ಪೆಟ್ರೋಲ್, ಎಲೆಕ್ಟ್ರಿಕ್ ಎರಡರ ಮೂಲಕವೂ ಚಲಿಸುತ್ತದೆ ಈ ಹೈಬ್ರಿಡ್ ಬೈಕ್
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಎಲೆಕ್ಟ್ರಿಕ್ ವಾಹನಗಳನ್ನು, ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಚಾರ್ಜಿಂಗ್ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ.

ಇದರಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಪ್ರಯಾಣದ ಮಧ್ಯದಲ್ಲಿ ಖಾಲಿಯಾದರೆ ಏನು ಮಾಡಬೇಕು ಎಂಬ ಚಿಂತೆ ಎಲೆಕ್ಟ್ರಿಕ್ ವಾಹನ ಗ್ರಾಹಕರನ್ನು ಕಾಡುತ್ತಿದೆ.ರಾಜ್‌ಕೋಟ್‌ನ ವಿವಿಪಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿದಿದ್ದಾರೆ.

ಈ ವಿದ್ಯಾರ್ಥಿಗಳು ಪೆಟ್ರೋಲ್, ಎಲೆಕ್ಟ್ರಿಕ್ ಎರಡರಲ್ಲೂ ಚಲಿಸಬಲ್ಲ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಈ ಹೈಬ್ರಿಡ್ ಬೈಕ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಮ್ಯಾನಿಯರ್ ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚು, ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ.

ಈ ಕಾರಣಕ್ಕೆ ನಾವು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎರಡರಲ್ಲೂ ಚಲಿಸುವ ಬೈಕ್ ವಿನ್ಯಾಸಗೊಳಿಸಲು ಬಯಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ಪೆಟ್ರೋಲ್‌ನಿಂದ ಚಲಿಸುತ್ತಿದ್ದ ಬೈಕ್ ಅನ್ನು ಎಲೆಕ್ಟ್ರಿಕ್'ನಿಂದ ಚಲಿಸುವಂತೆ ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಈ ಬೈಕಿನಲ್ಲಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಿದ್ದಾರೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆ ಬೇಕಾಗುತ್ತದೆ. ಈ ಬ್ಯಾಟರಿಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 40 ಕಿ.ಮೀ ವೇಗದಲ್ಲಿ 40 ಕಿ.ಮೀಗಳವರೆಗೆ ಚಲಿಸುತ್ತವೆ.

ಈ ಬೈಕ್ ಅನ್ನು ಚಾಲನೆ ಮಾಡಲು ಪ್ರತಿ ಕಿ.ಮೀಗೆ ಕೇವಲ 17 ಪೈಸೆ ಖರ್ಚಾಗುತ್ತದೆ. ಈ ಬೈಕ್ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎರಡರಿಂದಲೂ ಚಲಿಸುತ್ತದೆ. ಇದಕ್ಕಾಗಿ 2 ಸ್ವಿಚ್‌ಗಳನ್ನು ನೀಡಲಾಗಿದೆ.

ಪ್ರಯಾಣ ಮಾಡುವಾಗ ಚಾರ್ಜ್ ಖಾಲಿಯಾದರೆ ಪೆಟ್ರೋಲ್'ನೊಂದಿಗೆ ಬೈಕ್ ಚಾಲನೆ ಮಾಡಬಹುದು. ಭಾರತದಲ್ಲಿ ಈ ರೀತಿಯ ಹೈಬ್ರಿಡ್ ಬೈಕ್ ಆನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲಲ್ಲ.

ಈ ಹಿಂದೆಯೂ ಪೆಟ್ರೋಲ್ ಬೈಕ್‌ಗಳನ್ನು ಹೈಬ್ರಿಡ್ ಬೈಕ್‌ಗಳಾಗಿ ಪರಿವರ್ತಿಸಲಾಗಿತ್ತು ಎಂಬುದು ಗಮನಾರ್ಹ. ಹಲವರು ಪೆಟ್ರೋಲ್ ಬೈಕ್‌ಗಳನ್ನು ಎಲೆಕ್ಟ್ರಿಕ್ ಬೈಕ್‌ಗಳಾಗಿ ಪರಿವರ್ತಿಸಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಹೈಬ್ರಿಡ್ ಬೈಕ್ ಚಾಲನಾ ವೆಚ್ಚ ತೀರಾ ಕಡಿಮೆ. ಇಂಧನ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಹೈಬ್ರಿಡ್ ಬೈಕುಗಳು ಮಾರಾಟಕ್ಕೆ ಬಂದರೆ ಅವುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿವೆ.

ಹೈಬ್ರಿಡ್ ಬೈಕ್‌ಗಳ ಅನುಕೂಲವೆಂದರೆ ಈ ಬೈಕ್'ಗಳಲ್ಲಿ ವ್ಯಾಪ್ತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ. ಚಾರ್ಜ್ ಖಾಲಿಯಾದರೆ ಪೆಟ್ರೋಲ್ ಮೂಲಕ ಚಲಿಸಬಹುದು. ಬೆಲೆ ಹೆಚ್ಚಾಗಿರುವ ಕಾರಣ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಪ್ರಿಯವಾಗುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications