ಸೂಪರ್ ಕಾರಿಗೂ ವ್ಯಾಪಿಸಿದ ರಜನಿ 'ಕಬಾಲಿ' ಹವಾ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಬಿಡುಗಡೆಗೂ ಮುನ್ನವೇ ಸಕತ್ ಕ್ರೇಜ್ ಸೃಷ್ಟಿ ಮಾಡುತ್ತಿದೆ. ನಗರದೆಲ್ಲೆಡೆ ಬೃಹತ್ ಕಟೌಟ್ ಗಳು ರಾರಾಜಿಸುತ್ತಿದ್ದರೆ ಐಷಾರಾಮಿ ವಾಹನಗಳಿಗೂ ಕಬಾಲಿ ಹವಾ ವ್ಯಾಪಿಸಿರುವುದು ಹೆಚ್ಚಿನ ಗಮನ ಸೆಳೆಯುತ್ತಿದೆ.
ಚಿತ್ರದ ಪ್ರಾಯೋಜಕತ್ವ ವಹಿಸುತ್ತಿರುವ ಏರ್ ಏಷ್ಯಾ ವಿಮಾನಯಾನ ಸಂಸ್ಥೆಯು ಕಬಾಲಿ ವಿಶೇಷ ವಿಮಾನ ಸೇವೆಯೊಂದಿಗೆ ರಜನಿ ಪೋಸ್ಟರ್ ಗಳನ್ನು ಲಗತ್ತಿಸಿದ್ದರೆ ಹೊಸೂರು ಮೂಲದ ಡೀಲರ್ ವೊಂದು ಮಾರುತಿ ಸುಜುಕಿ ಸ್ವಿಫ್ಟ್ ಕಬಾಲಿ ವಿಶೇಷ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದರ ಮುಂದುವರಿದ ಭಾಗವೆಂಬಂತೆ ಈಗ ಸೂಪರ್ ಕಾರುಗಳ ಸರದಿ.

ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರಿ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿರುವ ರಜನಿಕಾಂತ್ ಅಭಿನಯದ ಗ್ಯಾಂಗ್ ಸ್ಟಾರ್ ಕಬಾಲಿ ಚಿತ್ರದ ಪ್ರಚಾರಕ್ಕಾಗಿ ಮಲೇಷ್ಯಾದಲ್ಲಿರುವ ಅಭಿಮಾನಿಯೊಬ್ಬರು ತನ್ನ ಸೂಪರ್ ಕಾರಿಗೆ ಬಣ್ಣ ಬಳಿದಿದ್ದಾರೆ.

ಕೌಲಾಂಲಪುರದಲ್ಲಿರುವ ಅಭಿಮಾನಿಯು ಕೋಟಿ ಬೆಲೆಬಾಳುವ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರನ್ನು ರಜನಿ ಅಭಿನಯದ ಕಬಾಲಿ ಚಿತ್ರಕ್ಕಾಗಿ ಸಮರ್ಪಿಸಿದ್ದಾನೆ.

ಲಂಬೋರ್ಗಿನಿ ಗಲರ್ಡೊ ಕಾರಿನ ಸುತ್ತಲೂ ಕಬಾಲಿ ಗ್ರಾಫಿಕ್ಸ್ ಗಳನ್ನು ಅಂಟಿಸಲಾಗಿದ್ದು, ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.

ಇದು ವಿದೇಶದಲ್ಲೂ ಅಭಿಮಾನಿಗಳಿಗೆ ರಜನಿ ಮೇಲಿರುವ ಅಪಾರ ಪ್ರೀತಿಯನ್ನು ಎತ್ತಿ ಹಿಡಿಯುತ್ತಿದೆ.

ಕಾರಿನೊಳಗೆ ಹೆಚ್ಚಿನ ಬದಲಾವಣೆಗಳನ್ನು ತರಲಾಗಿಲ್ಲ. ಈ ಮೂಲಕ ಕಾರಿನ ಹೊರಮೈ ವಿನ್ಯಾಸದತ್ತ ಗಮನ ಕೇಂದ್ರಿಕರಿಸಲಾಗಿದೆ.

ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಚಿತ್ರ ಜುಲೈ 22ರಂದು ದೇಶದ್ಯಾಂತ ತೆರೆ ಕಾಣಲಿದೆ. ಪಾ ರಂಜಿತ್ ನಿರ್ದೇಶಕರಾಗಿರುವ ಚಿತ್ರದಲ್ಲಿ ನಟಿ ರಾಧಿಕಾ ಆಪ್ಟೆ ಪ್ರಮುಖ ಕಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದಲ್ಲಿ ಲಂಬೋರ್ಗಿನಿ ಹ್ಯುರಕನ್ ಉತ್ತರಾಧಿಕಾರಿಯಾಗಿರುವ ಲಂಬೋರ್ಗಿನಿ ಹ್ಯುರಕನ್ ಆಗಲೇ ಮಾರುಕಟ್ಟೆ ಪ್ರವೇಶಿಸಿದೆ. ಇದು 3.43 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಇಟಲಿಯ ಐಕಾನಿಕ್ ಸೂಪರ್ ಕಾರು ಸಂಸ್ಥೆಯಾಗಿರುವ ಲಂಬೋರ್ಗಿನಿ, ಜಗತ್ತಿನೆಲ್ಲೆಡೆ ಮನ್ನಣೆಗೆ ಪಾತ್ರವಾಗಿದೆ. ವೇಗ, ಶಕ್ತಿ ಹಾಗೂ ನಿರ್ವಹಣೆಯಲ್ಲಿ ಲಂಬೋರ್ಗಿನಿ ಸೂಪರ್ ಕಾರುಗಳು ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ.


Click it and Unblock the Notifications








