ರತನ್ ಟಾಟಾ ಅಪರೂಪವಾಗಿ ಮುಂಬೈ ರಸ್ತೆಗಳಲ್ಲಿ ಇಷ್ಟಪಟ್ಟು ಓಡಿಸಿದ್ದ ಕಾರುಗಳಿವು!
ಟಾಟಾ ಸಮೂಹ ಸಂಸ್ಥೆಗಳ ಆಧಾರ ಸ್ತಂಭವಾಗಿದ್ದ ರತನ್ ಟಾಟಾ ಅವರು ನಿನ್ನೆ ಮಧ್ಯ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಬಡ ಕುಟುಂಬಗಳಿಗೂ ಕಾರು ಹತ್ತುವ ಸೌಭಾಗ್ಯ ಕಲ್ಪಿಸುವ ಸಲುವಾಗಿ ಅತ್ಯಂತ ಅಗ್ಗದ ಕಾರುಗಳನ್ನು ಪರಿಚಯಿಸಿದ್ದ ರತನ್ ಟಾಟಾ ಅವರು, ಭಾರತೀಯ ಬ್ರಾಂಡ್‌ನ ಹಲವಾರು ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಈ ನಡುವೆಯೂ ರತನ್ ಟಾಟಾ ಆಟೋಮೊಬೈಲ್ ಉತ್ಸಾಹಿ ಎಂದು ಸಹ ಹೆಸರುವಾಸಿಯಾಗಿದ್ದಾರೆ. ಅವರು ಮುಂಬೈ ರಸ್ತೆಗಳಲ್ಲಿ ತಮ್ಮ ಇಷ್ಟವಾದ ಕಾರುಗಳನ್ನು ಓಡಿಸುತ್ತಾ ಹಲವು ಬಾರಿ ಕಾಣಿಸಿಕೊಂಡಿದ್ದರು.
ಟಾಟಾ ಅವರು ತಮ್ಮ Mercedes-Benz SL500 ಕನ್ವರ್ಟಿಬಲ್ ಕಾರನ್ನು ಮುಂಬೈ ರಸ್ತೆಗಳಲ್ಲಿ ಓಡಿಸುವ ಹಳೆಯ ವಿಡಿಯೋ ಸಖತ್ ವೈರಲ್ ಆಗಿತ್ತು. ಮುಂಬೈ ರಸ್ತೆಗಳಲ್ಲಿ ಇಂತಹ ಅನೇಕ ಕಾರುಗಳನ್ನು ಓಡಿಸುತ್ತಾ ತಮ್ಮ ಆನಂದ ಕ್ಷಣಗಳನ್ನು ಕಳೆದಿದ್ದರು. ಅವರು ಹೆಚ್ಚಾಗಿ ಇಷ್ಟಪಡುವ ಹಾಗೂ ಹೆಚ್ಚಾಗಿ ಕಾಣಿಸಿಕೊಂಡಿದ್ದ ಒಂದಷ್ಟು ಕಾರುಗಳನ್ನು ಇಲ್ಲಿ ನೋಡೋಣ.

ಮರ್ಸಿಡಿಸ್ ಬೆಂಝ್ SL500: ಸಿಲ್ವರ್ ಬಣ್ಣದ ಎಡಗೈ ಡ್ರೈವ್ ಹೊಂದಿರುವ 2-ಬಾಗಿಲಿನ ಕನ್ವರ್ಟಿಬಲ್ ವಾಹನ ಅಂದ್ರೆ ಟಾಟಾ ಅವರಿಗೆ ಸಖತ್ ಇಷ್ಟ. ಟಾಟಾ ಅವರು ಈ ಕಾರಿನಲ್ಲಿ ತಮ್ಮ ಆಪ್ತರೊಂದಿಗೆ ಭದ್ರತೆಯಿಲ್ಲದೆ ಓಡಾಡಿದ್ದರು. ಈ SL500 ಕಾರು ಸುಮಾರು 306 bhp ಪವರ್ ಉತ್ಪಾದಿಸುವ 5.0 ಲೀಟರ್ V8 ಎಂಜಿನ್ ಹೊಂದಿರುವ ಪವರ್‌ಫುಲ್ ಕಾರಾಗಿದೆ.
ಕ್ರಿಸ್ಲರ್ ಸೆಬ್ರಿಂಗ್: ಕ್ರಿಸ್ಲರ್ ಸೆಬ್ರಿಂಗ್ ಎಂಬ ವಾಹನದಲ್ಲಿ ಮುಂಬೈ ರಸ್ತೆಗಳಲ್ಲಿ ಆಗಾಗ್ಗೆ ಓಡಾಡಿದ್ದಾರೆ, ಆದ್ರೆ ಈ ವರೆಗೆ ಯಾವುದೇ ಕ್ಯಾಮರಾಗೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ರತನ್ ಟಾಟಾ ಅವರು ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಅವರು ಈ ಕಾರಿನ ಬಣ್ಣವನ್ನು ತುಂಬಾ ಇಷ್ಟಪಟ್ಟಿದ್ದರಂತೆ, ಅವರು 1998 ರ ಜಿನೀವಾ ಮೋಟಾರ್ ಶೋನಲ್ಲಿ ಟಾಟಾ ಇಂಡಿಕಾದಲ್ಲಿ ಇದೇ ರೀತಿಯ ಬಣ್ಣವನ್ನು ಬಳಸಲು ನಿರ್ಧರಿಸಿದ್ದರು.

ಟಾಟಾ ನೆಕ್ಸನ್, ಹೋಂಡಾ ಸಿವಿಕ್: ದುಬಾರಿ ಕಾರುಗಳ ಜೊತೆಗೆ, ರತನ್ ಟಾಟಾ ಟಾಟಾ ನೆಕ್ಸನ್ ಹಾಗೂ ಹೋಂಡಾ ಸಿವಿಕ್ ನಂತಹ ಸಣ್ಣ ಕಾರುಗಳನ್ನು ಸಹ ಹೊಂದಿದ್ದಾರೆ. ಈ ಕಾರುಗಳನ್ನು ಕೊನೆಯ ದಿನಗಳಲ್ಲಿ ಹೆಚ್ಚಾಗಿ ಬಳಸಿದ್ದರು. ಮುಂಬೈನಲ್ಲಿ ಹೆಚ್ಚಾಗಿ ಈ ಕಾರುಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ.
ಫೆರಾರಿ ಕ್ಯಾಲಿಫೋರ್ನಿಯಾ: ರತನ್ ಟಾಟಾ ಅವರು ಫೆರಾರಿ ಕ್ಯಾಲಿಫೋರ್ನಿಯಾ ಹಾರ್ಡ್ ಟಾಪ್ ಅನ್ನು ಹೊಂದಿದ್ದರು. ಈ ಕಾರಿನಲ್ಲಿ ಮುಂಬೈ ರಸ್ತೆಗಳಲ್ಲಿ ಅವರು ಓಡಿಸುವುದನ್ನು ಆಗಾಗ್ಗೆ ಕಾಣಬಹುದು. ಕಾರು 4.3 ಲೀಟರ್ V8 ನಿಂದ ಚಾಲಿತವಾಗಿದ್ದು, 490 bhp ಮತ್ತು 504 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.
ಟಾಟಾ ಇಂಡಿಗೋ ಮರಿನಾ, ಟಾಟಾ ನ್ಯಾನೋ EV (ಕಸ್ಟಮ್ ಬಿಲ್ಟ್): ರತನ್ ಟಾಟಾ ವಾಸ್ತವವಾಗಿ ಈ ಸ್ಟೇಷನ್ ವ್ಯಾಗನ್ ಅನ್ನು ಖರೀದಿಸಿದ್ದು ತಮಗಾಗಿ ಅಲ್ಲ, ತಮ್ಮ ನಾಯಿಗಳಿಗಾಗಿ. ನಾಯಿಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲು ಕ್ಯಾಬಿನ್ ಅನ್ನು ಮಾರ್ಪಡಿಸಲಾಗಿದ್ದು, ಕಾರಿನಲ್ಲಿರುವ ಆಸನಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ವಾಹನದಲ್ಲೂ ತಮ್ಮ ನಾಯಿಗಳೊಂದಿಗೆ ಅವರು ಹಲವು ಬಾರಿ ಪ್ರಯಾಣಿಸಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಪವರ್‌ಟ್ರೇನ್ ಪರಿಹಾರಗಳಲ್ಲಿ ವ್ಯವಹರಿಸುವ ಕಂಪನಿಯಾದ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ರತನ್ ಟಾಟಾ ಅವರಿಗಾಗಿ ನಿರ್ಮಿಸಿಕೊಟ್ಟಿದೆ. ರತನ್ ಟಾಟಾ ಅವರ ಪ್ರತಿಕ್ರಿಯೆಗಾಗಿ ನ್ಯಾನೋ EV ಅನ್ನು ವಿತರಿಸಿದ್ದರು. ಯಾವುದೇ ಹಿಂಜರಿಕೆಯಲಿಲ್ಲದೇ ಈ ಸಣ್ಣ ವಾಹನದಲ್ಲೂ ಅವರು ಹೆಚ್ಚಾಗಿ ಪ್ರಯಾಣಿಸಿದ್ದಾರೆ.
ಲ್ಯಾಂಡ್ ರೋವರ್ ಫ್ರೀಲ್ಯಾಂಡರ್: ರತನ್ ಟಾಟಾ ಅವರು ತಮ್ಮ ಗ್ಯಾರೇಜ್‌ನಲ್ಲಿ ರೇಂಜ್ ರೋವರ್ ಬದಲಿಗೆ ಲ್ಯಾಂಡ್ ರೋವ್ ಫ್ರೀಲ್ಯಾಂಡರ್ ಹೊಂದಿದ್ದು, ಇದು ಪ್ರಮುಖ ಘಟನೆಗಳು ಅಥವಾ ಕೆಲಸದ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಪ್ರಯಾಣಿಸುವಾಗ ಕ್ಯಾಮರಾ ಕಣ್ಣಿಗೆ ಹಲವು ಬಾರಿ ಕಾಣಸಿಕೊಂಡಿದ್ದಾರೆ.


Click it and Unblock the Notifications