Shivamogga: ಸಿಹಿಸುದ್ದಿ.. ಶಿವಮೊಗ್ಗದಿಂದ ಇಲ್ಲಿಗೆ ಆಗಸ್ಟ್ 15ರಿಂದ ವಿಮಾನ ಸೇವೆ
ಮಲೆನಾಡಿನ ಜನರ ದಶಕಗಳ ಕನಸು 27 ಫೆಬ್ರವರಿ 2023ರಲ್ಲಿ ನನಸಾಗಿತ್ತು. ಅಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport)ವನ್ನು ಲೋಕಾರ್ಪಣೆಗೊಳಿಸಿದ್ದರು. ಸದ್ಯ ವಿಮಾನ ನಿಲ್ದಾಣ ಆರಂಭಗೊಂಡು ಒಂದೂವರೆ ವರ್ಷ ಸಮೀಪಿಸುತ್ತಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸೇವೆ ಒದಗಿಸುತ್ತಿದ್ದು, ಇತರೆ ನಗರಗಳಿಗೂ ಸಂಪರ್ಕ ಕಲ್ಪಿಸುವುದನ್ನು ಶುರು ಮಾಡಿವೆ. ಆಗಸ್ಟ್ 15ರಿಂದ ಚೆನ್ನೈಗೂ ವಿಮಾನ ಸಂಚಾರ ಪ್ರಾರಂಭವಾಗಲಿದೆ.
ಈ ಬಗ್ಗೆ ಭಾನುವಾರ ಎಕ್ಸ್ ಖಾತೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಅವರು ಪೋಸ್ಟ್ ಮಾಡಿದ್ದಾರೆ. 'ಶಿವಮೊಗ್ಗದಿಂದ ಚೆನ್ನೈಗೆ ಆಗಸ್ಟ್ 15ರಿಂದ ವಿಮಾನಯಾನ ಸೇವೆ ಪ್ರಾರಂಭವಾಗಲಿದೆ. ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ 1 ದಿನ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಟೈಸ್ ಜೆಟ್ ವಿಮಾನ ಸಂಚಾರ ನಡೆಸಲಿದೆ' ಎಂದು ಹೇಳಿದ್ದಾರೆ.

'ಮೋಡ ಮುಸುಕಿದ ವಾತಾವರಣ ಹಾಗೂ ರಾತ್ರಿ ವೇಳೆಯಲ್ಲೂ ವಿಮಾನ ಲ್ಯಾಂಡಿಂಗ್ ಆಗುವಂತಹ ವ್ಯವಸ್ಥೆಯನ್ನು ತ್ವರಿತವಾಗಿ ಮಾಡುವಂತೆ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ನವದೆಹಲಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಶೀಘ್ರದಲ್ಲೇ ನಿವಾರಣೆಯಾಗಲಿದೆ. ಇದು ಮಲೆನಾಡಿನ ಉದ್ಯಮ, ಜೀವನಮಟ್ಟ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ' ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ವಿಮಾನಗಳು ಕಾರ್ಯಾಚರಣೆ ಮಾಡುತ್ತಿವೆ. ಬೆಂಗಳೂರು (Bengaluru) ಮತ್ತು ಶಿವಮೊಗ್ಗ (Shivamogga) ಮಧ್ಯೆ 'ಇಂಡಿಗೋ' ಸಂಸ್ಥೆಯ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್, ತಿರುಪತಿ ಹಾಗೂ ಗೋವಾ ನಡುವೆ 'ಸ್ಟಾರ್ ಏರ್' ನೇರ ವಿಮಾನ ಸೇವೆಯನ್ನು ಒದಗಿಸುತ್ತಿದೆ.
ಸೋಗಾನೆಯಲ್ಲಿರುವ ಈ ವಿಮಾನ ನಿಲ್ದಾಣ ಶಿವಮೊಗ್ಗದಿಂದ 8.8 ಕಿ.ಮೀ ಭದ್ರಾವತಿಯಿಂದ 8.2 ಕಿ.ಮೀ ದೂರದಲ್ಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಭಾಗವಾಗಿ 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ವಿಮಾನ ನಿಲ್ದಾಣದ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸಾಕಷ್ಟು ಸುಸಜ್ಜಿತವಾಗಿದ್ದು, ಪ್ರತಿ ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಹುದು.
ದೇಶದ 148ನೇ ವಿಮಾನ ನಿಲ್ದಾಣವಾಗಿ ಸೇರ್ಪಡೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬಳಿಕ, ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ 2ನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ ಬೋಯಿಂಗ್ 737 ಮತ್ತು ಏರ್‌ಬಸ್ ಎ320ನಂತಹ ದೊಡ್ಡ ವಿಮಾನಗಳನ್ನು ಇಳಿಸಬಹುದು.
ಪ್ರಯಾಣಿಕರಿಂದಲೂ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ದೊಡ್ಡ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಮಾತ್ರವಲ್ಲದೆ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೂ ಹೆಚ್ಚಿನ ಅನುಕೂಲವಾಗುತ್ತಿದೆ. ಪ್ರವಾಸೋದ್ಯಮ ಹಾಗೂ ಉದ್ಯಮ ಚಟುವಟಿಕೆಗಳು ಕೂಡ ಉತ್ತಮವಾಗಿ ಬೆಳವಣಿಗೆ ಹೊಂದಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications