ಸೂಪರ್‌ಬೈಕ್‌ಗೆ ಕಾರನ್ನು ತಾಗಿಸಿದ ಚಾಲಕನಿಗೆ ಸವಾರ ಮಾಡಿದ್ದೇನು ನೋಡಿ: ರೋಡ್‌ರೇಜ್ ಡೇಂಜರ್ ಕಣ್ರೀ!
ನೀವು ಯ್ಯೂಟ್ಯೂಬ್‌ಗೆ ಹೋಗಿ ರೋಡ್ ರೇಜ್ ವಿಡಿಯೋಸ್ ಇನ್ ಇಂಡಿಯಾ ಎಂದು ಟೈಪ್ ಮಾಡಿದರೆ ಸಾಕು, ರಸ್ತೆಯಲ್ಲಿ ವಾಹನ ಮಾಲಿಕರು ಒಂದಲ್ಲ ಒಂದು ಕಾರಣಕ್ಕೆ ಹೊಡೆದಾಡಿಕೊಳ್ಳುವ, ಜಗಳವಾಡುವ ವಿಡಿಯೋಗಳನ್ನು ಯ್ಯೂಟ್ಯೂಬ್ ಸಾಲು ಸಾಲಾಗಿ ನಿಮ್ಮ ಮುಂದಿಡುತ್ತದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ರೊಡ್ ರೇಜ್ ಸಾಮಾನ್ಯವಾಗಿಬಿಟ್ಟಿದೆ.
ಇದಕ್ಕೆ ಸವಾರರಿಗಿರುವ ಮೂಢತೆಯೋ, ಅರಿವಿಲ್ಲದೇ ಇರುವುದೋ ಕಾರಣ ಆಗಿರಬಹುದು. ಏನೇ ಆದರೂ ಭಾರತೀಯ ರಸ್ತೆಗಳಲ್ಲಿ ಅಪಾಯಕಾರಿಯಾದಂತಹ ರೋಡ್ ರೇಜ್ ಘಟನೆಗಳು ಅಧಿಕವಾಗಿರುವುದು ಚಿಂತಾಜನಕವೇ ಸರಿ. ಇದೀಗ ಇದೇ ರೀತಿಯ ರೋಡ್ ರೇಜ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಯ್ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ಈ ವಿಡಿಯೋ ಭಾರೀ ಸಂಖ್ಯೆಯಲ್ಲಿ ಶೇರ್ ಆಗಿದೆ.

ಯ್ಯೂಟ್ಯೂಬರ್ ಜಟ್ ಪ್ರಭ್‌ಜೋತ್ ತನ್ನ ಚಾನಲ್‌ನಲ್ಲಿ ಈ ಹೊಸ ವೈರಲ್ ರೋಡ್ ರೇಜ್ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಘಟನೆಯಲ್ಲಿ ನೀಲಿ ಬಣ್ಣದ ಇನ್ನೋವಾ ಕಾರು ಮತ್ತು ದುಬಾರಿ ಕವಾಸಕಿ ಸೂಪರ್ ಬೈಕ್ H2 ಕಾಣಬಹುದಾಗಿದೆ. ವಿಡಿಯೋದಲ್ಲಿ ನಮಗೆಲ್ಲಾ ಕಾಣುವಂತೆ ಇನ್ನೋವಾ ಕಾರಿನ ಡ್ರೈವರ್‌ನ ತಪ್ಪು ಇರುವುದರಿಂದ ಬೈಕರ್ ಆ ಡ್ರೈವರ್ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿರುವುದನ್ನು ಕಾಣಬಹುದಾಗಿದೆ.
ದೊರಕಿರುವ ಮಾಹಿತಿಗಳ ಪ್ರಕಾರ ಬಹಳ ಹಿಂದಿನಿಂದಲೂ ಸಹ ಸುಮಾರು ಸಮಯದವರೆಗೆ ನೀಲಿ ಬಣ್ಣದ ಆ ಇನ್ನೋವಾ ಕಾರು H2 ಬೈಕನ್ನು ಹಿಂಬಾಲಿಸುತ್ತಲೇ ಇತ್ತು. ಹಲವು ಬಾರಿ ಆ ಬೈಕ್ ಸವಾರರಿಗೆ ಅಡ್ಡಲಾಗಿ ಕಾರನ್ನು ಅದರ ಚಾಲಕ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಬೈಕ್ ಟೋಲ್‌ಗೇಟ್ ಒಂದರ ಬಳಿ ಬರುತ್ತಿದ್ದಂತೆಯೇ ಇನ್ನೋವಾ ಕಾರಿನ ಚಾಲಕ ನಿರಂತರವಾಗಿ ಹಾರ್ನ್ ಹೊಡೆದುಕೊಂಡು ಬಂದು ಬೈಕ್‌ಗೆ ತಾಗುವಂತೆ ನಿಲ್ಲಿಸಿದ್ದಾನೆ.

ಇದರಿಂದ ಕುಪಿತಗೊಂಡ H2 ಬೈಕ್ ರೈಡರ್ ಕೂಡಲೇ ಬೈಕ್‌ನಿಂದ ಇಳಿದು ಇನ್ನೋವಾ ಕಾರಿನ ಡ್ರೈವರ್ ಬಳಿ ಹೊರಗಿಳಿಯುವಂತೆ ಕೂಗಿದ್ದಾನೆ. ಇಷ್ಟು ಮಾತ್ರವಲ್ಲದೇ ಆತನೊಂದಿಗೆ ರೈಡ್ ಮಾಡುತ್ತಿದ್ದ ಮತ್ತೊಂದು ಬೈಕ್ ರೈಡರ್ ಸಹ ಕೆಳಗಿಳಿದು ಕಾರಿನ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಇನ್ನು ಎಷ್ಟೇ ಹೊರಗಿಳಿಯುವಂತೆ ಕರೆದರೂ, ಕಾರಿನ ಚಾಲಕ ಮಾತ್ರ ಹೊರಗಿಳಿಯದೆ ಕಾರಿನೊಳಗಡೇ ಕುಳಿತುಕೊಂಡಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಇನ್ನೋವಾ ಕಾರಿನ ಚಾಲಕನೂ ಸಹ ಒಳಗಿನಿಂದಲೇ ಬೈಕರ್‌ಗಳನ್ನು ಬೈಯ್ಯುತ್ತಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯರೆಲ್ಲರೂ ಬಂದು ಏನಾಯಿತೆಂದು ವಿಚಾರಿಸಿದಾಗ ಬೈಕರ್ ನಡೆದಿರುವ ವಿಷಯಗಳನ್ನು ವಿವರಿಸಿದ್ದು ಈತನ ಬೆಂಬಲಕ್ಕೆ ಇನ್ನೂ ಹಲವು ವಾಹನ ಚಾಲಕರು ಆಗಮಿಸಿದ್ದಾರೆ. ಘಟನೆಯ ತೀವ್ರತೆ ಜಾಸ್ತಿಯಾಗಲಿದೆ ಎಂದು ತಿಳಿದ ಕಾರಿನ ಚಾಲಕ ಕೂಡಲೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಹೊರಗಡೆ ಬೈಕ್ ಸವಾರರು ಗಲಾಟೆ ಮಾಡುತ್ತಿರುವಾಗಲೇ ಕಾರಿನ ಚಾಲಕ ತನ್ನ ವಾಹನವನ್ನು ರಿವರ್ಸ್ ತೆಗೆಯಲು ಆರಂಭಿಸಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಬೈಕ್ ಸವಾರರು ಕಾರಿನ ಬೋನೆಟ್ ಮೇಲೆ ಹೊಡೆಯುತ್ತಾ ನಿಲ್ಲುವಂತೆ ಹೇಳಿದ್ದಾನೆ. ಇದನ್ನು ಲೆಕ್ಕಿಸದೆ ಡ್ರೈವರ್ ವೇಗವಾಗಿ ಕಾರನ್ನು ಹಿಂಬದಿ ಚಲಾಯಿಸುತ್ತಿದ್ದ ಸಮಯದಲ್ಲಿ ಬೈಕರ್ ಕಾರಿನ ಓರ್‌ವಿಎಂಗೆ ಹೊಡೆದು ಅದನ್ನು ಮುರಿದಿದ್ದಾನೆ. ಆದರೆ ಕೂಡಲೇ ಆ ಚಾಲಕ ಯೂಟರ್ನ್ ತೆಗೆದುಕೊಂಡು ಸ್ಥಳದಿಂದ ಪಾರಾಗಿದ್ದಾನೆ.
ಇನ್ನು ಈ ರೀತಿಯ ಘಟನೆಗಳು ನಮ್ಮ ಬೆಂಗಳೂರು ಸೇರಿದಂತೆ ದೇಶದ ಇತರೆಡೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಹಲವು ಪ್ರಕರಣಗಳು ಬೆಂಗಳೂರಿನಿಂದ ವರದಿಯಾಗಿದ್ದು ಇದಕ್ಕೆ ಕಾರಣಕರ್ತರಾದವರ ಮೇಲೆ ಪೊಲೀಸರು ಆ್ಯಕ್ಷನ್ ಸಹ ತೆಗೆದುಕೊಂಡಿದ್ದಾರೆ. ಈ ರೀತಿಯ ಘಟನೆಗೆ ಕಾರಣಕರ್ತರಾದವರ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬಹುದಷ್ಟೇ ಬಿಟ್ಟರೆ ಇಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications