AI Cameras: ಬೆಂಗಳೂರು ಆಯ್ತು ಈಗ ಕೇರಳ ಪೊಲೀಸರಿಗೂ ನೆಮ್ಮದಿ... 726 ಎಐ ಕ್ಯಾಮೆರಾಗಳ ಅಳವಡಿಕೆ
ದೇಶದಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿದೆ, ಪ್ರಮುಖ ನಗರಗಳು ಟ್ರಾಫಿಕ್ ಸಮಸ್ಯೆಯಿಂದ ನಲುಗುತ್ತಿವೆ. ಕೆಲವೆಡೆ ಕೇವಲ 5 ಕಿ.ಮೀ ಪ್ರಯಾಣಿಸಲು ಗಂಟೆಗಟ್ಟಲೇ ಸಮಯ ತೆಗುದುಕೊಳ್ಳುತ್ತಿದೆ. ಈ ನಡುವೆಯು ಟ್ರಾಫಿಕ್ ನಿಯಂತ್ರಣವಾಗಬೇಕಾದರೆ ಟ್ರಾಫಿಕ್ ಪೊಲೀಸರ ಶ್ರಮ ತುಂಬಾ ಇದೆ. ಆದರೆ ಈಗ ಟ್ರಾಫಿಕ್ ಪೊಲೀಸರು ನಿಶ್ಚಿಂತೆಯಿಂದ ರಸ್ತೆಗಿಳಿಯದೆ ನಿಯಮ ಉಲ್ಲಂಗಿಸುವವರಿಗೆ ದಂಡ ವಿಧಿಸಬಹುದು.
ಪ್ರಸ್ತುತ ಮಿತಿಮೀರಿದ ವಾಹನಗಳಿಂದ ರಸ್ತೆ ಬದಿ ತಪಾಸಣೆ ನಡೆಸುವುದು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಬೆಂಗಳೂರಿನಲ್ಲಿ ಈ ಹಿಂದೆ 3,000 ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ (AI) ಚಾಲಿತ 7,000 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಹನಿವೆಲ್ ಕಂಪನಿ ಟೆಂಡರ್ ಪಡೆದು ಪೂರ್ಣಗೊಳಿಸಿತ್ತು. ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಮೊದಲ ಹಂತದ ಭಾಗವಾಗಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಕೂಡ ಹೊಂದಿದೆ.

ಇದೀಗ ಕೇರಳ ಸರದಿ ಆ ರಾಜ್ಯದಲ್ಲೂ 'ಸುರಕ್ಷಿತ ಕೇರಳ' ಯೋಜನೆಯ ಅಂಗವಾಗಿ 'ಸಂಪೂರ್ಣ ಸ್ವಯಂಚಾಲಿತ ಸಂಚಾರ ಜಾರಿ ವ್ಯವಸ್ಥೆಯನ್ನು ತರಲು ಕೇರಳ ಮೋಟಾರು ವಾಹನ ಇಲಾಖೆಯು ನಿರ್ಧರಿಸಿದೆ. ಇದಕ್ಕಾಗಿ ಎಐ (ಆರ್ಟಿಫಿಷಿಯಲ್ ಇಂಟಲಿಜನ್ಸ್) ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ ದಂಡ ವಿಧಿಸುವ 'ಸೇಫ್ ಕೇರಳ' ಯೋಜನೆ ಏಪ್ರಿಲ್ 20ರಿಂದ ಆರಂಭವಾಗಿದೆ. ಮಿತಿಮೀರಿದ ವಾಹನಗಳ ಜೊತೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರು ಕೂಡ ಹೆಚ್ಚಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ.
ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸುವುದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸುವುದು, ಸಿಗ್ನಲ್ ಜಂಪ್‌ನಂತಹ ಟ್ರಾಫಿಕ್ ನಿಯಮ ಉಲ್ಲಂಘಟನೆಗಳನ್ನು ಈ ಕ್ಯಾಮರಾಗಳು ಸೆರೆಹಿಡಿದು ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೋಂಗೆ ಕಳುಹಿಸುತ್ತವೆ. ಇದಕ್ಕಾಗಿ ಕೇರಳ ಮೋಟಾರು ವಾಹನ ಇಲಾಖೆ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ರಾಜ್ಯಾದ್ಯಂತ 726 ಎಐ ಕ್ಯಾಮೆರಾಗಳನ್ನು ಅಳವಡಿಸಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಚಿತ್ರ ಹಾಗೂ ಚಾಲಕನ ಭಾವಚಿತ್ರವನ್ನು AI ಕ್ಯಾಮೆರಾಗಳು ಸೆರೆಹಿಡಿದು ಮೋಟಾರು ವಾಹನ ಇಲಾಖೆಯ ನಿಯಂತ್ರಣ ಕೊಠಡಿಗೆ ಕಳುಹಿಸಲಾಗುವುದು. ಈ ಕ್ಯಾಮೆರಾಗಳು ಸೌರಶಕ್ತಿ ಚಾಲಿತವಾಗಿದ್ದು, 4G ಕನೆಕ್ಟಿವಿಟಿ ಸಿಮ್ ಬಳಸಿ ಡೇಟಾವನ್ನು ವರ್ಗಾಯಿಸಲಾಗುತ್ತದೆ. ಆರು ತಿಂಗಳವರೆಗಿನ ಉಲ್ಲಂಘನೆ ದೃಶ್ಯಾವಳಿಗಳನ್ನು ಸಂಗ್ರಹಿಸುವ ವ್ಯವಸ್ಥೆ ಇದರಲ್ಲಿದೆ. ಒಂದು ದಿನದಲ್ಲಿ ಬರೋಬ್ಬರಿ 30,000 ದಂಡದ ನೋಟಿಸ್‌ಗಳನ್ನು ಕಳುಹಿಸಬಹುದು ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.
ಈ ಕ್ಯಾಮರಾಗಳು ತುಂಬಾ ಅತ್ಯಾಧುನಿಕವಾಗಿದ್ದು, ವಾಹನಗಳು ವೇಗದ ಚಾಲನೆಯಲ್ಲಿದ್ದರೂ ಸ್ಪಷ್ಟ ನೋಟವನ್ನು ಒದಗಿಸುತ್ತವೆ. ಈ ಕ್ಯಾಮೆರಾ ಬಾಕ್ಸ್‌ನಲ್ಲಿರುವ ದೃಶ್ಯ ಸಂಸ್ಕರಣಾ ಘಟಕದಿಂದ ಎಲ್ಲಾ ವಾಹನಗಳನ್ನು ಪೊಲೀಸರು ವಿಶ್ಲೇಷಿಸುತ್ತಾರೆ. ಮೋಟಾರು ವಾಹನ ನಿರೀಕ್ಷಕರು ಟ್ರಾಫಿಕ್ ಉಲ್ಲಂಘನೆಯನ್ನು ನೋಟಿಸ್ ಕಳುಹಿಸುವ ಮೊದಲು ಪರಿಶೀಲಿಸುತ್ತಾರೆ. ಸರಿಯಾದ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ನೋಟೀಸ್ ಕಳುಹಿಸುತ್ತಾರೆ. ಈ ವ್ಯವಸ್ಥೆಯು ಪೊಲೀಸರ ಶ್ರಮವನ್ನು ತಗ್ಗಿಸಿ ಅಪಘಾತಗಳನ್ನು ನಿಯಂತ್ರಿಸಲಿದೆ ಎಂದು ಹೇಳಲಾಗುತ್ತಿದೆ.

ಮೇಲೆ ತಿಳಿಸಿದ ಅಪರಾಧಗಳಿಗೆ ದಂಡದ ಮೊತ್ತವನ್ನೂ ಇಲಾಖೆ ಬಿಡುಗಡೆ ಮಾಡಿದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದರೆ ರೂ. 500, ಮೂರು ಪಟ್ಟು ಹೆಚ್ಚಿಸಿದರೆ ರೂ. 1,000, ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸಿದರೆ ರೂ. 2,000, ಮತ್ತು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ರೂ. 500, ಅತಿ ವೇಗ ಮತ್ತು ಅತಿಕ್ರಮ ಪಾರ್ಕಿಂಗ್‌ಗೆ ರೂ. 1,500 ಅನ್ನು ದಂಡವಾಗಿ ವಿಧಿಸುವುದಾಗಿ ತಿಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications