ಬೆಂಗಳೂರಲ್ಲಿ ಇಡ್ಲಿ ತಿಂದ್ರೆ, ಹುಬ್ಬಳ್ಳಿಯಲ್ಲಿ ರೊಟ್ಟಿ ಊಟ.. Vande Bharat ರೈಲು ಜೂ.26 ಲೋಕಾರ್ಪಣೆ
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವಿನ ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್‌ಗೆ ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಾಧ್ಯತೆಯಿದೆ. ಈ ರೈಲನ್ನು ಲೋಕಾರ್ಪಣೆ ಮಾಡಲು ಸ್ವತಃ ಅವರೇ ಕರ್ನಾಟಕಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ನೂತನವಾಗಿ ಸಂಚಾರ ಆರಂಭಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿಯೂ ಓಡಾಡಲಿದೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಕಾರ್ಯಚರಣೆ ನಡೆಸುವ ಈ ರೈಲಿನ ಸಂಚಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗಲಿದ್ದು, ಮಾರ್ಗ ಮಧ್ಯೆ ದಾವಣಗೆರೆಯಲ್ಲಿ ನಿಲ್ಲುತ್ತದೆ. ಉಳಿದಂತೆ ತುಮಕೂರು ಸೇರಿದಂತೆ ಬೇರೆಲ್ಲೂ ನಿಲುಗಡೆ ಇರುವುದಿಲ್ಲ ಎಂದು ಹೇಳಲಾಗಿದೆ.

ವಂದೇ ಭಾರತ್ ರೈಲಿನ ಕಾರ್ಯಚರಣೆಯಿಂದ ಆಗುವ ದೊಡ್ಡ ಮಟ್ಟದ ಅನುಕೂಲವೆಂದರೆ, ಪ್ರಯಾಣ ಅವಧಿ ಕಡಿಮೆಯಾಗುವುದು. ಈ ರೈಲು ಬೆಂಗಳೂರಿನಿಂದ ಧಾರವಾಡಕ್ಕೆ ಸಂಚರಿಸಲು ಕೇವಲ 6 ಗಂಟೆ 55 ನಿಮಿಷ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಹೊರತುಪಡಿಸಿ, ಉಳಿದೆಲ್ಲ ರೈಲುಗಳಿಗೆ ಹುಬ್ಬಳ್ಳಿ ತಲುಪಲು ಕನಿಷ್ಠವೆಂದರೂ ಒಂಬತ್ತು ಗಂಟೆ ಬೇಕಾಗುತ್ತದೆ.
ಸದ್ಯ, ಬೆಂಗಳೂರು, ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಸಂಚಾರ ಆರಂಭಿಸಿ, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು ಹಾಗೂ ಹಾವೇರಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿ ಮಧ್ಯಾಹ್ನ 1 ಗಂಟೆ ವೇಳೆಗೆ ಹುಬ್ಬಳ್ಳಿ ತಲುಪುತ್ತದೆ.

ಈ ರೈಲಿನ ಪ್ರಯಾಣದ ಅವಧಿ 7 ಗಂಟೆಯಿದೆ. ಹುಬ್ಬಳ್ಳಿಯಿಂದ ಮತ್ತೆ ಹಿಂದಿರುಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಮಧ್ಯಾಹ್ನ 1.40ಕ್ಕೆ ಹೊರಟು, ರಾತ್ರಿ 8.55ಕ್ಕೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವನ್ನು ತಲುಪುತ್ತದೆ. (ಪ್ರಯಾಣದ ಅವಧಿ 7 ಗಂಟೆ 15 ನಿಮಿಷ). ಇನ್ನುಳಿದಂತೆ ವಿಶ್ವಮಾನವ ಎಕ್ಸ್‌ಪ್ರೆಸ್, ಸಿದ್ದಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಸುಮಾರು 9 ಗಂಟೆಯೊಳಗೆ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುತ್ತವೆ.
ಮೇ ಕೊನೆಯ ವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಮಾತನಾಡಿದ್ದ ಜೋಶಿ, 'ಜುಲೈ ವೇಳೆಗೆ ಕರ್ನಾಟಕದ ಜನರಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಸಿಗಲಿದೆ' ಎಂದು ಹೇಳಿದ್ದರು. ಅಲ್ಲದೆ, ಮೊದಲೇ ಶುರುವಾಗಬೇಕಿದ್ದ ಈ ರೈಲಿನ ಸಂಚಾರ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವಿನ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ವಿಳಂಬವಾಗಿತ್ತು.
ಇನ್ನು, 2022ರ ನವೆಂಬರ್ ತಿಂಗಳಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಮೊದಲ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಿತ್ತು. ಸದ್ಯ, ಜೂನ್ 26ರಂದು ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ಆರಂಭಿಸುವ ರೈಲಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಮುಂಬೈ-ಗೋವಾ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಹಾಗೂ ಭೋಪಾಲ್-ಜಬಲ್ ಪುರ ವಂದೇ ಭಾರತ್ ರೈಲುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷತೆ: ಈ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅದರ ವೇಗವನ್ನು 160 ಕಿಮೀ.ಗೆ ಸೀಮಿತಗೊಳಿಸಲಾಗಿದೆಯಂತೆ. ಈ ರೈಲಿಗೆ ಪ್ರತೇಕ ಎಂಜಿನ್ ಇಲ್ಲ. ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ವೈ-ಫೈ ಸೌಲಭ್ಯವಿದ್ದು, ಬೈವಿಕ ಶೌಚಾಲಯವಿದೆ. ಅಲ್ಲದೆ, ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಕೂಡ ಅತ್ಯುತ್ತಮವಾಗಿವೆ.


Click it and Unblock the Notifications