ಯುವತಿಯೊಂದಿಗೆ ಡೇಂಜರ್ ವ್ಹೀಲಿಂಗ್ ಮಾಡುತ್ತಿದ್ದ ಶೂರ ಕೊನೆಗೂ ಅರೆಸ್ಟ್..!
ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವುದು ಅಪರಾಧ ಅಂತಾ ಗೊತ್ತಿದ್ದರೂ ಸಹ ಕೆಲ ಬೈಕ್ ಸವಾರರು ಸಂಚಾರಿ ನಿಯಮಗಳನ್ನು ಲೆಕ್ಕಿಸದೇ ಅಪಾಯಕಾರಿ ಸ್ಟಂಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗೆ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ಯುವಕನೊಬ್ಬ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೌದು, ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಲ್ಲದೇ ಸ್ಟಂಟ್ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಯುವಕ ಮತ್ತು ಯುವತಿ ಪೊಲೀಸ್ ಬಲೆಗೆ ಬಿದ್ದಿದ್ದು, ವಿಡಿಯೋ ಆಧರಿಸಿ ಸುಮೊಟೊ ಕೇಸ್ ದಾಖಲಿಸಿದ್ದ ಬೆಂಗಳೂರಿನ ಹೆಬ್ಬಾಳ ಟ್ರಾಫಿಕ್ ಪೊಲೀಸರು ವ್ಹೀಲಿಂಗ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನೂರ್ ಅಹ್ಮದ್ ಮತ್ತು ಆತನ ಪ್ರೇಯಿಸಿಯನ್ನು ವಶಕ್ಕೆ ಪಡೆದಿರುವ ಹೆಬ್ಬಾಳ ಪೊಲೀಸರು, ವ್ಹೀಲಿಂಗ್‌ಗೆ ಬಳಸಿದ ಸ್ಕೂಟರ್ ಅನ್ನು ಸಹ ಸೀಜ್ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯೇ ಸ್ನೇಹಿತೆ ಜೊತೆ ನಂದಿಬೆಟ್ಟಕ್ಕೆ ತೆರಳುತ್ತಿರುವಾಗ ಈ ವ್ಹೀಲಿಂಗ್ ಸ್ಟಂಟ್ ಚಿತ್ರಿಕರಿಸಲಾಗಿದ್ದು, ತದನಂತರ ಅದೇ ದಿನ ಆರೋಪಿ ನೂರ್ ಅಹ್ಮದ್ ಪ್ರೇಯಿಸಿಯೇ ತನ್ನ ಫೇಸ್‌ಬುಕ್ ಅಂಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು.

ಅಪ್‌ಲೋಡ್ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ತಕ್ಷಣವೇ ವಿಡಿಯೋದಲ್ಲಿ ಸ್ಥಳವನ್ನು ಆಧರಿಸಿ ಆರೋಪಿಗಾಗಿ ಬಲೆಗೆ ಬಿಸಿದ್ದ ಪೊಲೀಸರು ನೂರ್ ಅಹ್ಮದ್ ಮತ್ತು ಆತನ ಪ್ರೇಯಿಸಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಕೂಟರ್‌ನಲ್ಲಿ ವ್ಹೀಲಿಂಗ್ ವೇಳೆ ಯುವಕನು ಒಂಟಿಕಾಲಿನಲ್ಲಿ ಸೀಟ್ ಮೇಲೆ ನಿಂತುಕೊಂಡೆ ಸ್ಟಂಟ್ ಮಾಡಿದ್ದಲ್ಲದೇ, ಹಿಂಬದಿ ಸೀಟ್‌ನಲ್ಲಿ ಕುಳಿತ ಯುವತಿಯು ಸಹ ಯುವಕನ ಹುಚ್ಚಾಟಕ್ಕೆ ಸಾಥ್ ನೀಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇಬ್ಬರನ್ನು ಸಹ ವಶಕ್ಕೆ ಪಡೆದಿರುವ ಹೆಬ್ಬಾಳ ಪೊಲೀಸರು ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮುಖ್ಯರಸ್ತೆಯಲ್ಲೇ ವ್ಹೀಲಿಂಗ್ ಮಾಡುವ ಕುರಿತಾ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದಲ್ಲದೇ ಇಬ್ಬರನ್ನೂ ಕೂಡಲೇ ಬಂಧಿಸುವಂತೆ ಸಾಕಷ್ಟು ಜನ ಟ್ರಾಫಿಕ್ ಪೊಲೀಸರಿಗೆ ಮನವಿ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸುಮೊಟೊ(ಸ್ವಯಂಪ್ರೇರಿತ) ದೂರು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ನೂರ್ ಅಹ್ಮದ್ ಮತ್ತು ಆತನ ಪ್ರೇಯಿಸಿಯನ್ನು ಪತ್ತೆ ಹಚ್ಚಿದ್ದು, ಸ್ಕೂಟರ್ ನೀಡಿದ್ದ ಮೂಲ ಮಾಲೀಕನಿಗೆ ಇದೀಗ ಸಂಕಷ್ಟ ಎದುರಾಗಿದೆ.

ಹೌದು, ವ್ಹೀಲಿಂಗ್ ಮಾಡಿದ್ದ ಆರೋಪಿ ನೂರ್ ಅಹ್ಮದ್ ತನ್ನ ಗೆಳಯನ ಬಳಿಯಿಂದ ತೆಗೆದುಕೊಂಡ ಬಂದ ಸ್ಕೂಟರ್‌ನಲ್ಲಿ ಸ್ಟಂಟ್ ಮಾಡಿರುವುದು ಪತ್ತೆಯಾಗಿದ್ದು, ನೂರ್ ಅಹ್ಮದ್‌ಗೆ ಸ್ಕೂಟರ್ ನೀಡಿದ್ದ ಸ್ನೇಹಿತ ಇಮ್ರಾನ್ ಮತ್ತು ಆತನ ತಾಯಿಯ ವಿರುದ್ಧವು ಪ್ರಕರಣ ದಾಖಲಿಸಲಾಗಿದೆಯೆಂತೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಒಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯು ಅಂದರ್ ಆಗಿದ್ದು, ಬೆಂಗಳೂರಿನ ನಗರದ ಪ್ರಮುಖ ಕಡೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಇಂತಹ ಇನ್ನು ಸಾವಿರಾರು ಪುಡಾರಿಗಳ ವಿರುದ್ಧ ತುರ್ತಾಗಿ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
Source: TV9 Kannada


Click it and Unblock the Notifications








