ಬಡತನದಲ್ಲೂ ಮಗಳ ಮಮತೆ: ತಂದೆಯನ್ನು ಆಸ್ಪತ್ರೆಗೆ ಸೇರಿಸಲು 35 km ರಿಕ್ಷಾ ತುಳಿದ 14 ವರ್ಷದ ಬಾಲಕಿ
ಒಡಿಶಾದ ಭದ್ರಕ್‌ನಲ್ಲಿ (Odisha's Bhadrak) ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. 14 ವರ್ಷದ ಬಾಲಕಿಯೊಬ್ಬಳು, ಗಾಯಗೊಂಡ ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ (district hospital) ಕರೆದುಕೊಂಡು ಹೋಗಲು 35 ಕಿಲೋಮೀಟರ್ ಟ್ರಾಲಿ ರಿಕ್ಷಾವನ್ನು ತುಳಿದಿದ್ದಾಳೆ.
ಈ ಘಟನೆ ಅಕ್ಟೋಬರ್ 23 ರಂದು ವರದಿಯಾಗಿದೆ. ಭದ್ರಕ್ ಪಟ್ಟಣದ ಮೊಹತಾಬ್ ಛಾಕ್ ಸಮೀಪ ಬಾಲಕಿಯು ತನ್ನ ತಂದೆಯನ್ನು ಮನೆಗೆ ಕರೆದೊಯ್ಯುವಾಗ ಕೆಲವು ಸ್ಥಳೀಯರು ಮತ್ತು ಪತ್ರಕರ್ತರು, ಆಕೆಯನ್ನು ಕಂಡಾಗ ಇದು ಬೆಳಕಿಗೆ ಬಂದಿದೆ. ನಾಡಿಗನ್ ಗ್ರಾಮದ 14 ವರ್ಷದ ಬಾಲಕಿ ಸುಜಾತಾ ಸೇಥಿ, ಗಾಯಗೊಂಡ ತನ್ನ ತಂದೆಯನ್ನು ಟ್ರಾಲಿ ರಿಕ್ಷಾ ತುಳಿಯುತ್ತ ಸುಮಾರು 14 ಕಿಮೀ ದೂರದಲ್ಲಿರುವ ಧಮ್‌ನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.

ಆದರೆ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತಂದೆಯನ್ನು ಭದ್ರಕ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದು, ಅಕ್ಟೋಬರ್ 23 ರಂದು ತನ್ನ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬರೋಬ್ಬರಿ 35 ಕಿಲೋಮೀಟರ್ ಟ್ರಾಲಿ ರಿಕ್ಷಾವನ್ನು ತುಳಿದಿದ್ದಾಳೆ. ಅಕ್ಟೋಬರ್ 22 ರಂದು ಆ ಬಾಲಕಿಯ ತಂದೆ ಸಂಭುನಾಥ್ ಗ್ರಾಮದಲ್ಲಿ ನಡೆದ ಮಾರಾಮಾರಿ ವೇಳೆ ಗಾಯಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಸ್ವತಃ ಬಾಲಕಿ ಸುಜಾತಾ ಮಾತನಾಡಿ, ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಭದ್ರಕ್ ಜಿಲ್ಲಾಸ್ಪತ್ರೆ ವೈದ್ಯರು, ಮನೆಗೆ ಹೋಗಿ, ಒಂದು ವಾರದ ನಂತರ ಶಸ್ತ್ರಚಿಕಿತ್ಸೆಗೆ ಬರುವಂತೆ ಹೇಳಿದರು. ನನ್ನ ಬಳಿ, ಖಾಸಗಿ ವಾಹನವನ್ನು ಬಾಡಿಗೆಗೆ ತೆಗೆದುಕೊಳ್ಳಲು ಹಣವಿಲ್ಲ. ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಮೊಬೈಲ್ ಫೋನ್ ಇಲ್ಲ. ಅದರಿಂದಾಗಿ ಟ್ರಾಲಿ ರಿಕ್ಷಾ ಬಳಕೆ ಮಾಡಿದೆ ಎಂದಿದ್ದಾಳೆ.

ಇನ್ನು, ಬಾಲಕಿ ಸುಜಾತಾ ಸೇಥಿ ಜಿಲಾಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ, ಆಕೆಯ ಅವಸ್ಥೆಯನ್ನು ಗಮನಿಸಿದ ಕೆಲವು ಪತ್ರಕರ್ತರು, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿದ್ದಾರೆ. ಆದರೆ, ಅವರು, ರೋಗಿಗಳನ್ನು ಮನೆಗೆ ಕಳುಹಿಸಲು ಆಸ್ಪತ್ರೆ ಕಡೆಯಿಂದ ಆಂಬ್ಯುಲೆನ್ಸ್ ಒದಗಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಭದ್ರಕ್ ಶಾಸಕ ಸಂಜಿಬ್ ಮಲ್ಲಿಕ್ ಮತ್ತು ಧಮ್‌ನಗರ ಮಾಜಿ ಶಾಸಕ ರಾಜೇಂದ್ರ ದಾಸ್ ಬಾಲಕಿಯನ್ನು ಸಹಾಯ ಮಾಡಿದ್ದು, ಆಕೆಯ ತಂದೆಯನ್ನು ಮನೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿಗಳು, ಬಾಲಕಿ ತಂದೆ ಸಂಭುನಾಥ್ ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲಿಯೇ ಇರಲು ಅವಕಾಶ ಕಲ್ಪಿಸಿದ್ದಾರೆ.

ಇನ್ನು, ಬಾಲಕಿ ಟ್ರಾಲಿ ರಿಕ್ಷಾ ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹುತೇಕರು ಆಕೆಯ ಮಮತೆಯನ್ನು ಮೆಚ್ಚಿದ್ದಾರೆ. ಈಗಲಾದರೂ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಿ. ಸರ್ಕಾರ ಕೂಡ ಈ ರೀತಿ ಮುಂದೆ ನಡೆಯದಂತೆ ಒಂದಷ್ಟು ನಿಯಮಗಳನ್ನು ಜಾರಿ ಮಾಡಬೇಕಾಗಿದೆ. ಏನೇ ಆಗಲಿ.. ಬಾಲಕಿಗೆ ತಂದೆ ಮೇಲಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications