ಲಿಫ್ಟ್ ಕೊಟ್ಟು ಭಾರೀ ದಂಡ ಹಾಕಿಸಿಕೊಂಡ ಸವಾರರು... ಪ್ರತಿಕ್ರಿಯಿಸದ ಅಮಿತಾಭ್, ಅನುಷ್ಕಾ!
ಇತ್ತೀಚೆಗೆ ಮುಂಬೈನಲ್ಲಿ ಟ್ರಾಫಿಕ್ ಜಾಮ್‌ಗೆ ಬೇಸತ್ತು ಬೈಕ್ ಸವಾರರ ಬಳಿ ನಟ ಅಮಿತಾಭ್ ಬಚ್ಚನ್ ಹಾಗೂ ಅನುಷ್ಕಾ ಶರ್ಮಾ ಲಿಫ್ಟ್ ಪಡೆದಿದ್ದರು. ಲಿಫ್ಟ್ ನೀಡುವಾಗ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಎರಡು ಮೋಟಾರ್ ಸೈಕಲ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಮುಂಬೈ ರಸ್ತೆಗಳಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡಿದ್ದಕ್ಕಾಗಿ ಅಮಿತಾಬ್ ಮತ್ತು ಅನುಷ್ಕಾ ಇಬ್ಬರಿಗೂ ತಮ್ಮ ಸವಾರರ ಮೂಲಕ ದಂಡ ವಿಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಕಳೆದ ಸೋಮವಾರದಂದು ಅಮಿತಾಭ್ ಬಚ್ಚನ್ ಅವರು ಟ್ರಾಫಿಕ್ ಜಾಮ್‌ನಿಂದಾಗಿ ಶೂಟಿಂಗ್ ಸ್ಥಳಕ್ಕೆ ತಲುಪುವಲ್ಲಿ ತಡವಾದ ಕಾರಣ ತಮ್ಮ ಕಾರಿಳಿದು ಬೈಕ್ ಸವಾರನೊಬ್ಬನ ಬಳಿ ಲಿಫ್ಟ್ ಪಡೆದಿದ್ದರು.

ಹಾಗೆಯೇ ಕ್ರಿಕೆಟರ್ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಹೊರಟಿದ್ದ ದಾರಿಯಲ್ಲಿ ಮರವೊಂದು ಅಡ್ಡಲಾಗಿ ಬಿದ್ದು ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಅವರೂ ಕೂಡ ಬೈಕ್‌ನಲ್ಲಿ ಹೊರಟಿದ್ದರು. ಎರಡು ಪ್ರತ್ಯೇಕ ಘಟನೆಗಳಲ್ಲಿ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಾಕೀತು ಮಾಡಿದ ನಂತರ ದಂಡ ವಿಧಿಸಲಾಗಿದೆ.
ಮುಂಬೈ ಸಂಚಾರ ಪೊಲೀಸರು ಮಂಗಳವಾರ ಎರಡೂ ವಾಹನಗಳ ಸವಾರರ ವಿರುದ್ಧ ಹೊರಡಿಸಲಾದ ಚಲನ್‌ಗಳ ಪ್ರತಿಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಎಲ್ಲಾ ಘಟನೆಗೂ ನಟ ಅಮಿತಾಭ್ ಬಚ್ಚನ್ ಕೂಡ ಒಂದು ರೀತಿಯಲ್ಲಿ ಕಾರಣವೆಂದು ಹೇಳಬಹುದು. ಲಿಫ್ಟ್ ಪಡೆದ ಬಳಿಕ ಫೋಟೋ ಹಂಚಿಕೊಂಡು ಸವಾರನಿಗೆ ಧನ್ಯವಾದ ತಿಳಿಸಿದ್ದರು.

"ನನ್ನ ರೈಡ್ ಗೆಳೆಯನಿಗೆ ಧನ್ಯವಾದಗಳು .. ನಿಮಗೆ ಗೊತ್ತಿಲ್ಲ .. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ .. ತಪ್ಪಿಸಿಲಾಗದ ಟ್ರಾಫಿಕ್ ಜಾಮ್‌ನಲ್ಲೂ ವೇಗವಾಗಿ ಬಿಟ್ಟಿದ್ದೀರಿ.. ಕ್ಯಾಪ್ಡ್, ಶಾರ್ಟ್ಸ್ ಮತ್ತು ಹಳದಿ ಬಣ್ಣದ ಟಿ-ಶರ್ಟ್ ಮಾಲೀಕರಿಗೆ ಧನ್ಯವಾದಗಳು." ಎಂದು ಬರೆದುಕೊಂಡಿದ್ದರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ನೆಟ್ಟಿಗರು ಎರಡೂ ಸಂದರ್ಭಗಳಲ್ಲಿ ನಟರು ಹಾಗೂ ಅವರನ್ನು ಡ್ರಾಪ್ ಮಾಡಿದ ಚಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಇಬ್ಬರು ತಾರೆಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್ ಮೂಲಕ ಮುಂಬೈ ಪೊಲೀಸರನ್ನು ತಾಕೀತು ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು ವಾಹನ ಸವಾರನ ವಿರುದ್ಧ 10,500 ರೂ. ದಂಡದ ಜೊತೆಗೆ ಚಲನ್ ನೀಡಿದ್ದಾರೆ.
ತಾರೆಯರಿಗೆ ಲಿಫ್ಟ್ ನಿಡಿದ ಪಾಪಕ್ಕೆ ಸವಾರರಿಗೆ ಅನ್ಯಾಯವಾಗಿ ದಂಡ ವಿಧಿಸಲಾಗಿದೆ ಎಂದುಕೊಳ್ಳವವರು ಇಲ್ಲಿ ಒಂದನ್ನು ಮುಖ್ಯಾವಾಗಿ ಗಮನಿಸಬೇಕು. ತಾರೆಯರನ್ನು ಬಿಡಿ ಅವರು ಲಿಫ್ಟ್ ಪಡೆಯುವಾಗ ಹೆಲ್ಮೆಟ್ ಜೊತೆಗಿಟ್ಟುಕೊಂಡು ಓಡಾಡಾಲು ಸಾಧ್ಯವಿಲ್ಲ. ಆದ್ರೆ ಸವಾರರಿಗೆ ಏನಾಗಿದೆ, ಮುಂಬೈ ನಂತಹ ಮಹಾನಗರದಲ್ಲಿ ಟ್ರಾಫಿಕ್ ನಿಯಮಗಳು ಗೊತ್ತಿದ್ದರೂ, ಹೆಲ್ಮೆಟ್ ಇಲ್ಲದೇ ಸಂಚರಿಸಿರುವುದು ತಪ್ಪಲ್ಲವೇ?
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications