ಮಾಹೋ ಬೀಚ್ ನಲ್ಲಿ ವಿಮಾನಗಳ ಥ್ರಿಲ್ಲಿಂಗ್ ಲ್ಯಾಂಡಿಂಗ್-ಟೇಕ್ ಆಫ್!
ವಿಮಾನ ಸಮೀಪಿಸುವ ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಉತ್ತರ ಪೂರ್ವ ಕೆರೆಬಿಯನ್‌ನ ಸೈಂಟ್ ಮಾರ್ಟಿನ್ ದ್ವೀಪದಲ್ಲಿ ಸ್ಥಿತಗೊಂಡಿರುವ ಮಾಹೋ ಬೀಚ್ ಒಂದಾಗಿದೆ. ಭಯಾನಕತೆ ಹಾಗೂ ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುವ ಇಲ್ಲಿನ ಕಡಲ ತೀರ ಪ್ರದೇಶದ ಮೇಲ್ಗಡೆಯಾಗಿ ವಿಮಾನಗಳು ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡುತ್ತವೆ.
ಮಾಹೋ ಬೀಚ್ ಸಮೀಪದಲ್ಲಿಯೇ ಪ್ರಿನ್ಸಸ್ ಜೂಲಿಯಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಥಿತಗೊಂಡಿದೆ. ಇದು ನಿಜಕ್ಕೂ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ನೀಡುತ್ತದೆ.

1944ರಲ್ಲಿ ಇಲ್ಲಿಗೆ ಭೇಟಿಕೊಟ್ಟಿರುವ ಹಾಲೆಂಡ್ ನ ಜೂಲಿಯಾನಾ ರಾಜಕುಮಾರಿಯ ಸ್ಮರಣಾರ್ಥವಾಗಿ ಇಲ್ಲಿನ ಸೈಂಟ್ ಮಾರ್ಟಿನ್ ವಿಮಾನ ನಿಲ್ದಾಣಕ್ಕೆ ಪ್ರಿನ್ಸಸ್ ಜೂಲಿಯಾನಾ ಎಂಬ ಹೆಸರನ್ನಿಡಲಾಗಿದೆ.

ಇಲ್ಲಿ ಲ್ಯಾಂಡ್ ಮಾಡುವ ವಿಮಾನಗಳು ಅತ್ಯಂತ ಕಡಿಮೆ ಎತ್ತರದಲ್ಲಿ ಸಮೀಪಿಸುವುದರಿಂದಲೇ (ನೆಲದಿಂದ 100 ಅಡಿಗಿಂತಲೂ ಕಡಿಮೆ ಎತ್ತರದಲ್ಲಿ) ಮಾಹೋ ಬೀಚ್ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ.

ಮಾಹೋ ಬೀಚ್ ಸಮೀಪದಲ್ಲೇ ಸೈಂಟ್ ಮಾರ್ಟಿನ್ ವಿಮಾನ ನಿಲ್ದಾಣದ ರನ್ವೇ ಹಾದು ಹೋಗುತ್ತದೆ. ಇದು ಪೈಲಟ್ ಗಳಿಗೂ ವಿಮಾನವನ್ನು ಇಳಿಸಲು ಸವಾಲನ್ನುಂಟು ಮಾಡುತ್ತದೆ.

1942ರಲ್ಲಿ ಸೈನ್ಯ ವಾಯು ನೆಲೆಯಾಗಿ ವಿಮಾನ ನಿಲ್ದಾಣವನ್ನು ಆರಂಭಿಸಲಾಗಿತ್ತು. ಬಳಿಕ 1943ರಲ್ಲಿ ನಾಗರಿಕ ವಿಮಾನ ನಿಲ್ದಾಣವಾಗಿ ಬದಲಾಯಿಸಲಾಗಿತ್ತು.

ಪ್ರವಾಸಿಗರು ಹೆಚ್ಚೆಚ್ಚು ಭೇಟಿ ಕೊಡಲು ಆರಂಭಿಸಿದ ಬಳಿಕ ಇಲ್ಲಿನ ವಿಮಾನ ನಿಲ್ದಾಣವನ್ನು ಆಧುನಿಕರಿಸಲಾಯಿತು. ಬಳಿಕ ಹೆಚ್ಚಿನ ಮೌಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡಲಾಗಿತ್ತು.

ಸೈಂಟ್ ಮಾರ್ಟಿನ್ ಕೆರಿಬಿಯನ್ ದ್ವೀಪದ ಡಚ್ ಭಾಗದಲ್ಲಿ ಮಾಹೋ ಬೀಚ್ ಸ್ಥಿತಗೊಂಡಿದೆ. 2300 ಮೀಟರ್ ಉದ್ದದ ಸಣ್ಣದಾದ ರನ್ವೇ 10ರಲ್ಲಿ ಇಲ್ಲಿ ವಿಮಾನ ಇಳಿಸುವುದು ಅಮೋಘ ಅನುಭವ ನೀಡುತ್ತದೆ.

ಇಲ್ಲಿ ಸಮೀದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಗಳೂ ವ್ಯಾಪಾರವನ್ನು ಕುದುರಿಸಿಕೊಳ್ಳುತ್ತಿದ್ದು, ವಿಮಾನ ಆಗಮನದ ಅದ್ಭುತ ರಸದೌತಣವನ್ನು ನೀಡುತ್ತದೆ. ಬಿಳಿ ಮರಳುಗಾಡಿನ ತೀರ ಪ್ರದೇಶದ ಸಮೀಪದಲ್ಲೇ ಸನ್ ಸೆಟ್ ಬೀಚ್ ಬಾರ್, ನೈಟ್ ಕ್ಲಬ್ ಇತ್ಯಾದಿ ನೆಲೆಗೊಂಡಿದೆ.

ಮಾಹೋ ಬೀಚ್ ವಿಶ್ವದಲ್ಲಿರುವ ಏಕಮಾತ್ರ ತಾಣವಾಗಿದ್ದು, ಅಲ್ಲಿ ವಿಮಾನ ಆಗಮನದ ವೇಳೆಯಲ್ಲಿ ಸೂರ್ಯ, ಮರಳು ಹಾಗೂ ಸಮುದ್ರವನ್ನು ಒಂದೇ ಸಮಯದಲ್ಲಿ ಆನಂದಿಸಬಹುದಾಗಿದೆ.

ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದೆನಿಸಿಕೊಂಡಿರುವ ಹೊರತಾಗಿಯೂ ಮಾಹೋ ಬೀಚ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.


Click it and Unblock the Notifications








