ಇನ್ಮುಂದೆ ಒಂದೇ ಒಂದು ರೈಲು ಸಹ ಅಪಘಾತವಾಗಲ್ಲ, ಗೇಮ್ ಚೇಂಜರ್ AI ಸುರಕ್ಷತಾ ಸಾಧನ!
ಕಳೆದ ಜೂನ್ ತಿಂಗಳು ಶಾಲಿಮರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಹಾಗೂ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ನಡುವೆ ಭೀಕರ ಅಪಘಾತವಾಗಿತ್ತು. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಂದಿನಿಂದ ರೈಲ್ವೆ ಇಲಾಖೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮುಂದಾಗಿದೆ.
ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಅತ್ಯಾಧುನಿಕ ಕೃತಕ ಬುದ್ದಿಮತ್ತೆ (AI) ಆಧಾರಿತ ರೈಲು ಚಾಲಕ ಸಹಾಯಕ ವ್ಯವಸ್ಥೆ (Railway Driver Assistance System - RDAS) ಹೆಸರಿನ ಸಾಧನವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಲೋಕೋ ಪೈಲೆಟ್‌ಗಳು ನಿದ್ದೆ ಮಂಪರಿನಲ್ಲಿ ಇದ್ದರೆ ಅಥವಾ ಅವರಿಗೆ ತೂಕಡಿಕೆ ಬಂದರೆ, ಕಣ್ಣಿನ ಚಲನೆಯನ್ನು ಗಮನಿಸುವ ಸಾಧನವಾಗಿರಲಿದೆ.

ಸದ್ಯ, ಈ ಸಾಧನ (device) ಅಭಿವೃದ್ಧಿ ಹಂತದಲ್ಲಿದ್ದು, ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಪ್ರಯೋಗಗಳು ನಡೆಸುತ್ತಿವೆ. ಕೆಲ ದಿನಗಳಲ್ಲಿಯೇ ರೈಲುಗಳಲ್ಲಿ ಬಳಕೆ ಮಾಡುವ ಸಾಧ್ಯತೆಯಿದೆ. ರೈಲುಗಳ (Trains) ಸುರಕ್ಷತೆಯ ದೃಷ್ಟಿಯಿಂದ ಇದೊಂದು ಗೇಮ್ ಚೇಂಜರ್ ಸಾಧನವಾಗಲಿದೆ ಎಂದು ಬಣ್ಣಿಸಲಾಗಿದೆ. ಈ ಡಿವೈಸ್ ಹೇಗೆ ಕೆಲಸ ಮಾಡುತ್ತದೆ. ಇದರ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.
ಮೊದಲಿಗೆ ಬ್ಲಿಂಕ್ ಡಿಟೆಕ್ಷನ್ (Blink Detection) ಬಗ್ಗೆ ಮಾತನಾಡೋಣ. ಇಲ್ಲಿ ರೈಲು ಚಾಲಕರ ಕಣ್ಣಿನ ಚಲನೆಯ ಮೇಲೆ ಗಮನ ಇಡಲಾಗುತ್ತದೆ. ಆತ, ಕಣ್ಣು ಮಿಟಿಕಿಸುವ ಆಧಾರದ ಮೇಲೆ ನಿದ್ರೆ ಮಂಪರನ್ನು ಪತ್ತೆ ಹಚ್ಚಲಾಗುತ್ತದೆ. ಅಲರ್ಟ್ ಸಿಸ್ಟಮ್ (Alert System) ಹೇಳುವುದಾದರೆ, ಒಂದು ವೇಳೆ ರೈಲು ಚಾಲಕ ನಿದ್ರೆ ಮಂಪರಿನಲ್ಲಿ ಇದ್ದರೆ, ಈ ಸಾಧನವು ಶಬ್ದ ಮಾಡುವ ಮೂಲಕ ಆತನನ್ನು ಎಚ್ಚರಿಸುತ್ತದೆ.
ಎಮರ್ಜೆನ್ಸಿ ಬ್ರೇಕಿಂಗ್ (Emergency Braking) ತಿಳಿಯುವುದಾದರೆ, ಲೋಕೋ ಪೈಲೆಟ್ ಸಂಪೂರ್ಣ ನಿದ್ದೆಗೆ ಜಾರಿ, ಈ ಸಾಧನ ಮಾಡುವ ಯಾವುದೇ ಶಬ್ದಕ್ಕೆ ಆತ ಪ್ರತಿಕ್ರಿಯೆ ನೀಡದಿದ್ದಾಗ, ಅದು ತನಗೆ ತಾನೇ ಅಲರ್ಟ್ ಆಗಿ ಎಮರ್ಜೆನ್ಸಿ ಬ್ರೇಕ್ ಹಾಕಿ, ಮುಂದಾಗಬಹುದಾದ ಅಪಘಾತವನ್ನು ತಪ್ಪಿಸುತ್ತದೆ. ಅಷ್ಟರಮಟ್ಟಿಗೆ ಈ ಕೃತಕ ಬುದ್ದಿಮತ್ತೆ ಆಧಾರಿತ ಆರ್‌ಡಿಎಸ್ ಸಾಧನ ಜಾಗೃತವಾಗಿರುತ್ತದೆ.
ಆರ್‌ಡಿಎಎಸ್ ಡಿವೈಸ್ ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ (Vigilance Control Device) ನೊಂದಿಗೆ ಸಂಪರ್ಕಿತವಾಗಿತ್ತು. ಸಂಭಾವ್ಯ ಅಪಾಯವನ್ನು ತಪ್ಪಿಸುತ್ತದೆ. ಈ ಸಾಧನ ಅಭಿವೃದ್ಧಿಗೊಂಡ ಮೇಲೆ 20 ಗೋಡ್ಸ್ ರೈಲು ಎಂಜಿನ್ (WAG9) ಮತ್ತು ಪ್ಯಾಸೆಂಜರ್ ರೈಲು ಎಂಜಿನ್‌ಗಳಲ್ಲಿ (WAP7) ಪ್ರಾಯೋಗಿಕ ಅವಳಡಿಸಲು ತೀರ್ಮಾನಿಸಲಾಗಿದೆ. ಅಲ್ಲಿ ಯಶಸ್ವಿಯಾದರೆ ಉಳಿದ ರೈಲುಗಳಲ್ಲಿ ಬಳಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಇದನ್ನು ಇಂಡಿಯನ್ ರೈಲ್ವೆ ಲೋಕೋ ರನ್ನಿಂಗ್‌ಮೆನ್ ಆರ್ಗನೈಜೇಷನ್ (IRLRO) ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ಕಾರ್ಯಾಧ್ಯಕ್ಷ ಸಂಜಯ್ ಪಾಂಡಿ, ಈಗಾಗಲೇ ವೇಗದ ರೈಲುಗಳಲ್ಲಿ ಸುರಕ್ಷಿತ ಕಾರ್ಯವಿಧಾನಗಳು ಜಾರಿಯಲ್ಲಿವೆ. ರೈಲು ಚಾಲಕರು ಪ್ರತಿ 60 ಸೆಕೆಂಡಿಗೆ ತಮ್ಮ ಕಾಲಡಿಯಿರುವ ಲಿವರ್ (ಪೆಡಲ್)ನಂತಹ ಸಾಧನ ಒತ್ತದಿದ್ದರೆ, ರೈಲಿಗೆ ಸ್ವಯಂಚಾಲಿತವಾಗಿ ಎಮರ್ಜೆನ್ಸಿ ಬ್ರೇಕ್ ಬೀಳುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಮಹಿಳಾ ಸೇರಿದಂತೆ ಪ್ರತಿಯೊಬ್ಬ ಲೋಕೋ ಪೈಲೆಟ್, ಪ್ರತಿಪಾಳಿಯಲ್ಲಿ 11 ಗಂಟೆ ಕೆಲಸ ಮಾಡುತ್ತಾರೆ. ಅವರಿಗೆ, ಊಟ ಅಥವಾ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಲು ವಿರಾಮವಿರುವುದಿಲ್ಲ. ಇವುಗಳನ್ನು ಪರಿಹರಿಸಿದರೆ, ಅವರು ಕೂಡ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಸಂಜಯ್ ಪಾಂಡಿ ತಿಳಿಸಿದ್ದಾರೆ. ಇನ್ನು, ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಭಿವೃದ್ದಿಪಡಿಸತ್ತಿರುವ ಕೃತಕ ಬುದ್ದಿಮತ್ತೆ ಆಧಾರಿತ ಈ ಡಿವೈಸ್ ಕೆಲವೇ ದಿನಗಳಲ್ಲಿ ಬಳಕೆಗೆ ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications