ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಗಳು ಏನನ್ನು ಸೂಚಿಸುತ್ತದೆ?
ದೈನಂದಿನ ಸಂಚಾರದ ವೇಳೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಗಳು ನಮ್ಮ ಕಣ್ಣ ಮುಂದೆ ದರ್ಶನವಾಗುತ್ತದೆ. ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿರ್ದಿಷ್ಟ ವಾಹನಗಳು ಇಂತಹುದೇ ಬಣ್ಣಗಳ ನಂಬರ್ ಪ್ಲೇಟ್ ಗಳನ್ನು ಹೊಂದಿರಬೇಕೆಂಬ ನಿಯಮಗಳಿವೆ. ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನಿನ ಉಲ್ಲಂಘನೆಯಾಗುತ್ತೆದ.
ಹಾಗಿದ್ದರೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಗಳು ಏನನ್ನು ಸೂಚಿಸುತ್ತದೆ ? ಯಾವುದರ ಸಂಕೇತವಿದು ಎಂಬ ಎಲ್ಲ ರೀತಿಯ ಗೊಂದಲಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಿದ್ದೇವೆ.

ಬಿಳಿ ನಂಬರ್ ಪ್ಲೇಟ್
ಬಿಳಿ ಬೋರ್ಡ್ ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ಕಾರುಗಳು ಖಾಸಗಿ ವಿಭಾಗಕ್ಕೆ ಸೇರಿದ ವಾಹನಗಳಾಗಿವೆ. ಇವೆಲ್ಲವೂ ಖಾಸಗಿ ಬಳಕೆಗಷ್ಟೇ ಸೀಮಿತವಾಗಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವಂತಿಲ್ಲ.

ಹಳದಿ ನಂಬರ್ ಪ್ಲೇಟ್
ಹಳದಿ ಬೋರ್ಡ್ ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿರುವ ವಾಹನಗಳು ಟ್ಯಾಕ್ಸಿ ಮತ್ತು ಟ್ರಕ್ ವಿಭಾಗಕ್ಕೆ ಸೇರಿದ ವಾಣಿಜ್ಯ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಚಾಲಕನಿಗೆ ವಾಣಿಜ್ಯ ಪರವಾನಗಿಯ ಅಗತ್ಯವಿರುತ್ತದೆ.

ಕಪ್ಪು ಬೋರ್ಡ್ ಮೇಲೆ ಹಳದಿ ಅಕ್ಷರಗಳು
ಕಪ್ಪು ಬೋರ್ಡ್ ಮೇಲೆ ಹಳದಿ ಅಕ್ಷರಗಳನ್ನು ಹೊಂದಿರುವ ವಾಣಿಜ್ಯ ವಾಹನಗಳು ಬಾಡಿಗೆಗೆ ಲಭ್ಯವಿರುವ ಸೆಲ್ಪ್ ಡ್ರೈವ್ ವಾಹನಗಳಾಗಿವೆ. ಇವುಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಬಹುದಾಗಿದ್ದು ವಾಣಿಜ್ಯ ಪರವಾನಗಿಯ ಅಗತ್ಯವಿರುವುದಿಲ್ಲ.

ತಿಳಿ ನೀಲಿ ನಂಬರ್ ಪ್ಲೇಟ್
ತಿಳಿ ನೀಲಿ ಬೋರ್ಡ್ ಮೇಲೆ ಬಿಳಿ ಅಕ್ಷರಗಳನ್ನು ಹೊಂದಿರುವ ವಾಹನಗಳು ವಿದೇಶಿ ದೂತವಾಸಗಳ ವಾಹನಗಳಾಗಿರುತ್ತದೆ. ಇಂತಹ ನಂಬರ್ ಪ್ಲೇಟ್ ಗಳು ಯುಎನ್, ಸಿಡಿ ಅಥವಾ ಸಿಸಿ ಗಳೆಂಬ ವಿಶೇಷ ಸಂಕೇತಗಳನ್ನು ಹೊಂದಿರುತ್ತದೆ. ಇಲ್ಲಿ ಯುಎನ್ ಎಂಬುದು ವಿಶ್ವಸಂಸ್ಥೆ, ಸಿಡಿ ಎಂಬುದು ಡಿಪ್ಲೋಮ್ಯಾಟಿಕ್ ಕಾರ್ಪ್ ಮತ್ತು ಸಿಸಿ ಎಂಬುದು ಕನ್ಸೂಲರ್ ಕಾರ್ಪ್ಸ್ ಎಂಬುದನ್ನು ಸೂಚಿಸುತ್ತದೆ.

ಕೆಂಪು ವರ್ಣದ ನಂಬರ್ ಪ್ಲೇಟ್
ಭಾರತದ ರಾಷ್ಟ್ರಪತಿ ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ರಾಜ್ಯಪಾಲರಿಗೆ ಮಾತ್ರ ಲೈಸನ್ಸ್ ಪ್ಲೇಟ್ ಗಳಿಲ್ಲದ ತ್ರಿವರ್ಣ ಪತಾಕೆ ಹೊಂದಿರುವ ಅಧಿಕೃತ ಕೆಂಪು ವರ್ಣದ ನಂಬರ್ ಪ್ಲೇಟ್ ಕಾರುಗಳಲ್ಲಿ ಸಂಚರಿಸುವ ಹಕ್ಕಿರುತ್ತದೆ.

ಮೇಲ್ಮುಖವಾಗಿರುವ ಬಾಣ
ಇತರೆ ನಂಬರ್ ಪ್ಲೇಟ್ ವಾಹನಗಳನ್ನು ಹೋಲಿಸಿದಾಗ ಮಿಲಿಟರಿ ವಾಹನಗಳು ವಿಶಿಷ್ಟ ಶೈಲಿಯ ನಂಬರ್ ಪ್ಲೇಟ್ ಶೈಲಿಯನ್ನು ಹಿಂಬಾಲಿಸುತ್ತಿದೆ. ಮೊದಲಿಗೆ ಮೇಲ್ಖುಖವಾದ ಬಾಣ ತದಾ ಬಳಿಕವಿರುವ ಎರಡು ಅಕ್ಷರಗಳು ಮಿಲಿಟರಿಗೆ ಯಾವ ಇಸವಿಯಲ್ಲಿ ಸೇರ್ಪಡೆಯಾಯಿತು ಎಂಬುದನ್ನು ತಿಳಿಸುತ್ತದೆ.


Click it and Unblock the Notifications








