ಮೋದಿ ಮಾಸ್ಟರ್ ಸ್ಟೋಕ್: ಚೀನಾ ಗಡಿಯಲ್ಲಿ ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆ
ಇಂದು ಬೆಳಿಗ್ಗೆ 5.45 ರ ಸುಮಾರಿಗೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಿರ್ಮಾಣಗೊಂಡ ವಿಶ್ವದ ಅತೀ ಉದ್ದದ ದ್ವಿಪಥ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟಿಸಿದರು. ಇಟಾನಗರದಲ್ಲಿ ತೆರಳಿ ಅಲ್ಲಿ 'ಅಭಿವೃದ್ಧಿ ಹೊಂದಿದ ಭಾರತ ಅಭಿವೃದ್ಧಿ ಹೊಂದಿದ ಈಶಾನ್ಯ' ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಸೆಲಾ ಸುರಂಗವನ್ನು (Sela Tunnel) ಉದ್ಘಾಟಿಸಿದರು.
ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೇಲಾ ಸುರಂಗವು, ಅರುಣಾಚಲ ಪ್ರದೇಶದಲ್ಲಿ ಸೇಲಾ ಪಾಸ್ ಮೂಲಕ ತವಾಂಗ್‌ಗೆ, ಬಲಿಪರ- ಚಾರಿದೌರ್- ತವಾಂಗ್ ರಸ್ತೆ ಮೂಲಕ ಎಲ್ಲಾ ಋತುಮಾನಗಳಲ್ಲಿಯೂ ಸಂಪರ್ಕ ಒದಗಿಸುವಂತಿದೆ. ಈ ಸುರಂಗ ಮಾರ್ಗಕ್ಕೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಚೀನಾದ ಗಡಿಯ ಬಳಿ ಇರುವ ಈ ಸುರಂಗ ಭಾರತಕ್ಕೆ ಅತ್ಯಂತ ಮಹತ್ವದ್ದು ಎನಿಸಿಕೊಂಡಿದೆ.

ಸೆಲಾ ಸುರಂಗವನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಒಟ್ಟು ರೂ.825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎರಡು (ದ್ವಿಪಥ) ಸುರಂಗಗಳಿರುವ ಈ ಯೋಜನೆಯಲ್ಲಿ ಎಂಟು ಕಿಮೀಗೂ ಅಧಿಕ ಸಂಪರ್ಕ ರಸ್ತೆಗಳಿವೆ. ಇದರ ಒಟ್ಟಾರೆ ಉದ್ದ ಅಂದಾಜು 12 ಕಿಮೀ. ಮೊದಲ ಸುರಂಗವು ಸಿಂಗಲ್- ಟ್ಯೂಬ್ ಸುರಂಗವಾಗಿದೆ. 980 ಮೀಟರ್ ಕ್ರಮಿಸುತ್ತದೆ.
ಇನ್ನು ಎರಡನೇ ಸುರಂಗವು ತುರ್ತು ಸಂದರ್ಭದಲ್ಲಿ ತೆರಳುವ ಮಾರ್ಗವಾಗಿದೆ. ಅದು ಸುಮಾರು 1.5 ಕಿಮೀ ಉದ್ದವಿದೆ. ಈ ಹಿಂದಿನ ಸೇಲಾ ಪಾಸ್ ಮಾರ್ಗವು ಒಂದೇ ಪಥದ ಸಂಪರ್ಕ ಹೊಂದಿತ್ತು. ಚೀನಾ ಗಡಿ ಸಮೀಪದ ತವಾಂಗ್ ಪ್ರದೇಶಕ್ಕೆ ಭಾರಿ ಗಾತ್ರ ವಾಹನಗಳು ಹಾಗೂ ಕಂಟೇನರ್ ಟ್ರಕ್‌ಗಳು ತೆರಳಲು ಈ ಮಾರ್ಗದಲ್ಲಿ ತೆರಳಲು ಅವಕಾಶ ನೀಡುತ್ತಿರಲಿಲ್ಲ.

ಎರಡೂ ಸುರಂಗಗಳ ನಡುವೆ 1,200 ಮೀಟರ್ ಉದ್ದದ ಲಿಂಕ್ ರೋಡ್ ಕೂಡ ಇದೆ. ದಿನಕ್ಕೆ 3,000 ಕಾರುಗಳು ಮತ್ತು 2,000 ಟ್ರಕ್‌ಗಳು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಸುರಂಗ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ ಗರಿಷ್ಠ ವೇಗದ ಮಿತಿಯನ್ನು ನಿಗಧಿ ಪಡಿಸಿದೆ. ಚೀನಾ ಗಡಿಯಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನದಲ್ಲೂ ಈ ಸಂಪರ್ಕ ಕಲ್ಪಿಸಬಹುದಾಗಿದೆ.
2019ರ ಫೆಬ್ರವರಿ ತಿಂಗಳಿನಲ್ಲಿ ಸೆಲಾ ಸುರಂಗಕ್ಕೆ ಅಡಿಪಾಯ ಹಾಕಲಾಯಿತು, ಮತ್ತು ಯೋಜನೆಯು ಐದು ವರ್ಷಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಲು ಸರಾಸರಿ 650 ಕಾರ್ಮಿಕರೊಂದಿಗೆ 90 ಲಕ್ಷ ಗಂಟೆಗಳನ್ನು ತೆಗೆದುಕೊಂಡಿದೆ. ಹೊಸ ಆಸ್ಟ್ರಿಯನ್ ಸುರಂಗ ವಿಧಾನವನ್ನು ಬಳಸಿಕೊಂಡು ಸೆಲಾ ಸುರಂಗವನ್ನು ನಿರ್ಮಿಸಲಾಗಿದೆ. ಸುರಂಗವು ಜೆಟ್ ಫ್ಯಾನ್, ಅಗ್ನಿಶಾಮಕ ಉಪಕರಣಗಳು ಮತ್ತು ದಕ್ಷತೆ ಮತ್ತು ಸುರಕ್ಷತೆಗಾಗಿ SCADA-ನಿಯಂತ್ರಿತ ಮೇಲ್ವಿಚಾರಣೆ ಸೇರಿದಂತೆ ಆಧುನಿಕ ವೈಶಿಷ್ಟ್ಯಗಳ ಅನ್ನು ಸಹ ಒಳಗೊಂಡಿದೆ.

ಚೀನಾ ಗಡಿ ಭಾಗದಲ್ಲಿದ್ದ ಕಾರಣ ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗದ ಕಾರಣ ರಾಜ್ಯಗಳು ಹಿಂದುಳಿದಿತ್ತು. ಅಲ್ಲದೇ ಈ ಭಾಗಗಳಿಗೆ ತಕ್ಷಣಕ್ಕೆ ವೇಗವಾಗಿ ಸೈನಿಕರನ್ನು ಕಳುಹಿಸುವುದು ಸವಾಲಿನ ಕೆಲಸವಾಗಿತ್ತು. ಅರುಣಾಚಲ ಪ್ರದೇಶದಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಇದರ ಭಾಗವಾಗಿ ಈ ಸೆಲಾ ಸುರಂಗವನ್ನು ನಿರ್ಮಾಣ ಮಾಡಲಾಗಿದೆ.
ಸುರಂಗ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು ಮಾತನಾಡಿ, ನೀವು ಮೋದಿಯ ಗ್ಯಾರಂಟಿ ಬಗ್ಗೆ ಕೇಳಿರುತ್ತೀರಿ. ಅರುಣಾಚಲಕ್ಕೆ ನೀವು ಒಮ್ಮೆ ಭೇಟಿ ನೀಡಿದರೆ ಇದರ ಮಹತ್ವ ಅರಿವಾಗುತ್ತದೆ. ಇಡೀ ಈಶಾನ್ಯ ಭಾರತ ಇದಕ್ಕೆ ಸಾಕ್ಷಿಯಾಗುತ್ತಿದೆ. 2019ರಲ್ಲಿ ನಾನು ಸೇಲಾ ಸುರಂಗಕ್ಕೆ ಅಡಿಗಲ್ಲು ಹಾಕಿದ್ದೆ, ಈಗ ಅದನ್ನು ಉದ್ಘಾಟಿಸಲಾಗಿದೆ ಎಂದರು. ಗಡಿ ಪ್ರದೇಶಗಳು ಅಭಿವೃದ್ಧಿ ಹೊಂದದಂತೆ ತಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








