ಉ.ಕೊರಿಯಾ ಅಧ್ಯಕ್ಷ ರಷ್ಯಾಗೆ ರೈಲು ಪ್ರಯಾಣ! ಪುಟಿನ್ ಭೇಟಿಗೆ ವಿಮಾನ ಬೇಡವೆಂದ ನಿರಂಕುಶಾಧಿಕಾರಿ
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇತ್ತೀಚೆಗೆ ರೈಲಿನಲ್ಲಿ ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದರು. ಕೊರಿಯಾದಿಂದ ರಷ್ಯಾದ ಮಾಸ್ಕೋ ನಡುವಿನ ಅಂತರ ಸುಮಾರು 1180 ಕಿ.ಮೀ. ಇದ್ದು, ಕೆಲವೇ ಗಂಟೆಗಳ ವಿಮಾನ ಪ್ರಯಾಣವನ್ನು ಕಡೆಗಣಿಸಿ ಕೇವಲ 50 ಕಿ.ಮೀ ವೇಗದಲ್ಲಿ ಚಲಿಸುವ ಐಷಾರಾಮಿ ರೈಲಿನಲ್ಲಿ ಹೊರಟು ರಷ್ಯಾ ತಲುಪಿದ್ದಾರೆ.
ವಿಶ್ವದ ಬಹುತೇಕ ಜನಪ್ರಿಯ ಅಧ್ಯಕ್ಷರು ಹೆಚ್ಚಾಗಿ ವಿಮಾನಗಳನ್ನು ಬಳಸುತ್ತಿದ್ದರೆ ಇವುರು ಮಾತ್ರ ರೈಲಿನಲ್ಲಿ ಪ್ರಯಾಣಿಸುವ ಹಿಂದಿನ ರಹಸ್ಯ ಏನಂತೆ ಗೊತ್ತಾ? ವಿಮಾನಗಳಿಗಿಂತ ರೈಲಿನಲ್ಲಿ ಸುರಕ್ಷಿತವಾಗಿ ತಲುಪುತ್ತಾರಂತೆ. ಅಷ್ಟು ಸುರಕ್ಷತೆಯಿದೆಯೇ ಈ ರೈಲಿನಲ್ಲಿ? ಹೌದು ಕೇವಲ ಉ.ಕೊರಿಯಾ ಅಧ್ಯಕ್ಷರ ಪ್ರಯಾಣಕ್ಕಾಗಿ ನಿರ್ಮಿಸಿಕೊಂಡಿರುವ ಈ ರೈಲಿನ ಬಗ್ಗೆ ತಿಳಿದರೆ ನೀವು ಕೂಡ ಉಬ್ಬೇರಿಸುವುದು ಖಚಿತ.

ಉತ್ತರ ಕೊರಿಯಾ ದೇಶವು ವಿಮಾನ ಮತ್ತು ಕ್ಷಿಪಣಿಗಳಂತಹ ಅನೇಕ ಶಸ್ತ್ರಾಸ್ತ್ರಗಳನ್ನು ತಯಾರಿಸಿದ್ದರೂ, ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆಗಾಗ್ಗೆ ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಡುವುದಿಲ್ಲ. ಪ್ರಸ್ತುತ, ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಧಿಕೃತವಾಗಿ ಭೇಟಿಯಾಗಲು ಸಭೆಯನ್ನು ಏರ್ಪಡಿಸಲಾಗಿದೆ.
ಇದಕ್ಕಾಗಿ ಬರೋಬ್ಬರಿ 1180 ಕಿ.ಮೀ ದೂರವನ್ನು ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಹಾರುವ ಬದಲು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಕಿಮ್ ಜಾಂಗ್ ಉನ್ ಅವರ ಪೂರ್ವಜರು ಕೂಡ ವಿಮಾನ ಪ್ರಯಾಣವನ್ನು ಇಷ್ಟಪಡುವುದಿಲ್ಲ. ವಿಮಾನ ಪ್ರಯಾಣ ಅಪಾಯದಿಂದ ಕೂಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ತಮ್ಮ ಪ್ರಯಾಣಕ್ಕಾಗಿ ವಿಶೇಷವಾಗಿ ಐಷಾರಾಮಿ ಮತ್ತು ಭದ್ರತಾ ಶಸ್ತ್ರಾಸ್ತ್ರಗಳಿಂದ ಕೂಡಿದ ರೈಲನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ರೈಲಿನಲ್ಲಿ ಹಲವು ಕುತೂಹಲಕಾರಿ ಸಂಗತಿಗಳಿವೆ. ಈ ರೈಲು 21 ಕೋಚ್‌ಗಳನ್ನು ಹೊಂದಿದ್ದು, ಪ್ರತಿ ಭೋಗಿಯು ಬುಲೆಟ್ ಪ್ರೂಫ್ ಆಗಿ ವಿನ್ಯಾಸಗೊಳಿಸಲಾಗಿದೆ. ರಾಕೆಟ್ ಲಾಂಚರ್ ಬಂದು ರೈಲಿಗೆ ಅಪ್ಪಳಿಸಿದರೂ ರೈಲಿಗೆ ಯಾವುದೇ ಅಪಾಯವಾಗದ ರೀತಿಯಲ್ಲಿ ರೈಲನ್ನು ವಿನ್ಯಾಸಗೊಳಿಸಲಾಗಿದೆ.
ಪ್ರಯಾಣದ ಸಮಯದಲ್ಲಿ ಅಧ್ಯಕ್ಷ ಕಿಮ್ ಜಾಂಗ್-ಉನ್ ಅವರನ್ನು ಭೇಟಿಯಾಗಲು ಅವರ ಕುಟುಂಬಕ್ಕೆ ಮೀಟಿಂಗ್ ರೂಮ್‌ಗಳು, ಐಷಾರಾಮಿ ಮಲಗುವ ಕೋಣೆಗಳು, ಶೌಚಾಲಯಗಳನ್ನು ರೈಲಿನಲ್ಲಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಈ ರೈಲು ಸಂಪೂರ್ಣ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಶತ್ರುಗಳು ದಾಳಿ ಮಾಡಿದರೆ ಪ್ರತಿದಾಳಿ ಮಾಡಲು ಶಸ್ತ್ರಾಸ್ತ್ರಗಳು 24 ಗಂಟೆಗಳು ಆನ್‌ನಲ್ಲಿ ಇರುತ್ತವೆ.

ಇಷ್ಟೇ ಅಲ್ಲ, ರೈಲು ನೇರ ಉಪಗ್ರಹ ಸಂವಹನ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದು ತನ್ನ ಸಂವಹನ ವ್ಯವಸ್ಥೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ರೈಲಿನಲ್ಲಿ ಕ್ಷಿಪಣಿ ಟ್ರ್ಯಾಕಿಂಗ್ ರಾಡಾರ್‌ಗಳನ್ನು ಸಹ ಅಳವಡಿಸಲಾಗಿದೆ. ಅದರಂತೆ, ಯಾವುದೇ ಕ್ಷಿಪಣಿ ಈ ರೈಲಿನ ಮೇಲೆ ಕೆಲವು ಕಿಲೋಮೀಟರ್ ದೂರದಿಂದ ದಾಳಿ ಮಾಡಲು ಪ್ರಯತ್ನಿಸಿದರೆ, ಈ ರೈಲಿನಲ್ಲಿ ಅಳವಡಿಸಲಾಗಿರುವ ಇತರ ಆಯುಧಗಳು ಸ್ವಯಂಚಾಲಿತವಾಗಿ ಮುನ್ನುಗ್ಗಿ ರೈಲಿಗೆ ಹೊಡೆಯುವ ಮೊದಲೇ ಕ್ಷಿಪಣಿಯನ್ನು ನಾಶಪಡಿಸುತ್ತವೆ.
ರೈಲಿನ ಭಾರೀ ತೂಕ ಮತ್ತು ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕಾರಣ, ರೈಲಿನ ವೇಗವು ಗಂಟೆಗೆ ಗರಿಷ್ಠ 50 ಕಿ.ಮೀ ಇರುತ್ತದೆ. ಹಾಗಾಗಿ ರೈಲು ಸುಮಾರು 1180 ಕಿ.ಮೀ ದೂರವನ್ನು ಕ್ರಮಿಸಲು ಕನಿಷ್ಠ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಪಂಚದಲ್ಲಿ ಪ್ರತಿ ಗಂಟೆಗೆ 110, 250, 320, 600 ಕಿ.ಮೀ ವೇಗದ ರೈಲುಗಳು ಇದ್ದರೂ ಈ ರೈಲಿನ ಆಯ್ಕೆಗೆ ಪ್ರಮುಖ ಕಾರಣ ಸುರಕ್ಷತೆಯಾಗಿದೆ.

ಹಾಗೆಂದು ಅಧ್ಯಕ್ಷ ಕಿಂಗ್ ಜಾಂಗ್ ಉನ್ ವಿಮಾನದಲ್ಲಿ ಪ್ರಯಾಣಿಸುವುದೇ ಇಲ್ಲಿವೇ? ಕಾಲಕಾಲಕ್ಕೆ ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಆದ್ರೆ ಅವರ ಪ್ರಯಾಣದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಅವರ ಪ್ರಯಾಣ ವಿವರಗಳನ್ನು ತುಂಬಾ ಗೌಪ್ಯವಾಗಿ ಇಡಲಾಗುತ್ತದೆ. 2018 ರಲ್ಲಿ, ಅವರು ಸಿಂಗಾಪುರದಲ್ಲಿ ನಡೆದ ಸಭೆಗೆ ವಿಮಾನದಲ್ಲಿ ಪ್ರಯಾಣಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು.


Click it and Unblock the Notifications