ಟಿ ಸಿದ್ಧಗೊಂಡಿದೆ. ಒಟ್ಟು ಎರಡು ಹಂತಗಳಾಗಿ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೈಸ್ ಹೈಕಮಾಂಡ್ ಅಂಕಿತ ನೀಡಿದೆ.
ಈ ನಡುವೆ ಐಷಾರಾಮಿ ಸೌಲಭ್ಯ ಪಡೆದುಕೊಳ್ಳಲು ಸಚಿವರ ಆಕಾಂಕ್ಷಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ನೂತನ ಸಂಪುಟದ ಸಚಿವರಿಗೆ ವಿಧಾನಸೌಧ ಕೊಠಡಿ, ಸರಕಾರಿ ಬಂಗ್ಲೆ ಹಾಗೂ ಐಷಾರಾಮಿ ಕಾರುಗಳಿಗಾಗಿ ದುಂದು ವೆಚ್ಚ ಮಾಡಲಾಗುತ್ತದೆ.
ವಾಸ್ತು ಹೆಸರಿನಲ್ಲಿ ಸರಕಾರಿ ಬಂಗ್ಲೆಗಳ ನವೀಕರಣಕ್ಕಾಗಿ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡುತ್ತಾರೆ. ಕಳೆದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲೂ ಇದು ವ್ಯಾಪಕವಾಗಿ ಕಂಡುಬಂದಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರ ಕೂಡಾ ಇದರಿಂದ ಹೊರತಾಗಿಲ್ಲ.
ಸಚಿವರಿಗಾಗಿ ಈಗಾಗಲೇ ನೂತನ ಟೊಯೊಟಾ ಇನ್ನೋವಾ ಕಾರುಗಳು ಸಿದ್ಧಗೊಂಡಿದೆ. ಅಧಿಕೃತ ಪಯಣಕ್ಕಾಗಿ ಇದನ್ನೇ ಬಳಸುತ್ತಾರೋ ಅಥವಾ ತೆರಿಗೆ ಹಣದಿಂದ ಮತ್ತೆ ಇದಕ್ಕಿಂತ ಮಿಗಿಲಾದ ಐಷಾರಾಮಿ ಕಾರು ಖರೀದಿ ಮುಂದಾಗುತ್ತಾರೋ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಹೊಸದಾಗಿ ಸಚಿವರಾಗುವವರಿಗೆ ಸಾರಿಗೆ ವಿಭಾಗ ಕಾರುಗಳನ್ನು ಸಜ್ಜುಗೊಳಿಸಿದೆ. ಇದರಲ್ಲಿ ಟೊಯೊಟಾ ಇನ್ನೋವಾ ಜತೆಗೆ ಟಾಟಾ ಸಫಾರಿ, ಮಹೀಂದ್ರ ಎಕ್ಸ್‌ಯುವಿ 500, ಹೋಂಡಾ ಸಿಆರ್‌ವಿ, ಕರೊಲ್ಲಾ ಹಾಗೂ ಮಾರುತಿ ಡಿಜೈರ್ ಆವೃತ್ತಿಗಳು ಸೇರಿವೆ. ಮೂಲಗಳ ಪ್ರಕಾರ 21 ಇನ್ನೋವಾ ಹೈ ಎಂಡ್ ಕಾರುಗಳು ರೆಡಿಯಾಗಿ ನಿಂತಿವೆ.

ನೂತನ ಸಚಿವರು ತಮಗೆ ಬೇಕಾದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ಕಾರಿಗೆ ಇಬ್ಬರ ಚಾಲಕರ ಸೇವೆ ಕೂಡಾ ಲಭ್ಯವಿದೆ. ಒಟ್ಟಿನಲ್ಲಿ ಐಷಾರಾಮಿ ಜೀವನ ಸಾಗಿಸಲು ಸಚಿವರು ರೆಡಿಯಾಗಿದ್ದಾರೆ.

ಹೊಸ ಕಾರುಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ವಿಚಾರವಾಗಿದ್ದರಿಂದ ಸಚಿವರು ದುಂದು ವೆಚ್ಚ ಮಾಡುವ ಸಂಭವವಿದೆ. ಮೂಲಗಳ ಪ್ರಕಾರ ಸಚಿವರ ಕಾರು ಖರೀದಿಗಾಗಿ 5 ಕೋಟಿ ರುಪಾಯಿಗಳಷ್ಟು ವ್ಯಯ ಮಾಡಲಾಗುತ್ತಿದೆ.

ಇನ್ನು ಚುನಾವಣಾ ಪ್ರಚಾರ ವೇಳೆ ಆಡಿ ಕ್ಯೂ7 ಕಾರಿನಲ್ಲಿ ತಿರುಗಾಡುತ್ತಿದ್ದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಪದಗ್ರಹಣ ಮಾಡಿದ ಬಳಿಕ ಅಧಿಕೃತ ಪಯಣಕ್ಕಾಗಿ ಶಿಷ್ಟಾಚಾರ ಇಲಾಖೆ ನೂತನ ಟೊಯೊಟಾ ಫಾರ್ಚುನರ್ ಕಾರು ಒದಗಿಸಿಗಿದೆ. ಇದು 25 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಸಿಎಂಗೆ ಕಾರು ಹಿಡಿಸಿಲ್ಲವೆಂದರೆ ಬದಲಾಯಿಸುವ ಅವಕಾಶ ಕೂಡಾ ಇದೆ.

ನಿಮ್ಮ ಮಾಹಿತಿಗಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೋಂಡಾ ಸಿಆರ್‌ವಿ ಕಾರನ್ನು ಬಳಕೆ ಮಾಡಿದ್ದರು. ಇದಾದ ಬಳಿಕ ಸಿಎಂ ಹುದ್ದೆ ಆಲಂಕರಿಸಿದ್ದ ಡಿ.ವಿ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಕೂಡಾ ಹೋಂಡಾ ಸಿಆರ್‌ವಿ ಕಾರಿನಲ್ಲೇ ಪಯಣಿಸಿದ್ದರು.

ಒಟ್ಟಿನಲ್ಲಿ ಜನರ ದುಡ್ಡಿನಿಂದಲೇ ಐಷಾರಾಮಿ ಜೀವನ ನಡೆಸುತ್ತಿದ್ದಾರೆಂಬುದನ್ನು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರು ಮರೆಯಬಾರದು. ಹಾಗೆಯೇ ಭ್ರಷ್ಟಚಾರ ರಹಿತ ಆಡಳಿತ ಒದಗಿಸಲು ಸಾಧ್ಯವಾಗಲಿ ಎಂದು ಡ್ರೈವ್ ಸ್ಪಾರ್ಕ್ ಆಶಿಸುತ್ತಿದೆ.


Click it and Unblock the Notifications








