ಬರೋಬ್ಬರಿ ಒಂದೂವರೆ ಕೋಟಿ ರೂ. ಬೆಲೆಯ BMW ಎಲೆಕ್ಟ್ರಿಕ್ ಕಾರು ಖರೀದಿಸಿದ ಸೆಲೆಬ್ರಿಟಿ ದಂಪತಿ
ಬಾಲಿವುಡ್ ಕ್ಯೂಟ್ ದಂಪತಿಯಾದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರು ಗಣೇಶ ಹಬ್ಬದಂದು ಹೊಸ ಅದ್ದೂರಿ ಕಾರನ್ನು ಖರೀದಿಸಿದ್ದಾರೆ. ಈ ಸೆಲೆಬ್ರಿಟಿ ದಂಪತಿ ಮನೆಗೆ ಭರ್ಜರಿ BMW ಎಲೆಕ್ಟ್ರಿಕ್ ಕಾರನ್ನು ಇಳಿಸಿದ್ದಾರೆ.
ಈ ಹೊಸ ಬಿಎಂಡಬ್ಲ್ಯು ಕಾರಿನ ಬೆಲೆಯು ಬರೋಬ್ಬರಿ ರೂ. 1.40 ಕೋಟಿ (1.15 ಕೋಟಿ ರೂ. ಎಕ್ಸ್ ಶೋರೂಂ) ಎಂದು ತಿಳಿದುಬಂದಿದೆ. ಕಳೆದ ಬುಧವಾರ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಗಣೇಶ ಚತುರ್ಥಿ ಆಚರಿಸಲು ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಆಯುಷ್ ಶರ್ಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವೇಳೆ ತಮ್ಮ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿರುವ ನಟ ರಿತೇಶ್ ದೇಶ್‌ಮುಖ್ ಈಗಾಗಲೇ ಒಂದು ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ. 2017 ರಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರನ್ನು ರಿತೇಶ್ ದೇಶ್‌ಮುಖ್ ಖರೀದಿಸಿದ್ದರು.

ಇದೀಗ BMW ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾತನಾಡುವುದಾದರೆ, ಹೊಸ ಐಎಕ್ಸ್(iX) ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಎಕ್ಸ್‌ಡ್ರೈವ್40 ಎನ್ನುವ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.15 ಕೋಟಿ ಬೆಲೆ ಹೊಂದಿದೆ.

ಹೊಸ ಐಎಕ್ಸ್ ಕಾರು ಮಾದರಿಯು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಅಭಿವೃದ್ದಿಗೊಂಡಿರುವುದರಿಂದ ಭಾರತದಲ್ಲಿ ಸಿಬಿಯು ಆಮದು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಯಲ್ಲಿ ಬಿಎಂಡಬ್ಲ್ಯು ಕಂಪನಿಯು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದಕ್ಕಾಗಿ ಕಂಪನಿಯು ಹೊಸ ಕಾರಿನಲ್ಲಿ 76.6kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಈಗಾಗಲೇ ಮಾರಾಟ ಮಾಡುತ್ತಿದ್ದು, ಹೊಸ ಕಾರನ್ನು ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಡ್ರೈವ್40 ಮತ್ತು ಎಕ್ಸ್‌ಡ್ರೈವ್50 ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ.

ಎಕ್ಸ್‌ಡ್ರೈವ್40 ಮಾದರಿಯು 76.6kWh ಬ್ಯಾಟರಿ ಪ್ಯಾಕ್ ಮೂಲಕ ಗರಿಷ್ಠ 425 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದರೆ ಎಕ್ಸ್‌ಡ್ರೈವ್50 ಮಾದರಿಯು ಪ್ರತಿ ಚಾರ್ಜ್‌ಗೆ 611 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ. ಆದರೆ ಬಿಎಂಡಬ್ಲ್ಯು ಕಂಪನಿಯು ಸದ್ಯಕ್ಕೆ ಭಾರತದಲ್ಲಿ ಎಕ್ಸ್‌ಡ್ರೈವ್40 ಮಾದರಿಯನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಹೈ ಎಂಡ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಗಾಗಿ ಬಿಎಂಡಬ್ಲ್ಯು ಮೂರು ಮಾದರಿಯ ಚಾರ್ಜಿಂಗ್ ಸರ್ಪೊಟ್ ನೀಡಿದ್ದು, ಗ್ರಾಹಕರು 150kW ಡಿಸಿ ಫಾಸ್ಟ್ ಚಾರ್ಜ್‌ರ್, 50kW ಡಿಸಿ ಚಾರ್ಜ್‌ರ್ ಮತ್ತು 11 kW ಹೋಂ ಚಾರ್ಜರ್ ಆಯ್ಕೆ ನೀಡಿದೆ. 150kW ಡಿಸಿ ಫಾಸ್ಟ್ ಚಾರ್ಜ್‌ರ್ ಮೂಲಕ ಶೇ.80 ಚಾರ್ಜ್‌ಗೆ 31 ನಿಮಿಷ ತೆಗೆದುಕೊಂಡರೆ, 50kW ಡಿಸಿ ಚಾರ್ಜ್‌ರ್ ಮೂಲಕ ಚಾರ್ಜ್ ಮಾಡಲು 73 ನಿಮಿಷ ಮತ್ತು 11 kW ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 7 ಗಂಟೆಗಳ ಸಮಯ ತೆಗದುಕೊಳ್ಳುತ್ತದೆ.

ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ ಕ್ಲಾರ್(CLAR) ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಐಎಕ್ಸ್ ಮಾದರಿಯನ್ನು ಅಭಿವೃದ್ದಿಪಡಿಸಿದ್ದು, ಹೊಸ ಕಾರು ಬಹುತೇಕ ಬಿಡಿಭಾಗಗಳು ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಒಳಗೊಂಡಿದೆ.

ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಅಂಶಗಳಿಂದಾಗಿ ಕಾರಿನ ತೂಕ ಇಳಿಕೆಯಾಗುವುದರ ಜೊತೆ ಪರ್ಫಾಮೆನ್ಸ್ ಹೆಚ್ಚಳವಾಗಲೂ ಸಹಕಾರಿಯಾಗಿದ್ದು, ಹೊಸ ಕಾರು ವಿವಿಧ ಡ್ರೈವ್ ಮೋಡ್‌ಗಳ ಮೂಲಕ 326 ಬಿಎಚ್‌ಪಿ, 630 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 6.1 ಸೆಕೆಂಡುಗಳಲ್ಲಿ ನೂರು ಕಿ.ಮೀ ವೇಗಪಡೆದುಕೊಂಡು ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.

ಹೊಸ ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್6 ಎಸ್‌ಯುವಿ ಮಾದರಿಗೆ ಸರಿಸಮನಾದ ವಿನ್ಯಾಸದೊಂದಿಗೆ ಅಭಿವೃದ್ದಿಗೊಂಡಿದ್ದು, ಅತ್ಯಾಧುನಿಕ ಪ್ಲಾಟ್‌ಫಾರ್ಮ್ ಆಧರಿಸಿರುವ ಐಎಕ್ಸ್ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಕೆನಕ್ಟಿವಿಟಿ ಸೌಲಭ್ಯಗಳನ್ನು ಹೊಂದಿರಲಿದೆ.

ಬಿಎಂಡಬ್ಲ್ಯು ಐಎಕ್ಸ್‌ನಲ್ಲಿರುವ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಇಂಟಿಲಿಜಿಟೆಂಡ್ ಡ್ರೈವ್ಸ್ ಅಸಿಸ್ಟೆನ್ಸ್ ಟೆಕ್ನಾಲಜಿಗೆ ನೆರವಾಗುವಂತೆ ಅಳವಡಿಸಲಾಗಿದ್ದು, ಇದರಲ್ಲಿರುವ ರಾಡಾರ್ ಸಿಸ್ಟಂ, ಸೆನ್ಸಾರ್ ಗಳು ಮತ್ತು ಕ್ಯಾಮೆರಾಗಳು ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಐಎಕ್ಸ್ ಆಲ್ ವ್ಹೀಲ್ ಡ್ರೈವ್ ಎಲೆಕ್ಟ್ರಿಕ್ ಎಸ್‌ಯುವಿಯು ಮರ್ಸಿಡಿಸ್ ಬೆಂಝ್ ಇಕ್ಯೂಸಿ 400, ಆಡಿ ಇ-ಟ್ರಾನ್ ಮತ್ತು ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮೈಲೇಜ್ ವೈಶಿಷ್ಟ್ಯತೆ ಹೊಂದಿರುವ ಐಎಕ್ಸ್ ಮಾದರಿಯ ಹೈ ಎಂಡ್ ಮಾದರಿಯು ಕೂಡಾ ಬಿಡುಗಡೆಯ ನೀರಿಕ್ಷೆಯಲ್ಲಿದೆ.


Click it and Unblock the Notifications