ಪಾಲ್ ವಾಕರ್ ಸಾವಿಗೆ ಕಾರಿನ ವಿನ್ಯಾಸ ದೋಷ ಕಾರಣ?
ಖ್ಯಾತ ಹಾಲಿವುಡ್ ನಟ ಪಾಲ್ ವಾಕರ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಜನಪ್ರಿಯ ನಾಯಕನ 16ರ ಹರೆಯದ ಪುತ್ರಿ ಮೆಡೊವ್ ರೈನ್ ವಾಕರ್ ಪೋರ್ಷೆ ಸಂಸ್ಥೆಯ ವಿರುದ್ಧ ನೂತನ ಆಪಾದನೆಯೊಂದಿಗೆ ಮುಂದೆ ಬಂದಿದ್ದಾರೆ.
ಇದೀಗಷ್ಟೇ ಜರ್ಮನಿ ಮೂಲದ ಪೋರ್ಷೆ ಸಂಸ್ಥೆಯ ವಿರುದ್ಧ ಸಾವಿನ ಮೊಕದ್ದಮೆ ದಾಖಲಿಸಿಕೊಂಡಿರುವ ಮೆಡೊವ್, ಕಾರಿನ ವಿನ್ಯಾಸ ದೋಷದಿಂದಾಗಿ ತಮ್ಮ ಅಪ್ಪ ಸಾವನ್ನಪ್ಪಿದ್ದಾರೆ ಎಂದು ಆಪಾದಿಸಿದ್ದಾರೆ.

ಪಾಲ್ ವಾಕರ್ ಪುತ್ರಿ ನೀಡಿರುವ ದೂರಿನಲ್ಲಿ ಪೋರ್ಷೆ ಕಾರಿನಲ್ಲಿ ಅನೇಕ ವಿನ್ಯಾಸ ದೋಷಗಳು ಕಾಣಿಸಿಕೊಂಡಿವೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಮರು ಜೀವ ದೊರಕಿದಂತಾಗಿದೆ.

ಘಟನೆ ಹಿನ್ನೆಲೆ
ಸರಿ ಸುಮಾರು ಎರಡು ವರ್ಷಗಳ ಹಿಂದೆ (2013 ನವೆಂಬರ್ 30) ತಮ್ಮದೇ ಸಹಾಯಾರ್ಥ ಸಂಸ್ಥೆ ಲಾಸ್ ಏಜಂಲೀಸ್ ನಲ್ಲಿ 'ರೀಚ್ ಔಟ್ ವರ್ಲ್ಡ್ ವೈಡ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ನೇಹಿತನ ಜೊತೆ ತೆರಳಿದ್ದ ಪಾಲ್ ವಾಕರ್ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಬಲವಾಗಿ ಢಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಪಾಲ್ ವಾಕರ್ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿತ್ತು.

ಬಳಿಕ ನಡೆದ ತನಿಖೆಯಲ್ಲಿ ಅಮಿತ ವೇಗದಿಂದಾಗಿ ಪಾಲ್ ವಾಕರ್ ಸಂಚರಿಸುತ್ತಿದ್ದ 2005 ಪೋರ್ಷೆ ಕರೆರಾ ಜಿಟಿ ಕಾರು ಅಪಘಾತಕ್ಕೀಡಾಗಿತ್ತು ಎಂಬುದು ಬಯಲಾಗಿತ್ತು. ಹಾಗಿದ್ದರೂ ಪಾಲ್ ವಾಕರ್ ಪುತ್ರಿಯ ಆರೋಪವು ಎರಡು ವರ್ಷಗಳ ಬಳಿಕ ಘಟನೆಗೆ ಹೊಸ ತಿರುವು ನೀಡಿದಂತಾಗಿದೆ.

ಏತನ್ಮಧ್ಯೆ ಪಾಲ್ ವಕಾರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪೋರ್ಷೆ ಸಂಸ್ಥೆಯ ಪ್ರತಿನಿಧಿಗಳು 'ಪ್ರಕರಣದ ಬಗ್ಗೆ ಖೇದ ವ್ಯಕ್ತಪಡಿಸುತ್ತಾ ಅಮಿತ ವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ' ಎಂದಿದೆ.

ಪಾಲ್ ವಕಾರ್ ಪುತ್ರಿ ಮೆಡೊವ್ ಪೋರ್ಷೆ ವಿರುದ್ಧ ನೀಡಿರುವ ಸಾವಿನ ಮೊಕದ್ದಮೆಯಲ್ಲಿ "ಸೀಟು ಬೆಲ್ಟ್ ಥಟ್ಟನೆ ಸೆಳೆದುಕೊಂಡಿದ್ದರಿಂದ ಸಾವಿರಾರು ಪೌಂಡ್ ಒತ್ತಡದಿಂದಾಗಿ ಪಕ್ಕೆಲುಬು ಮತ್ತು ಸೊಂಟ ಮುರಿತಕ್ಕೊಳಗಾಗಿದ್ದರು" ಎಂದು ಆಪಾದಿಸಲಾಗಿದೆ.

ಇದರಿಂದಾಗಿ ನಟ ಒಂದು ನಿಮಿಷದಷ್ಟು ಕಾಲ ಕಾರಿನಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಬಳಿಕ ಜೀವಂತ ಶರೀರಕ್ಕೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಆಪಾದಿಸಲಾಗಿದೆ. ಇದಕ್ಕೆ ಪೂರಕವಾಗಿ ಪಾಲ್ ವಾಕರ್ ಶ್ವಾಸನಾಳದಲ್ಲಿ ಕಪ್ಪು ಹೊಗೆ ಮಸಿ ಕಂಡುಬಂದಿದೆ ಎಂಬುದನ್ನು ವಿವರಿಸಲಾಗಿದೆ.


Click it and Unblock the Notifications








