Signal Jump: ನಗರಗಳಲ್ಲೇ ನಿಯಮ ಪಾಲನೆ ಇಲ್ಲ... ವಿದೇಶಿಗರು ಕೀಳಾಗಿ ನೋಡಲು ಇದೊಂದು ಸಾಕಲ್ಲವೆ?
ಟ್ರಾಫಿಕ್ ನಿಯಮಗಳ ಉಲ್ಲಂಘನೆ ಎಂಬುದು ಭಾರತದ ಪ್ರತಿಯೊಂದು ನಗರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಪೊಲೀಸರ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಚಾಲಕರು ತಮ್ಮ ವಾಹನಗಳನ್ನು ಬೇಜವಾಬ್ದಾರಿಯಾಗಿ ಓಡುಸುತ್ತಾರೆ ಎಂಬುದಕ್ಕೆ ಇಲ್ಲಿನ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಈ ಘಟನೆಯು ತೆಲಂಗಾಣ ರಾಜ್ಯದಲ್ಲಿ ನಡೆದಿದ್ದು ಟ್ರಾಫಿಕ್ ಪೊಲೀಸರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ಈ ವಿಡಿಯೋವನ್ನು ನೋಡಿದ ಕೂಡಲೇ ಕಾರು ಚಾಲಕನ ಮೇಲೆ ಎಂಥವರಿಗೂ ಒಮ್ಮೆಲೆ ಕೋಪ ಬರುತ್ತದೆ. ಎಲ್ಲಾ ವಾಹನಗಳು ಸಿಗ್ನಲ್‌ನಲ್ಲಿ ಸಾಲಾಗಿ ನಿಂತಿದ್ದರೆ ಸ್ಕಾರ್ಪಿಯೋ ಕಾರು ಚಾಲಕ ಮಾತ್ರ ಸಿಗ್ನಲ್ ಜಂಪ್ (Signal Jump) ಮಾಡಿದ್ದಾನೆ. ಅಲ್ಲದೇ ಬೈಕ್ ಸವಾರನನ್ನು ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವಿಡಿಯೋವನ್ನು ಸೈಬರಾಬಾದ್ ಟ್ರಾಫಿಕ್ ಪೊಲೀಸರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹೈದರಾಬಾದ್ ಕೂಡ ಬೆಂಗಳೂರಿನಂತೆ ಹೈಟೆಕ್ ಸಿಟಿಯಾಗಿರುವುದರಿಂದ ಇಲ್ಲಿನ ಸೈಬರಾಬಾದ್ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಲ್ಲಿ ನಿತ್ಯ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ.
ಹಾಗಾಗಿಯೇ ವಾಹನ ಸವಾರರಲ್ಲಿ ಅರಿವು ಮೂಡಿಸಲು ಈ ವಿಡಿಯೋವನ್ನು ಪೊಲೀಸರು ಹಂಚಿಕೊಂಡಿದ್ದಾರೆ. ನಿಜಕ್ಕೆ ಈ ವಿಡಿಯೋ 2021 ರಲ್ಲಿ ದುರ್ಗಾ ನಗರ ಎಕ್ಸ್ ರೋಡ್ ಮೈಲಾರ ದೇವಪಲ್ಲಿಯಲ್ಲಿ ಸಂಭವಿಸಿದ ನೈಜ ಅಪಘಾತವಾಗಿದೆ. ಅಲ್ಲಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದೆ.

ಈ ವಿಡಿಯೋದಲ್ಲಿ ಒಂದೆಡೆ ಗ್ರೀನ್ ಸಿಗ್ನಲ್ ಬಿಟ್ಟು ವಾಹನಗಳು ಮುಂದಕ್ಕೆ ಸಾಗುತ್ತಿದ್ದರೇ ಮತ್ತೊಂದೆಡೆ ರೆಡ್ ಸಿಗ್ನಲ್ ದಾಟಿ ಗ್ರೀನ್ ಸಿಗ್ನಲ್‌ನಿಂದ ಬರುವ ವಾಹನಗಳೆಡೆ ಹೋಗುವುದು ಎಷ್ಟು ಸರಿ? ಇದೇ ವೇಳೆ ಎದುರಿಗೆ ಬಂದ ಪಲ್ಸರ್ ಬೈಕ್ ಸ್ಕಾರ್ಪಿಯೋ ಚಾಲಕನ ಉದ್ದಟತನದ ಡ್ರೈವಿಂಗ್‌ನಿಂದ ಹಾನಿಗೊಂಡಿದ್ದಾನೆ. ಅಚ್ಚರಿ ಎಂದರೆ ಬೈಕ್ ಸವಾರ ಕೂಡ ಹೆಲ್ಮೆಟ್ ಧರಿಸಿರಲಿಲ್ಲ.
ಆತ ಕಾರಿನ ಬಾನೆಟ್ ಮೇಲೆ ಬಿದ್ದು ನಂತರ ನೆಲದ ಮೇಲೆ ಬಿದ್ದಿದ್ದಾನೆ. ಇದೆಲ್ಲವೂ ಕೇವಲ ಒಂದೇ ಸೆಕೆಂಡಿನಲ್ಲಿ ಸಂಭವಿಸಿದೆ. ಬೈಕ್ ಸವಾರ ಕೂಡಲೇ ಎದ್ದು ಚಾಲಕನ ಜತೆ ಜಗಳವಾಡಲು ಮುಂದಾದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹೈದರಾಬಾದ್ ಪೊಲೀಸರು ವೀಡಿಯೊವನ್ನು ತನಿಖೆ ಮಾಡಿ ಕಾರು ಮಾಲೀಕನನ್ನು ಹಾಗೂ ಚಾಲಕನನ್ನು ಪತ್ತೆಹಚ್ಚಿದ್ದಾರೆ.

ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಪಘಾತದ ಸಂದರ್ಭದಲ್ಲಿ, ಸವಾರನನ್ನು ನಿಲ್ಲಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವುದು ಕಾರು ಚಾಲಕನ ಕರ್ತವ್ಯವಾಗಿದೆ. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಎರಡೂ ಪಕ್ಷಗಳು ವಿಮೆ ವಿವರಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಿಯಮವನ್ನು ಉಲ್ಲಂಘಿಸುವ ವ್ಯಕ್ತಿಯು ಮೋಟಾರು ವಾಹನ ಕಾಯ್ದೆ 1998 ರ ಸೆಕ್ಷನ್ 187 ರ ಅಡಿಯಲ್ಲಿ ಶಿಕ್ಷಾರ್ಹನಾಗಿದ್ದಾನೆ.
ಹೀಗೆ ವಿಡಿಯೋದಲ್ಲಿ ವಿವರಗಳನ್ನು ಹಂಚಿಕೊಂಡಿರುವ ಸೈಬರಾಬಾದ್ ಪೊಲೀಸರು ಅಲ್ಲಿನ ವಾಹನ ಸವಾರರಿಗೆ ಅರಿವು ಮೂಡಿಸುತ್ತಿದ್ದಾರೆ. ನಮ್ಮ ರಾಜ್ಯದ ಪ್ರಮುಖ ನಗರಗಳಲ್ಲೂ ಇಂತಹ ಹಲವು ಘಟನೆಗಳು ನಡೆದಿವೆ. ವಿದೇಶಗಳಂತೆ ನಮ್ಮ ದೇಶದಲ್ಲಿ ಏಕೆ ನಿಯಮಗಳನ್ನು ಪಾಲುಸುತ್ತಿಲ್ಲ, ಇದಕ್ಕೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications