ನದಿಗುರುಳಿದ ಶಾಲಾ ಬಸ್; ಎಲ್ಲ 50 ಮಕ್ಕಳು ಪವಾಡ ಸದೃಶ ಪಾರು!
ರಾಜಸ್ತಾನದ ಬಿಲ್ವಾರಾ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪಾಲ್ಕಿ ನದಿಯಲ್ಲಿ ಪ್ರವಾಹದ ಸ್ಥಿತಿಯುಂಟಾಗಿದೆ. ತದಾ ಬೆನ್ನಲ್ಲೇ ಸೋಮವಾರದಂದು ನಡೆದ ಭೀಕರ ದುರ್ಘಟನೆಯೊಂದರಲ್ಲಿ ಶಾಲಾ ಬಸ್ಸೊಂದು ನದಿಗೆ ಉರುಳಿದ ಘಟನೆ ವರದಿಯಾಗಿದೆ.
ಆದರೆ ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ಅದೃಷ್ಟವಶಾತ್ ಸಂಭವಿಸಬೇಕಾದ ಮಹಾ ದುರಂತವೊಂದು ತಪ್ಪಿ ಹೋಗಿದೆ. ಬಸ್ಸಲ್ಲಿ ಸಂಚರಿಸುತ್ತಿದ್ದ ಎಲ್ಲ 50 ಮಂದಿ ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬಿಜೊಲಿಯಾ ಹಿರಿಯ ಪ್ರಾಥಮಿಕ ಖಾಸಗಿ ಶಾಲೆಯ ಮಕ್ಕಳು ಬೆಳಗ್ಗೆ ಬಸ್ಸಲ್ಲಿ ಶಾಲೆಗೆ ಹೊರಟಿದ್ದರು. ಭಾರಿ ಮಳೆ ಸುರಿಯುತ್ತಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಮಕ್ಕಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಯೋಚನೆಯಲ್ಲಿದ್ದ ಚಾಲಕ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲಿಂದಲೇ ಗಾಡಿ ಚಾಲನೆ ಮಾಡಲು ಮುಂದಾಗಿದ್ದರು.

ಆದರೆ ನೀರಿನ ಸೆಳೆತ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ ನೇರವಾಗಿ ನದಿಗೆ ಉರುಳಿದೆ.

ಅಲ್ಲೇ ಸಮೀಪದಲ್ಲಿದ್ದ ಸಾರ್ವಜನಿಕರು ಶಿಪ್ರ ಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರಿಂದ ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

10ರಿಂದ 15 ವರ್ಷ ಪ್ರಾಯ ಪರಿಧಿಯ 40ರಷ್ಟು ಬಾಲಕ-ಬಾಲಕಿಯರು ಬಸ್ಸಲ್ಲಿ ಸಂಚರಿಸುತ್ತಿದ್ದರು. ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ಸಿನ ಗಾಜುಗಳನ್ನು ಒಡೆಯುವ ಮೂಲಕ ಮಕ್ಕಳನ್ನು ಹೊರ ತೆಗೆಯಲಾಗಿತ್ತು. ಆದರೆ ಪೊಲೀಸರು ಘಟನಾ ಸ್ಥಳವನ್ನು ತಲುಪಲು ವಿಳಂಬವಾಗಿತ್ತು.

ಆಕ್ರೋಶ ಭರಿತರಾದ ಸಾರ್ವಜನಿಕರು ಚಾಲಕ ಹಾಗೂ ಪೊಲೀಸರನ್ನು ದಿಗ್ಬಂಧನಕ್ಕೊಳಗಾಗಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಳೆಗಾಲ ಪ್ರಭಾವ ಜಾಸ್ತಿಯಾಗಿರುವಂತೆಯೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಚಾಲಕರು ಎಚ್ಚರಿಕೆಯಿಂದ ನಿಧಾನವಾಗಿ ಗಾಡಿ ಚಾಲನೆ ಮಾಡಿ ಎಂಬುದು ಡ್ರೈವ್ ಸ್ಪಾರ್ಕ್ ಸಲಹೆಯಾಗಿದೆ.


Click it and Unblock the Notifications








