ಚೌಡೇಶ್ವರಿ ಭಕ್ತರಿಗೆ ಗುಡ್‌ನ್ಯೂಸ್.. ಸಿಗಂದೂರು ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿ, ಏನಿದರ ವಿಶೇಷತೆ?
ಶಿವಮೊಗ್ಗ (Shivamogga) ಜಿಲ್ಲೆಯ ಜನರಿಗೆ ಕಡೆಗೂ ಸಿಹಿಸುದ್ದಿ ಲಭ್ಯವಾಗಿದೆ. ಸಾಗರದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಲೋಕಾರ್ಪಣೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದೇ ಜುಲೈ 14ರಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. ಹೊಸ ಸೇತುವೆಯಿಂದ ಸ್ಥಳೀಯರು ಮಾತ್ರವಲ್ಲದೆ, ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳುವ ಯಾತ್ರಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಪೋಸ್ಟ್ ಮಾಡಿದ್ದಾರೆ. 'ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದಾಗಿ, ರೂ.473 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ದೇಶದ 2ನೇ ಅತಿ ಉದ್ದದ ಹೊಳೆಬಾಗಿಲು-ಕಳಸವಳ್ಳಿ ಸೇತುವೆಯ ಉದ್ಘಾಟನಾ ಸಮಾರಂಭವು ಜುಲೈ 14ರಂದು ನಡೆಯಲಿದೆ. ಅಂದು ನಿತಿನ್ ಗಡ್ಕರಿ ಹೊಸ ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರಿದು, 'ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಈ ಸೇತುವೆಗೆ ಶ್ರೀ ಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವುದರೊಂದಿಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸುವ ರಾಜ್ಯ ಹಾಗೂ ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೂ ಅನುಕೂಲವಾಗಲಿದೆ' ಎಂದಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ರೂ.20 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದು ಕ್ಷೇತ್ರದ ವಿಶೇಷ ಸಾಧನೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಸಿಗಂದೂರು ಸೇತುವೆ ನಿರ್ಮಾಣದಿಂದ ನನಗೆ ಸಾರ್ಥಕತೆಯ ಭಾವನೆ ಮೂಡಿದೆ' ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.

ಈ ಸಿಗಂದೂರು ಸೇತುವೆ (Sigandur Bridge), ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ (Karnataka's Longest Cable Bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬರೋಬ್ಬರಿ 2.44 ಕಿಲೋಮೀಟರ್ ಉದ್ದವಿದ್ದು, 16-ಮೀಟರ್‌ನಷ್ಟು ಅಗಲವಿದೆ. 2018ರ ಫೆಬ್ರವರಿಯಲ್ಲಿ ಈ ಸೇತುವೆ ನಿರ್ಮಾಣಕ್ಕಾಗಿ ಶುಂಕು ಸ್ಥಾಪನೆ ನೆರವೇರಿಸಲಾಗಿತ್ತು.
ಇತ್ತೀಚೆಗೆ ನೂತನ ಸೇತುವೆ ಮೇಲೆ ಲೋಡ್ ಟೆಸ್ಟ್‌ನ್ನು ನಡೆಸಲಾಯಿತು. ಅಲ್ಲಿಯೂ ಧನಾತ್ಮಕ ಫಲಿತಾಂಶಗಳನ್ನು ಕಾಣಲಾಯಿತು. ಎರಡು ದಿನಗಳ ಕಾಲ 18 ಟಿಪ್ಪರ್‌ಗಳನ್ನು ಬಳಸಿ, ಈ ಪರೀಕ್ಷೆಯನ್ನು ಯಶಸ್ವಿಗೊಳಿಸಲಾಯಿತು. ಮೊದಲಿಗೆ 50 ಟನ್, ಆ ಬಳಿಕ 75 ಟನ್ ಹಾಗೂ 100 ಟನ್ ಲೋಡ್‌ನ ಟಿಪ್ಪರ್‌ಗಳನ್ನು 24 ಗಂಟೆಗಳ ಕಾಲ ಸೇತುವೆ ಮೇಲೆ ನಿಲ್ಲಿಸಲಾಗಿತ್ತು.
ಸಾಗರದಿಂದ ಸಿಗಂದೂರು ಅಥವಾ ತುಮರಿಗೆ ಹೋಗಲು ರಸ್ತೆ ಮಾರ್ಗವಾಗಿ 80 ಕಿಲೋಮೀಟರ್ ಪ್ರಯಾಣಿಸಬೇಕು. ಆದರೆ, ಹೊಸ ಸೇತುವೆಯು ಆ ದೂರವು ಅರ್ಧದಷ್ಟು ಕಡಿಮೆಯಾಗಲಿದೆ. ಸದ್ಯ, ಸಿಗಂದೂರು ತಲುಪಲು ಶರಾವತಿಯ ಹಿನ್ನೀರಿನಲ್ಲಿ ಲಾಂಚ್ ಮೂಲಕ ಪ್ರಯಾಣ ಮಾಡಬೇಕು. ಬೆಳ್ಳಗೆ ಲಾಂಚ್ ಸೇವೆ ಶುರುವಾಗಲಿದ್ದು, ಸಂಜೆ 6:30ಕ್ಕೆ ಕೊನೆಗೊಳ್ಳಲಿದೆ.
ಒಟ್ಟಾರೆಯಾಗಿ ನೂತನ ಸೇತುವೆಯಿಂದ ಸ್ಥಳೀಯರು ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಸಿಗಂದೂರು ಚೌಡೇಶ್ವರಿಯ ದರ್ಶನಕ್ಕೆ ಬರುವ ಭಕ್ತರಿಗೂ ದೊಡ್ಡ ಮಟ್ಟದ ಪ್ರಯೋಜನಗಳಾಗಲಿವೆ. ಜೊತೆಗೆ ಈ ಭಾಗದ ಒಂದಷ್ಟು ಹಳ್ಳಿಗಳಲ್ಲಿ ವ್ಯಾಪಾರ-ವಹಿವಾಟು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಉತ್ತಮವಾದ ಬೆಳವಣಿಗೆಯಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications








