ಬೆಂಗಳೂರು: ದರೋಡೆಯಿಂದ ತಪ್ಪಿಸಿಕೊಂಡ ಮಹಿಳೆ... ನಿಮ್ಮ ಕಾರಿನಲ್ಲೂ ಈ ಸೇಫ್ಟಿ ಫೀಚರ್ ಇರಲಿ!
ಬೆಂಗಳೂರಿನಲ್ಲಿ ನಕಲಿ ಅಪಘಾತಗಳ ಹೆಸರೇಳಿಕೊಂಡು ಪುಂಡರು ಸೃಷ್ಟಿಸುತ್ತಿರುವ ಅವಾಂತರುಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಅಪಘಾತವಾಗಿದೆಯೆಂದು ಮಹಿಳೆಯೊಬ್ಬರನ್ನು ಕಾರಿಂದ ಕೆಳಗಿಳಿಸಲು ಪ್ರಯತ್ನಿಸಿದ ಗ್ಯಾಂಗ್ ಒಂದರ ಕೃತ್ಯ ಕಾರಿನ ಡ್ಯಾಶ್ ಕ್ಯಾಂನಲ್ಲಿ ಸೆರೆಯಾಗಿದೆ. ಈ ಕುರಿತು ಮಹಿಳೆಯ ಪತಿ ಎಕ್ಸ್ (ಟ್ವಿಟರ್) ನಲ್ಲಿ ಘಟನೆಯನ್ನು ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬರು ತಮ್ಮ ಕಾರುಗಳಲ್ಲಿ ಡ್ಯಾಶ್‌ಕ್ಯಾಂ ಅನ್ನು ಅಳವಡಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸೃಜನ್ ಆರ್.ಶೆಟ್ಟಿ ಅವರು ಘಟನೆಯಲ್ಲಿ ಕಾರು ಓಡಿಸುತ್ತಿದ್ದ ಮಹಿಳೆಯ ಪತಿಯಾಗಿದ್ದು, ಎಕ್ಸ್‌ನಲ್ಲಿ ಆಘಾತಕಾರಿ ಮತ್ತು ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ನಾನು ಬೆಂಗಳೂರನ್ನು ಎಂದಿಗೂ ಅಸುರಕ್ಷಿತವೆಂದು ಭಾವಿಸಿಲ್ಲ. ಕನ್ನಡ ಮಾತನಾಡುವ ಪುರುಷ ಎಂಬ ನನ್ನ ವಿಶೇಷತೆ ನನಗೆ ತಿಳಿದಿದೆ.

ಕಳೆದ ಗುರುವಾರ ರಾತ್ರಿ ನಗರದ ಕೆಲವು ಭಾಗಗಳು ರಾತ್ರಿ 10 ಗಂಟೆಯ ನಂತರ ಎಷ್ಟು ಅಸುರಕ್ಷಿತ ಎಂದು ಈಗ ಅರಿವಾಗಿದೆ. ವಿಶೇಷವಾಗಿ ಸರ್ಜಾಪುರದಲ್ಲಿ ಗೂಂಡಾಗಳು ಜನರನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಾರೆ. ನವೆಂಬರ್ 8 ರಂದು, ನನ್ನ ಪತ್ನಿ ಕೂಡ ತನ್ನ ಸಹೋದ್ಯೋಗಿಗಳಿಗೆ ಸರ್ಜಾಪುರದಿಂದ ಕ್ಯಾಬ್ ಪಡೆಯಲು ಕಷ್ಟವೆಂದು ಅವರನ್ನು (2 ಹೆಣ್ಣು, ಒಬ್ಬ ಗಂಡು) ಡ್ರಾಪ್ ಮಾಡಲು ಮುಂದಾಗಿದ್ದಳು.
ಈ ವೇಳೆ ಮಾರ್ಗಮಧ್ಯೆ ಅವರ ಕಾರನ್ನು ಕೆಲವು ಕಿ.ಮೀವರೆಗೆ ಪುರುಷರ ಗುಂಪೊಂದು ಹಿಂಬಾಲಿಸಿದೆ. ಇದನ್ನು ಅರಿತ ನನ್ನ ಪತ್ನಿ ಮುಖ್ಯ ರಸ್ತೆಯಲ್ಲಿ ಮಾತ್ರ ಕಾರನ್ನು ನಿಲ್ಲಿಸಲು ಮತ್ತು ಸಾಧ್ಯವಾದಷ್ಟು ಬೇಗ ಪೊಲೀಸರಿಗೆ ತಿಳಿಸಲು ಮುಂದಾಗಿದ್ದಳು. ಆದರೆ ಪೊಲಿಸರಿಗೆ ತಿಳಿಸುವ ಗಾಬರಿಯಲ್ಲಿ ಫೊನ್ ಮಾಡುವಾಗ ಅಪಘಾತವಾಗುವ ಭಯದಿಂದ ಆಕೆ ಮಾಡಲಿಲ್ಲ. ಬಳಿಕ ಅವರು ವಾಹನ ಅಡ್ಡ ಹಾಕಿ ಕಾರಿನಿಂದ ಹೊರಬರಲು ಒತ್ತಾಯಿಸಿದ್ದಾರೆ.
ಕೆಲವು ಟೆಂಪೋ ಡ್ರೈವರ್‌ಗಳು ಆಕೆಯ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದರು, ಬಳಿಕ ಹಸಿರು ಶರ್ಟ್‌ನ ವ್ಯಕ್ತಿಯೊಂದಿಗೆ ಸೇರಿಕೊಂಡು ಕನ್ನಡ ಮಾತನಾಡಲು ಬಾರದ ಜನರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಗೆ ಯಾರೊಬ್ಬರೂ ಸಹಾಯ ಮಾಡಿಲ್ಲ. ಸ್ಥಳವು ಆತಂಕದಿಂದ ಕೂಡಿದ್ದು ನನ್ನ ಪತ್ನಿ ಕೂಡಲೇ ಎಚ್ಚರವಹಿಸಿದ್ದಳು.
ಮೊದಲು ಪೊಲೀಸರಿಗೆ ಕರೆ ಮಾಡಿ ಬಳಿಕ ನಮಗೆ ಮತ್ತು ಆಕೆಯ 10 ಸ್ನೇಹಿತರನ್ನು ತಕ್ಷಣವೇ ಸ್ಥಳಕ್ಕೆ ಕರೆಸಿಕೊಳ್ಳುವ ಬುದ್ಧಿವಂತಿಕೆ ಪ್ರದರ್ಶಿಸಿದ್ದಾಳೆ. ಇಲ್ಲದಿದ್ದರೆ, ಘಟನೆ ಬೇರೆ ತಿರುವು ಪಡೆದುಕೊಳ್ಳುತಿತ್ತು. ಈ ನಗರವು ಉತ್ತಮವಾಗಿದೆ, ಆದ್ರೆ ನಮಗೆ ಭದ್ರತೆ ಬೇಕು. ಸರ್ಜಾಪುರ ಈ ಘಟನೆಗಳಿಗೆ ಹಾಟ್‌ಸ್ಪಾಟ್ ಆಗಿದ್ದು, ಈ ಅಪಾಯವನ್ನು ತಡೆಯಲು ನಾವು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಎಕ್ಸ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
ಸ್ನೇಹಿತರು ಮತ್ತು ಕುಟುಂಬದವರು ಸಹಾಯಕ್ಕೆ ಬಂದಿರುವುದನ್ನು ಕಂಡ ಅಲ್ಲಿನ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆಯೇ ಎಂಬುದು ನಮಗೆ ಖಚಿತವಾಗಿಲ್ಲ. ಸೃಜನ್ ಟ್ವಿಟರ್ ಪೋಸ್ಟ್‌ನಲ್ಲಿ ಔಪಚಾರಿಕ ಪೊಲೀಸ್ ದೂರಿನ ಬಗ್ಗೆ ತಿಳಿಸಿಲ್ಲ. ಆದ್ರೆ ಇಂತಹ ಘಟನೆಗಳು ಸರ್ಜಾಪುರದಲ್ಲಿ ಹೆಚ್ಚಾಗಿ ನಡೆಯುತ್ತಿರುವುದನ್ನು ಒತ್ತಿ ಹೇಳಿದ್ದಾರೆ. ಈ ಬಗ್ಗೆ ಪೊಲಿಸರು ಕ್ರಮಕ್ಕೆ ಮುಂದಾಗಬೇಕಿದೆ.
ಸರ್ಜಾಪುರ ನಕಲಿ ಅಪಘಾತಗಳಿಗೆ ಕುಖ್ಯಾತಿ: ಸರ್ಜಾಪುರದಲ್ಲಿ ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಅದೇ ಪ್ರದೇಶದಲ್ಲಿ ನಡೆದಿರುವ ಮತ್ತೊಂದು ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾ ಇಡೀ ನಾಟಕವನ್ನು ಸೆರೆಹಿಡಿದಿತ್ತು. ಕಿಪಾಯ್ ಎಂಬಾತ ಟ್ವಿಟರ್‌ನಲ್ಲಿ ಈ ಭಯಾನಕ ಕಥೆಯನ್ನು ಈ ಹಿಂದೆ ಹಂಚಿಕೊಂಡಿದ್ದರು.
ಕಿಪಾಯ್ ತನ್ನ ತಾಯಿಯೊಂದಿಗೆ ಮನೆಗೆ ಹೋಗುತ್ತಿದ್ದಾಗ, ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯಲು ಯತ್ನಿಸಿದ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಅವರು ನಿಲ್ಲಿಸಿದಾಗ ಕಾರಿನ ಕಿಟಕಿಗಳನ್ನು ಒಡೆಯಲು ಪ್ರಯತ್ನಿಸಿದ್ದರು. ಕಾರಿನ ಮುಂಭಾಗ ಮತ್ತು ಹಿಂಭಾಗವನ್ನು ನಿರ್ಬಂಧಿಸಿದ್ದರು. ಅವರಿಂದ ಗಾಯಗಳಿಲ್ಲದೆ ಹೇಗೋ ತಪ್ಪಿಸಿಕೊಂಡು ಬಂದಿದ್ದರು. ಬಳಿಕ ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.


Click it and Unblock the Notifications