2035ರಿಂದ ಪೆಟ್ರೋಲ್, ಡೀಸೆಲ್ ಕಾರು ಮಾರಾಟ ನಿಷೇಧ ಕಾನೂನು: ಯುರೋಪಿಯನ್ ಪಾರ್ಲಿಮೆಂಟ್ ಔಪಚಾರಿಕ ಅನುಮೋದನೆ
ಜಗತ್ತು ಶೂನ್ಯ ಹೊರಸೂಸುವಿಕೆ ಗುರಿಯತ್ತ ಮುನ್ನುಗ್ಗುತ್ತಿದ್ದು, ಭಾರತವು ಸೇರಿದಂತೆ ವಿವಿಧ ದೇಶಗಳು ಎಲೆಕ್ಟ್ರಿಕ್ ವಾಹನ ತಯಾರಿಕೆಯತ್ತ ಮುಖ ಮಾಡಿವೆ. ಅದಲ್ಲೂ ಐರೋಪ್ಯ ಒಕ್ಕೂಟ ಒಂದು ಹೆಜ್ಜೆ ಮುಂದೆ ಹೊಂದಿದ್ದು, ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟ ಸಂಬಂಧ ಮಹತ್ವವಾದ ನಿರ್ಧಾರವನ್ನು ಕೈಗೊಂಡಿದೆ. ಆ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.
ಐರೋಪ್ಯ ಒಕ್ಕೂಟದ ದೇಶಗಳಲ್ಲಿ 2035ರಿಂದ ಹೊಸ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಮಾರಾಟ ನಿಷೇಧಿಸುವ ಕಾನೂನನ್ನು ಯುರೋಪಿಯನ್ ಪಾರ್ಲಿಮೆಂಟ್ ಔಪಚಾರಿಕವಾಗಿ ಅನುಮೋದಿಸಿದೆ ಎಂದು ವರದಿಯಾಗಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ವೇಗಗೊಳಿಸುವ ಪ್ರಯತ್ನವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಮುಂದಿನ 12 ವರ್ಷಗಳಲ್ಲಿ ವಿವಿಧ ಕಾರು ತಯಾರಕ ಕಂಪನಿಗಳು ಇಂಗಾಲದ ಡೈ ಆಕ್ಸೈಡ್ (CO2) ಹೊರಸೂಸುವಿಕೆಯ ವಾಹನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಕಾನೂನು ಐರೋಪ್ಯ ಒಕ್ಕೂಟದ 27 ದೇಶಗಳಲ್ಲಿ ಜಾರಿಯಾಗಲಿದೆ. ಈಗಾಗಲೇ ಶೇಕಡ 37.5%, ಇಂಗಾಲದ ಹೊರಸೂಸುವಿಕೆಯ ವಾಹನ ತಯಾರಿಕೆಯನ್ನು ಕಡಿಮೆ ಮಾಡಲು ಗುರಿ ಹಾಕಿಕೊಳ್ಳಲಾಗಿದ್ದು, ಅದು 2030ರ ಹೊತ್ತಿಗೆ ಶೇಕಡ 55% ಹಾಗೂ 2035ರ ವೇಳೆಗೆ ಶೇಕಡ 100% ಅಂದರೆ, ಐರೋಪ್ಯ ದೇಶಗಳ ರಸ್ತೆಯಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳೇ ಇರಲಿವೆ. IEC (ಇಂಟರ್ನಲ್ ಕಂಬುಸ್ಟಿವ್ನ್ ಎಂಜಿನ್) ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ವಾಹನದ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಇರುವುದರಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಪೆಟ್ರೋಲ್, ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಮಾರಾಟವನ್ನು ನಿಷೇಧಿಸುವ ಕಾನೂನನ್ನು ಐರೋಪ್ಯ ಒಕ್ಕೂಟದ ದೇಶಗಳು ಕಳೆದ ಅಕ್ಟೋಬರ್ ತಿಂಗಳಲ್ಲೇ ಒಪ್ಪಿಕೊಂಡಿದ್ದು, ಅದಕ್ಕೆ ಅಂತಿಮ ಅನುಮೋದನೆ ಬೇಕಿದ್ದು, ಅದು ಕೂಡ ಮುಂದಿನ ತಿಂಗಳು (ಮಾರ್ಚ್) ದೊರೆಯುವ ಸಾಧ್ಯತೆಯಿದೆ. ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪಲು ಈಗಾಗಲೇ ದೊಡ್ಡ ಕಂಪನಿಗಳು ಮಹತ್ವದ ನಿರ್ಧಾರವನ್ನು ಕೈಗೊಂಡಿವೆ. ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ವೋಕ್ಸ್‌ವ್ಯಾಗನ್ 2033ರಿಂದ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದಿಸಲಾಗುವುದು ಎಂದು ಘೋಷಣೆ ಮಾಡಿದೆ.

ಭಾರತವು ಕೂಡ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಹೊಂದಿದ್ದು, ಅದರ ಭಾಗವಾಗಿ ಕೇಂದ್ರ ಸರ್ಕಾರ ಸಾಕಷ್ಟು ಶ್ರಮವಾಗಿಸುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ ಮಾಡುವುದಾಗಿ ತಿಳಿಸಿದ್ದರು. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಲಿಥಿಯಂ ಐಯಾನ್ ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಆಮದಿಗೆ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗಿತ್ತು.
ಅಲ್ಲದೆ, ಭಾರತ ಸರ್ಕಾರವು ದೇಶಾದ್ಯಂತ ರಸ್ತೆಗಳಲ್ಲಿ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ. ಇದನ್ನು ಸಾಕಾರಗೊಳಿಸಲು ಬಂಡವಾಳ ಹೂಡಿಕೆ ಮಾಡಲು ರೂ.35,000 ಕೋಟಿ ಒದಗಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಿದೆ. ಜೊತೆಗೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುವಂತೆ ಮಾಡಲು ಸಬ್ಸಿಡಿ ಯೋಜನೆಗಳನ್ನು ಕೂಡ ಅನುಷ್ಠಾನ ಮಾಡುತ್ತಿದ್ದು, ಅದರಲ್ಲಿ ಪಕ್ಕದ ಮಹಾರಾಷ್ಟ್ರ ರಾಜ್ಯ ಮುಂದಿದೆ.
ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂದಿವೆ. ಈಗಾಗಲೇ ಟಾಟಾ ನಿಕ್ಸಾನ್ ಇವಿ ಹಾಗೂ ಅತ್ಯಂತ ಕಡಿಮೆ ದರದ ಟಿಯಾಗೊ ಇವಿಯನ್ನು ಮಾರಾಟ ಮಾಡುತ್ತಿದೆ. ಜೊತೆಗೆ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಕೂಡ ನಾವೇನೂ ಕಡಿಮೆ ಇಲ್ಲ ಎಂಬಂತೆ ಇವಿ ತಯಾರಿಕೆಯಲ್ಲಿ ತೊಡಗಿದ್ದು, ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿವೆ.
2035ರಿಂದ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಹೊಸ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಮಾರಾಟವನ್ನು ನಿಷೇಧಿಸುವ ಕಾನೂನನ್ನು ಯುರೋಪಿಯನ್ ಪಾರ್ಲಿಮೆಂಟ್ ಔಪಚಾರಿಕವಾಗಿ ಅನುಮೋದಿಸುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಪ್ರತಿಯೊಂದು ದೇಶಗಳು ಶೂನ್ಯ ಹೊರಸೂಸುವಿಕೆಯ ವಾಹನಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದು, ಇದು ಸಹಕಾರಗೊಂಡರೇ, ಕೆಲವೇ ವರ್ಷಗಳಲ್ಲಿ IEC ಚಾಲಿತ ವಾಹನಗಳು ಇತಿಹಾಸದ ಪುಟ ಸೇರಲಿದ್ದು, ಆದರೆ, ಇದಕ್ಕೆ ದೊಡ್ಡಮಟ್ಟದ ಬೆಂಬಲ ಬೇಕಾಗಿದೆ.


Click it and Unblock the Notifications