ಕಣ್ತುಂಬಿ ಬರುತ್ತೆ: ಅಂಬಾಸಿಡರ್ ಕಾರನ್ನು ತಂದೆಗೆ ಗಿಫ್ಟ್ ಕೊಟ್ಟ ಮಕ್ಕಳು.. ರೋಚಕ ಸ್ಟೋರಿ
ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದ ದಿನಗಳ ನೆನಪುಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತವೆ. ಅದರಲ್ಲೂ ತಮ್ಮ ಪೋಷಕರು ಬಳಸುವ ಸ್ಕೂಟರ್ ಅಥವಾ ಕಾರುಗಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆದರೆ, ಕೆಲವರ ಜೀವನದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಆ ವಾಹನಗಳು ದೂರವಾಗಿರುತ್ತವೆ. ಅದನ್ನು ಮತ್ತೆ ತಮ್ಮ ಬದುಕಿನ ಭಾಗವಾಗಿಸಿಕೊಳ್ಳಲು ಹಲವಾರು ಶತಪ್ರಯತ್ನ ನಡೆಸುತ್ತಾರೆ.
ಪಕ್ಕದ ರಾಜ್ಯ ಕೇರಳದಲ್ಲಿಯೂ ಅಂತಹದ್ದೇ ಘಟನೆ ನಡೆದಿದೆ. ಸರಿ ಸುಮಾರು ಎರಡು ದಶಕದ ಹಿಂದೆ, ತಮ್ಮ ಕುಟುಂಬದಿಂದ ಮರೆಯಾಗಿದ್ದ ಪ್ರೀತಿಯ ಅಂಬಾಸಿಡರ್ ಕಾರನ್ನು ಮಕ್ಕಳು, ಮತ್ತೆ ತಮ್ಮ ತಂದೆಗೆ 'ವಿಶ್ವ ಅಪ್ಪಂದಿರ ದಿನ' ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರನ್ನು ಕಂಡ ಕೊಡಲೇ ಸಂತೋಷದಿಂದ ಆ ತಂದೆಯ ಕಣ್ಣುಗಳು ಒದ್ದೆಯಾದವು. ಕಾರಿನೊಂದಿಗೆ ಇಡೀ ಕುಟುಂಬ ಫೋಟೋಗೆ ಪೋಸ್ ನೀಡಿ, ಸಂಭ್ರಮಿಸಿತು.

ರಾತ್ರಿ 12 ಗಂಟೆ ಸುಮಾರಿಗೆ ನೀಲಿ ಬಣ್ಣದ ಹಳೆಯ ಕಾರು, ಮನೆ ಮುಂದೆ ನಿಂತಾಗ, 84ನೇ ವಯಸ್ಸಿನ ಅಚ್ಯುತನ್ ನಾಯರ್ ಅವರಿಗೆ ಏನು ಅರ್ಥವಾಗಲಿಲ್ಲ. ಆದರೆ, 1959ರ ಮಾಡೆಲ್ ಅಂಬಾಸಿಡರ್ ಕಾರಿನ ತ್ರಿಶೂರ್ ನೋಂದಣಿ ಸಂಖ್ಯೆ ನೋಡಿ, ಒಮ್ಮೆಲೇ ನೆನಪಿನ ಅಲೆಗಳು ತೇಲಿ ಬಂದವು. 23 ವರ್ಷಗಳ ಕಾಲ ಈ ಕಾರಿನೊಂದಿಗಿನ ಬಾಂಧವ್ಯ ಮತ್ತೆ ಮರುಕಳಿಸಿತು.
ಅಚ್ಯುತನ್ ನಾಯರ್, ಮಲಯಾಳಂ ಮಹಾಕವಿ ವಲ್ಲತ್ತೋಳ್ ಅವರ ಸಹೋದರಿಯ ಪುತ್ರ ಡಾ.ವಿ.ಆರ್.ಮೆನನ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವೈದ್ಯ ಮೆನನ್ 1968ರಲ್ಲಿ ಈ ಅಂಬಾಸಿಡರ್ ಖರೀದಿಸಿದ್ದರು. ಅವರ ಸಹಾಯಕರಾಗಿದ್ದ ಅಚ್ಯುತನ್ ನಾಯರ್ ಇದರ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತಿದ್ದರು. ಅಂಬಾಸಿಡರ್ ಕಾರನ್ನು ತಮ್ಮ ಮನೆಯಲ್ಲಿ ನಿಲ್ಲಿಸಿಕೊಳ್ಳುತ್ತಿದ್ದ ಕಾರಣ, ಅಚ್ಯುತನ್ ನಾಯರ್ ಮಕ್ಕಳಾದ ಅಜಿತ್ ಮತ್ತು ಸುಜಿತ್ ಅವರಿಗೂ ಇದರ ಮೇಲೆ ವಿಶೇಷ ಅಭಿಮಾನವಿತ್ತು.
ಅಂಬಾಸಿಡರ್ ಕಾರು, ಅಚ್ಯುತನ್ ನಾಯರ್ ಅವರ ಜೀವನದ ಅವಿಭಾಗ್ಯ ಅಂಗವೇ ಆಗಿತ್ತು. ಬರೋಬ್ಬರಿ 23 ವರ್ಷಗಳ ನಂತರ, ವೈದ್ಯ ಡಾ.ವಿ.ಆರ್.ಮೆನನ್ ಈ ಕಾರನ್ನು ಮಾರಾಟ ಮಾಡಿದ್ದರು. ಆ ಮೇಲೆ ಮತ್ತೆರಡು ವರ್ಷ ವೈದ್ಯರ ಬಳಿಯೇ ಕೆಲಸ ಮಾಡಿದ್ದ ಅಚ್ಯುತನ್ ನಾಯರ್ ತಮ್ಮ ಮಕ್ಕಳು ದುಡಿಯುವುದನ್ನು ಶುರು ಮಾಡಿದ ಮೇಲೆ ಕೆಲಸವನ್ನು ಬಿಟ್ಟಿದ್ದರು.
ಅಚ್ಯುತನ್ ನಾಯರ್ ಅವರು ಈ ಕಾರಿನೊಂದಿಗಿನ ಬಾಂಧವ್ಯವನ್ನು ಮರೆತಿರಲಿಲ್ಲ. ಇದನ್ನು ಮನಗಂಡ ಮಕ್ಕಳಾದ ಅಜಿತ್ ಹಾಗೂ ಸುಜಿತ್ ಅಂಬಾಸಿಡರ್ ಕಾರನ್ನು ಹುಡುಕುವ ಕಾರ್ಯದಲ್ಲಿ ನಿರತರಾದರು. ಕಡೆಗೆ ವಡಕಂಚೇರಿಯ ನಿವಾಸಿಯೊಬ್ಬರ ಬಳಿ ಈ ಅಂಬಾಸಿಡರ್ ಇದೇ ಎಂದು ತಿಳಿದು, ಅಲ್ಲಿಗೆ ಹೋಗಿ ಕಾರನ್ನು ನೀಡುವಂತೆ ಕೇಳುತ್ತಾರೆ. ಮೊದಲು, ನೀಡಲು ನಿರಾಕರಿಸುತ್ತಾರೆ. ಆದರೆ, ಈ ಕಾರಿನೊಂದಿಗೆ ತಮ್ಮ ತಂದೆಯ ನೆನಪುಗಳನ್ನು ತಿಳಿಸಿದಾಗ ಕೊಡಲು ಒಪ್ಪುತ್ತಾರೆ.
ಇದೇ ಕಾರಿನಲ್ಲಿ ಚಿತ್ರನಟ ಜಯನ್, ಮಾಜಿ ಸಚಿವೆ ಕೆ.ಆರ್.ಗೌರಿಯಮ್ಮ ಸೇರಿದಂತೆ ಅನೇಕರು ಪ್ರಯಾಣಿಸಿದ್ದರು ಎಂದು ಅಚ್ಯುತನ್ ನಾಯರ್ ಹೇಳುತ್ತಾರೆ. 25 ವರ್ಷದ ಹಿಂದೆ ಕಪ್ಪು ಬಣ್ಣದಲ್ಲಿದ್ದ ಈ ಅಂಬಾಸಿಡರ್ ಕಾರಿಗೆ ನೀಲಿ ಪೇಂಟ್ ಮಾಡಿ, ಹೊಸದಾಗಿ ಕಾಣುವಂತೆ ಮಾಡಲಾಗಿದೆ. ಸದ್ಯ, ಅಚ್ಯುತನ್ ನಾಯರ್ ಅವರ ಮಕ್ಕಳು ಕಾರಿನೊಂದಿಗಿರುವ ಹಳೆಯ ಹಾಗೂ ಹೊಸ ಚಿತ್ರವನ್ನು ಹಂಚಿಕೊಂಡಿದ್ದು, ಎಲ್ಲರೂ ಮೆಚ್ಚುತ್ತಿದ್ದಾರೆ.
'ಹಿಂದೂಸ್ತಾನ್ ಮೋಟಾರ್' ಇಂಗ್ಲೆಂಡ್‌ನ ಮಾರಿಸ್ ಆಕ್ಸ್‌ಫೋರ್ಡ್ ಕಂಪನಿಯ ಈ ಅಂಬಾಸಿಡರ್ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. 1957 ರಿಂದ 2014ವರೆಗೆ ಮಾರಾಟ ಮಾಡಲಾಯಿತು. ಪ್ರಧಾನಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳು ಈ ಕಾರನ್ನು ಬಳಕೆ ಮಾಡುತ್ತಿದ್ದರು. ಆದರೆ, ಆಕರ್ಷಕ ವೈಶಿಷ್ಟ್ಯದ ಹೊಸ ಕಾರುಗಳ ಬಂದ ಮೇಲೆ ಅಂಬಾಸಿಡರ್ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿದು, ಇತಿಹಾಸ ಪುಟ ಸೇರಿತು.


Click it and Unblock the Notifications