ಅಭಿವೃದ್ಧಿ ಜೊತೆಗೆ ಲಾಭ ಅಂದ್ರೆ ಇದೆ: ಹೈದರಾಬಾದ್ ನೋಟವನ್ನೇ ಬದಲಿಸಿದ ಸೋಲಾರ್ ರೂಫ್ ಟ್ರ್ಯಾಕ್
ವಿಶ್ವ ದರ್ಜೆಯ ಪರಿಸರ ಸ್ನೇಹಿ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ನಿರ್ಮಾಣದೊಂದಿಗೆ ಹೈದರಾಬಾದ್ ನೋಟವೇ ಈಗ ಬದಲಾಗಿದೆ. ಇದನ್ನು ತೆಲಂಗಾಣ ಸಚಿವ ಕೆಟಿಆರ್ (ಕೆಟಿ ರಾಮಾರಾವ್) ಅವರು ಭಾನುವಾರ (ಅಕ್ಟೋಬರ್ 1) ಉದ್ಘಾಟಿಸಿದ್ದು, ಸೋಲಾರ್ ರೂಫ್ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಒಳಗೊಂಡ ದೇಶದ ಮೊದಲ ನಗರವಾಗಿ ಹೈದರಾಬಾದ್ ಗುರ್ತಿಸಿಕೊಂಡಿದೆ.
ಅಂತರಾಷ್ಟ್ರೀಯ ಸೈಕ್ಲಿಂಗ್ ಪಂದ್ಯಾವಳಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಮಾನದಂಡಗಳೊಂದಿಗೆ ಈ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು HMDA (Hyderabad Metropolitan Development Authority) ಅಧಿಕಾರಿಗಳು ವಿವರಿಸಿದ್ದಾರೆ. ಈ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ 32 ಸಾವಿರ ಬೀದಿ ದೀಪಗಳಿಗೆ ವಿದ್ಯುತ್ ಪೂರೈಸಲಿದೆ. ಆರು ವರ್ಷಗಳಲ್ಲಿ ಸೋಲಾರ್ ವಿದ್ಯುತ್ ಮೂಲಕ ಬಂಡವಾಳ ವಾಪಸ್ ಪಡೆಯಲಾಗುವುದು ಎಂದು ಸಚಿವ ಕೆಟಿಆರ್ ತಿಳಿಸಿದ್ದಾರೆ.

ಈ ಟ್ರ್ಯಾಕ್ ನಲ್ಲಿ 16 ಸಾವಿರ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಬದಲಾಗುತ್ತಿರುವ ಜೀವನ ಶೈಲಿಗೆ ತಕ್ಕಂತೆ ಪ್ರತಿಯೊಬ್ಬರೂ ಸೈಕ್ಲಿಂಗ್ ನಂತಹ ದೈಹಿಕ ಚಟುವಟಿಕೆಯನ್ನು ಮಾಡಬೇಕು. ವಾಹನ ದಟ್ಟಣೆ ಹೆಚ್ಚಿರುವ ಗಂಡಿಪೇಟ್ ಬಳಿಯೂ ಸಂಪೂರ್ಣ ಐಟಿ ಕಾರಿಡಾರ್ ಸುತ್ತಲೂ ಶೀಘ್ರವೇ ಸೈಕಲ್ ಟ್ರ್ಯಾಕ್ ಸ್ಥಾಪಿಸಲಾಗುವುದು ಎಂದು ಸಚಿವ ಕೆಟಿಆರ್ ಭರವಸೆ ನೀಡಿದ್ದಾರೆ.
ಟ್ರಾಕ್ ವಿಶೇಷತೆಗಳು: ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಟ್ರಾಕ್ ನಿರ್ಮಾಣಗೊಂಡಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ಮಾರ್ಗಗಳಲ್ಲಿ ಸೈಕ್ಲಿಸ್ಟ್‌ಗಳ ಮನರಂಜನೆಗಾಗಿ ಹಲವು ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಸೈಕ್ಲಿಸ್ಟ್‌ಗಳು ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳವನ್ನು ಒದಗಿಸಲಾಗಿದೆ. ಇದಲ್ಲದೇ ಭದ್ರತೆಯ ದೃಷ್ಟಿಯಿಂದ ಟ್ರ್ಯಾಕ್ ಉದ್ದಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

HMDA ಪ್ರಕಾರ, ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ಮಾರ್ಗದಲ್ಲಿ ಸೈಕಲ್ ರಿಪೇರಿ ಮಳಿಗೆಗಳಿವೆ. ಇದಲ್ಲದೇ ಬಾಡಿಗೆ ಸೈಕಲ್ ಮಳಿಗೆಗಳೂ ಇಲ್ಲಿವೆ. ಹಗಲಿನಲ್ಲಿ ಮಾತ್ರವಲ್ಲದೆ ದಿನದ 24 ಗಂಟೆಯೂ ಈ ಟ್ರ್ಯಾಕ್ ಲಭ್ಯವಿರುತ್ತದೆ. ಆಹಾರ ಪ್ರಿಯರಿಗೆ ಟ್ರ್ಯಾಕ್‌ನಲ್ಲಿ ವಿವಿಧ ಫುಡ್ ಕೋರ್ಟ್‌ಗಳು ಲಭ್ಯವಿರುತ್ತವೆ. ಸೈಕಲ್ ಟ್ರ್ಯಾಕ್ ನೋಡಲು ಬರುವ ಪ್ರವಾಸಿಗರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ಮೂಲಕ ನಗರದಲ್ಲಿ ಮಾಲಿನ್ಯ ತಗ್ಗಿಸುವ ಗುರಿ ಹೊಂದಲಾಗಿದೆ. ಐಟಿ ಕಾರಿಡಾರ್‌ನಲ್ಲಿ ಸೈಕಲ್ ಸವಾರರಿಗೆ ಈ ಟ್ರ್ಯಾಕ್ ತುಂಬಾ ಉಪಯುಕ್ತವಾಗಲಿದೆ. ವಿಶ್ವದ ಮೊದಲ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ದಕ್ಷಿಣ ಕೊರಿಯಾದಲ್ಲಿದ್ದರೆ, ಇದು ಭಾರತದಲ್ಲಿ ಮೊದಲನೆಯದು. 2022 ರ ಸೆಪ್ಟೆಂಬರ್ 6 ರಂದು ಸಚಿವ ಕೆಟಿಆರ್ ಇದರ ನಿರ್ಮಾಣಕ್ಕೆ ಚಾಲನೆ ನೀಡಿದ ಕೇವಲ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗಿದೆ.

ಎಲ್ಲಿದೆ ಟ್ರಾಕ್: ಈ ಸೋಲಾರ್ ರೂಫ್ ಟಾಪ್ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಹೈದರಾಬಾದ್‌ನ ನರಸಿಂಗಿ ಬಳಿ ಸ್ಥಾಪಿಸಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿ 23 ಕಿ.ಮೀ.ವರೆಗೆ ಈ ಸೈಕಲ್ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಲಾಗಿದೆ. ನರಸಿಂಗಿಯಿಂದ ಪೊಲೀಸ್ ಅಕಾಡೆಮಿಯವರೆಗೆ, ನರಸಿಂಗಿಯಿಂದ ಕೊಲ್ಲೂರುವರೆಗೆ ಈ ಸೈಕಲ್ ಟ್ರ್ಯಾಕ್ ಅನ್ನು ನಗರವಾಸಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಸುಮಾರು ರೂ. 100 ಕೋಟಿ ವೆಚ್ಚದಲ್ಲಿ ನರಸಿಂಗಿ - ಗಂಡಿಪೇಟೆ ರಸ್ತೆಯಲ್ಲಿ 4.25 ಮೀಟರ್ ಅಗಲದಲ್ಲಿ ಮೂರು ಲೈನ್‌ಗಳಲ್ಲಿ ಸೋಲಾರ್ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದೆ. ಹಾಗೆಯೇ ನರಸಿಂಗಿಯಿಂದ ಪೊಲೀಸ್ ಅಕಾಡೆಮಿವರೆಗೆ 8.5 ಕಿ.ಮೀ ಮತ್ತು ನರಸಿಂಗಿಯಿಂದ ಕೊಲ್ಲೂರು 14.5 ಕಿ.ಮೀ ಸೈಕಲ್ ಟ್ರ್ಯಾಕ್ ನಿರ್ಮಾಣಗೊಂಡಿದೆ.

ಒಟ್ಟಾರೆ 23 ಕಿಲೋಮೀಟರ್ ಉದ್ದದ ಈ ಹೈಟೆಕ್ ಸೈಕ್ಲಿಂಗ್ ಟ್ರ್ಯಾಕ್ 16 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಇದು ದೇಶದ ಮೊದಲ ಸೋಲಾರ್ ರೂಫ್ ಟಾಪ್ ಸೈಕಲ್ ಟ್ರ್ಯಾಕ್ ಆಗಿದೆ. ಈ ಗ್ರೀನ್ ಫೀಲ್ಡ್ ಸೋಲಾರ್ ರೂಫ್ ಟಾಪ್ ಸೈಕಲ್ ಟ್ರ್ಯಾಕ್ ಪರಿಸರ ಸ್ನೇಹಿ ಮಾತ್ರವಲ್ಲದೆ ವಿದ್ಯುತ್ ಉತ್ಪಾದಿಸುವುದರ ಜೊತೆಗೆ ನಗರವಾಸಿಗಳಿಗೆ ಸೈಕ್ಲಿಂಗ್‌ಗೆ ಕೊಡುಗೆ ನೀಡುವ ಮೂಲಕ ಉಪಯುಕ್ತವಾಗಿದೆ.


Click it and Unblock the Notifications