ಸಿದ್ದು ನಿರ್ಧಾರಕ್ಕೆ ಬೆಂಗಳೂರು ಜನ ಫುಲ್ ಖುಷ್... ಸಾಮಾನ್ಯರಂತೆ ಪ್ರಯಾಣಿಸಲಿದ್ದಾರೆ ಹೊಸ ಸಿಎಂ
ಬೆಂಗಳೂರಿನ ಟ್ರಾಫಿಕ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿಯೇ ಟ್ರಾಫಿಕ್ ಹೆಚ್ಚಾಗಿರುವ ರಸ್ತೆಗಳಲ್ಲಿ ಅಪಘಾತ ಅಥವಾ ಮರ ಉರುಳಿ ರಸ್ತೆಗೆ ಅಡ್ಡಿಯಾದ್ರೆ ಪ್ರಯಾಣಿಕರ ಪಾಡು ಹೇಳಬೇಕಿಲ್ಲ. ಇದನ್ನು ಮನಗಂಡು ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ತಮೆಗೆ ಜೀರೋ ಟ್ರಾಫಿಕ್ ಪ್ರೋಟೋಕಾಲ್ ಬೇಡ ಎಂದು ಸಿಟಿ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ ಸಿದ್ದರಾಮಯ್ಯ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಭಾನುವಾರ ಬೆಂಗಳೂರು ಪೊಲೀಸರಿಗೆ ಜೀರೋ ಟ್ರಾಫಿಕ್ ಪ್ರೋಟೋಕಾಲ್ ಅನ್ನು ಹಿಂತೆಗೆದುಕೊಳ್ಳುವಂತೆ ಟ್ವಿಟ್ಟರ್ ಮೂಲಕ ಸಿಟಿ ಪೊಲೀಸ್ ಕಮಿಷನರ್ ಅವರನ್ನು ಕೇಳಿಕೊಂಡಿಂದ್ದಾರೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ಇಬ್ಬಲೂರು ಬಳಿ ಇರುವ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ ಟ್ರಕ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 4 ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದರು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ಸರ್ಜಾಪುರ/ಬೆಳ್ಳಂದೂರು ಬೊಮ್ಮನಹಳ್ಳಿ, ಕೋರಮಂಗಲ, ಎಚ್‌ಎಸ್‌ಆರ್, ಮಡಿವಾಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಟ್ರಾಫಿಕ್ ಜಾಮ್‌ನಲ್ಲಿಯೇ ಯುವತಿಯೊಬ್ಬರು ಸ್ಕೂಟರ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಟ್ರಾಫಿಕ್ ಜಾಮ್ ನಿಂದ ಬೆಳ್ಳಂದೂರಿನಲ್ಲಿ ಕೆಲಸ ಮಾಡುವ ಅನೇಕ ಟೆಕ್ಕಿಗಳು ಮನೆಗೂ ವಾಪಸ್ ಹೋಗಲಾಗದೇ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಪರಿಣಾಮ ವಾಹನಗಳನ್ನು ರಸ್ತೆ ಬದಿ ಪಾರ್ಕ್ ಮಾಡಿ ಮನೆಗೆ ಮರಳಿದ್ದರು.
ಇನ್ನೂ ಅನೇಕರು 2 ಕಿ.ಮೀಗಳಷ್ಟು ಕ್ರಮಿಸಲು 1.5 ಗಂಟೆಗಳಷ್ಟು ಸಮಯ ತೆಗೆದುಕೊಂಡಿದ್ದರು. ಒಟ್ಟಾರೆ ಬೆಳಗ್ಗೆ 9 ಗಂಟೆಗೆ ತಲುಪಬೇಕಿದ್ದವರು ಮಧ್ಯಾಹ್ನದ ವೇಳೆಗೆ ಕಚೇರಿಗಳಿಗೆ ತಲುಪಿ ನಗರ ಟ್ರಾಫಿಕ್ ಸಮಸ್ಯೆ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಈಗ ಹೊಸ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
"ನನ್ನ ವಾಹನ ಸಂಚಾರಕ್ಕೆ 'ಜೀರೋ ಟ್ರಾಫಿಕ್' ಪ್ರೋಟೋಕಾಲ್ ಅನ್ನು ಹಿಂಪಡೆಯುವಂತೆ ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಕೇಳಿದ್ದೇನೆ. 'ಜೀರೋ ಟ್ರಾಫಿಕ್' ನಿಂದಾಗಿ ನಿರ್ಬಂಧಗಳಿರುವ ಮಾರ್ಗದಲ್ಲಿ ಪ್ರಯಾಣಿಸುವ ಜನರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ನೋಡಿದ ನಂತರ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
2019 ರಲ್ಲಿ, ರಾಜ್ಯ ಸರ್ಕಾರವು ಸುಮಾರು 14.3 ಕೋಟಿ ವೆಚ್ಚದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರಂ ನಡುವಿನ 17 ಕಿ.ಮೀ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮೀಸಲಾದ ಬಸ್ ಲೇನ್ 'ಬಸ್ ಆದ್ಯತಾ ಲೇನ್' ಅನ್ನು ಮಾಡಿದ್ದರು. ಆದರೆ ಮೆಟ್ರೋ ಕಾಮಗಾರಿ ಆರಂಭವಾದ ಬಳಿಕ ಲೇನ್ ಗಳು ಕಿತ್ತು ಹೋಗಿವೆ. ಮೆಟ್ರೋ ಕಾಮಗಾರಿಯು ಎರಡೂ ಬದಿಗಳಲ್ಲಿ 4.5 ಮೀಟರ್‌ಗಳನ್ನು ತೆಗೆದುಕೊಂಡಿರುವ (ಒಟ್ಟು 9 ಮೀ.) ಕಾರಣ ರಸ್ತೆಯ ಅಗಲವನ್ನು ಕಡಿಮೆ ಮಾಡಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications