ದೇಶದಲ್ಲಿ ಕ್ರಾಂತಿ: 10,000 ಎಲೆಕ್ಟ್ರಿಕ್ ಬಸ್, ಪಿಎಂ ಇ-ಬಸ್ ಸೇವಾ ಯೋಜನೆ.. ಪ್ರಧಾನಿ ಮೋದಿ ಸಂಪುಟ ಅನುಮೋದನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಶೂನ್ಯ ಹೊರಸೂಸುವಿಕೆ ವಾಹನಗಳ ಬಳಕೆ ಮೂಲಕ ಶುದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಿದೆ. ಅದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಪಿಎಂ ಇ-ಬಸ್ ಸೇವಾ (PM e-Bus Sewa) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.
ಪಿಎಂ ಇ-ಬಸ್ ಸೇವಾ ಯೋಜನೆಯಡಿ ನಗರ ಸಾರಿಗೆ ವ್ಯವಸ್ಥೆ ಬಲಗೊಳ್ಳಲಿದ್ದು, ದೇಶದ ಪ್ರಮುಖ ನಗರಗಳಲ್ಲಿ ಮುಂಬರುವ ದಿನಗಳಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, 'ಪಿಎಂ ಇ-ಬಸ್ ಸೇವಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಯೋಜನೆಗಾಗಿ ರೂ.57,613 ಕೋಟಿ ವೆಚ್ಚವಾಗಲಿದೆ' ಎಂದು ಹೇಳಿದ್ದಾರೆ.

'ದೇಶದ ಪ್ರಮುಖ ನಗರಗಳಲ್ಲಿ ಸುಮಾರು 10,000 ಹೊಸ ಎಲೆಕ್ಟ್ರಿಕ್ ಬಸ್‌ಗಳು ಓಡಾಟ ನಡೆಸಲಿದ್ದು, ಈ ಯೋಜನೆಯನ್ನು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳು ಹಾಗೂ ಸರಿಯಾದ ನಗರ ಸಾರಿಗೆ ಸೌಲಭ್ಯ ಇಲ್ಲದ ಪಟ್ಟಣಗಳಲ್ಲಿ ಮೊದಲ ಆದ್ಯತೆಯಾಗಿ ಜಾರಿಗೊಳಿಸಲಾಗುವುದು. ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು, ಈಶಾನ್ಯ ರಾಜ್ಯಗಳು ಕೂಡ ಯೋಜನೆಗೆ ಒಳಪಟ್ಟಿರಲಿವೆ' ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ರೂ.57,613 ಕೋಟಿ ವೆಚ್ಚದ ಬೃಹತ್ ಯೋಜನೆ ಇದಾಗಿದ್ದು, ರೂ.20,000 ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಸಾರ್ವಜನಿಕ ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಚರಣೆ ನಡೆಸಲಿವೆ. ಮುಂದಿನ 10 ವರ್ಷ ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಸಂಪೂರ್ಣ ಬೆಂಬಲ ಸಿಗಲಿದ್ದು, ಸರಿ ಸುಮಾರು 45,000 - 55,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯನ್ನು ಕೇಂದ್ರ ಸರ್ಕಾರ ಎರಡು ವಿಭಾಗ (segments)ಗಳಲ್ಲಿ ಜಾರಿಗೊಳಿಸಲಿದೆ. ಅವುಗಳೆಂದರೆ, ನಗರ ಸಾರಿಗೆ ಸೇವೆ ಹಾಗೂ ಗ್ರೀನ್ ಅರ್ಬನ್ ಮೊಬಿಲಿಟಿ ಇನಿಷಿಯೇಟಿವ್ಸ್. ನಗರ ಸಾರಿಗೆ ಸೇವೆಯಡಿ ಎಲೆಕ್ಟ್ರಿಕ್ ಬಸ್‌ಗಳು ಪಿಪಿಪಿ ಮಾದರಿ ಅನ್ವಯ ಕಾರ್ಯಾಚರಣೆ ನಡೆಸಲಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಗ್ರೀನ್ ಅರ್ಬನ್ ಮೊಬಿಲಿಟಿ ಇನಿಷಿಯೇಟಿವ್ಸ್ ಅಡಿಯಲ್ಲಿ ಬಸ್ ರಿಪೇರಿ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಕೇಂದ್ರ ಸರ್ಕಾರ, ಈ ಬೃಹತ್ ಘೋಷಣೆ ಮಾಡುತ್ತಿದಂತೆ ಆಟೋಮೊಬೈಲ್ ವಯಲದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಎಲೆಕ್ಟ್ರಿಕ್ ಬಸ್ ತಯಾರಿಸುವ ಕಂಪನಿಗಳ ಷೇರು ಮೌಲ್ಯ ದಿಢೀರನೇ ಅಧಿಕಗೊಂಡಿದೆ. ಜೆಬಿಎಂ ಆಟೋ ಷೇರುಗಳು ಶೇಕಡ 10%ಗಿಂತ ಹೆಚ್ಚು ಏರಿಕೆಯಾಗಿದೆ. ಟಾಟಾ ಮೋಟಾರ್ಸ್ ಶೇಕಡ 1.9% ಹಾಗೂ ಅಶೋಕ್ ಲೇಲ್ಯಾಂಡ್ ಷೇರುಗಳು ಶೇಕಡ 0.9% ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ, ಬಸ್ ಮಾತ್ರವಲ್ಲದೆ, ರೈಲ್ವೆ ಇಲಾಖೆಯನ್ನು ಮಾಲಿನ್ಯ ಮುಕ್ತವಾಗಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಹೈಡ್ರೋಜನ್ ರೈಲು ಓಡಿಸಲು ಯೋಜನೆಯನ್ನು ರೂಪಿಸುತ್ತಿದೆ. ಇದೀಗ, ಸುದೀರ್ಘ ಕಾರ್ಯಸಾಧ್ಯತೆ ಅಧ್ಯಯನದ ನಂತರ, ಹೈಡ್ರೋಜನ್ ಫಾರ್ ಹೆರಿಟೇಜ್ ಯೋಜನೆಯಲ್ಲಿ ರೈಲ್ವೆ ಇಲಾಖೆ ಕೆಲಸವನ್ನು ಶುರು ಮಾಡಿದ್ದು, ದುರ್ಗಮ ಹಾದಿಯಲ್ಲಿರುವ ಪಾರಂಪರಿಕ ತಾಣಗಳಿಗೆ ಹೈಡ್ರೋಜನ್ ಚಾಲಿತ ರೈಲುಗಳನ್ನು ಕಾರ್ಯಾಚರಣೆಗೆ ಉಪಯೋಗಿಸಲಿದೆ ಎಂದು ಹೇಳಲಾಗಿದೆ.
ಲೋಕಸಭೆಯ ರೈಲ್ವೆ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ, ಡಾರ್ಜಿಲಿಂಗ್, ಕಲ್ಕಾ ಶಿಮ್ಲಾ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾಘೈ, ಪಾತಪಲ್ಪಾನಿ ಕಲಾಕುಂಡ್ ಸೇರಿದಂತೆ ಪ್ರಮುಖ ಪಾರಂಪರಿಕ ತಾಣಗಳಿಗೆ ಪ್ರತಿ ರೈಲಿಗೆ ರೂ.80 ಕೋಟಿ ವೆಚ್ಚದಲ್ಲಿ 35 ಹೈಡ್ರೋಜನ್ ರೈಲು ಓಡಿಸಲು ಪ್ರಸ್ತಾಪಿಸಿದೆ. ಜೊತೆಗೆ ಆ ಒಂದೊಂದು ಮಾರ್ಗ ಅಭಿವೃದ್ಧಿಗೆ ರೂ.70 ಕೋಟಿ ವೆಚ್ಚವಾಗಬಹುದು ಎಂದು ತಿಳಿಸಿದೆ. ಇವೆಲ್ಲವನ್ನು ನೋಡಿದಾಗ ಕೆಲವೇ ವರ್ಷಗಳಲ್ಲಿ ಹೈಡ್ರೋಜನ್ ರೈಳುಗಳು ಕಾರ್ಯಾಚರಣೆ ನಡೆಸಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications