ರಜನಿ 'ಲಿಂಗಾ' ಚಿತ್ರದಲ್ಲಿ ಹಳೆ-ಹೊಸ ಕಾರುಗಳ ಕಲರವ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಜಗತ್ತಿನಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಲಿಂಗಾ ಬಹುನಿರೀಕ್ಷಿತ ಚಿತ್ರ ಇದೇ ಬರುವ ಡಿಸೆಂಬರ್ 12 ಶುಕ್ರವಾರದಂದು (ನಾಳೆ) ತೆರೆ ಕಾಣುತ್ತಿದೆ.
ವಿಶೇಷವೆಂದರೆ ರಜನಿಕಾಂತ್ ಹುಟ್ಟುಹಬ್ಬದ ದಿನದಂದೇ (ಡಿಸೆಂಬರ್ 12) ಲಿಂಗಾ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಕನ್ನಡಿಗ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಕೆ.ಎಸ್. ರವಿಕುಮಾರ್ ಆಕ್ಷನ್ ಕಟ್ ಹೇಳಿರುವ ಲಿಂಗಾ ಚಿತ್ರದಲ್ಲಿ ರಜನಿಕಾಂತ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಲಿವುಡ್ ರಾಣಿ ಅನುಷ್ಕಾ ಶೆಟ್ಟಿ ಹಾಗೂ ಬಾಲಿವುಡ್ ಹಾಟ್ ಬೆಡಗಿ ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲಿಂಗಾ ಚಿತ್ರದ ಚಿತ್ರಕಥೆಯ ಬಗ್ಗೆ ನಿಗೂಢತೆ ಕಾಯ್ದುಕೊಳ್ಳಲಾಗಿದೆ. ಹಾಗಿದ್ದರೂ ಸಿನೆಮಾ ತಂಡ ಬಿಡುಗಡೆ ಮಾಡಿರುವ ಟ್ರೇಲರ್ ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಲಿಂಗಾ ಚಿತ್ರವು ವಾಹನ ಜಗತ್ತಿನ ಪಾಲಿಗೂ ಅತಿ ಮಹತ್ವದೆನಿಸಿದೆ. ಚಿತ್ರದ ಹಲವಾರು ರಂಗಗಳಲ್ಲಿ ಹಳೆಯ ವಿಂಟೇಜ್ ಜೊತೆಗೆ ಅತಿ ನೂತನ ಕಾರುಗಳನ್ನು ಬಳಕೆ ಮಾಡಲಾಗಿದೆ.

ಬ್ರಿಟಿಷ್ ಕಾಲಘಟ್ಟದ ರಂಗವನ್ನು ಹೊಂದಿರುವ ಚಿತ್ರದಲ್ಲಿ ಅನೇಕ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಕೆ ಮಾಡಲಾಗಿದೆ. ಜೊತೆಗೆ ದೇಶದ ಐಕಾನಿಕ್ ಸ್ಕಾರ್ಪಿಯೊದಿಂದ ಹಿಡಿದು ಜರ್ಮನಿಯ ದುಬಾರಿ ಆಡಿ ಹಾಗೂ ಅಮೆರಿಕದ ಲಿಮೊಸಿನ್ ಹಾಗೂ ಹಮ್ಮರ್ ಕಾರುಗಳನ್ನು ನೋಡಬಹುದಾಗಿದೆ.

ಚಿತ್ರದ ಟ್ರೇಲರ್ ನೋಡಿದಾಗಲೇ ಅಣೆಕಟ್ಟು ಮುಖ್ಯ ಸನ್ನಿವೇಶ ಹೊಂದಿರುವುದು ಖಚಿತವಾಗಿದ್ದು, ಆಡಿಗಳಂತಹ ನ್ಯೂ ಜನರೇಷನ್ ಕಾರಿನಲ್ಲೂ ರಜನಿಕಾಂತ್ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದೆ.

ತಮಿಳು ಜೊತೆಗೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿರುವ ಲಿಂಗಾ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ. ರಹಮಾನ್ ಸಂಗೀತ ನೀಡಿದ್ದಾರೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಹುತೇಕ ಚಿತ್ರಿಕರಣ ನಡೆದಿದ್ದು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ್ ಜಲಪಾತವೂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಕೇವಲ ಕಾರು ಮಾತ್ರವಲ್ಲದೆ ಲಿಂಗಾ ಚಿತ್ರದಲ್ಲಿ ಮೋಟಾರುಸೈಕಲ್‌ಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಅಲ್ಲದೆ ಸಾಹಸಿ ಬೈಕಿಂಗ್ ದೃಶ್ಯಗಳನ್ನು ನೀವಿಲ್ಲಿ ಸವಿಯಬಹುದಾಗಿದೆ.

ಇನ್ನು ವಿಶಿಷ್ಟವೆಂದರೆ ದುಬೈನಲ್ಲಿರುವ ಜಗತ್ತಿನ ಅತಿದೊಡ್ಡ ಫೋಕ್ಸ್‌ವ್ಯಾಗನ್ ಥೀಮ್ ಪಾರ್ಕ್‌ನಲ್ಲಿ ಶೂಟಿಂಗ್ ಹಮ್ಮಿಕೊಳ್ಳಲಾಗಿದೆ.

ಒಟ್ಟಿನಲ್ಲಿ ವಿಶ್ವದೆಲ್ಲೆಡೆಯ ರಜನಿ ಅಭಿಮಾನಿಗಳಿಗೆ ಲಿಂಗಾ ಚಿತ್ರವು ರಸದೌತಣ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.


Click it and Unblock the Notifications








