Bengaluru Rail Road Flyover: ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೈಲು-ರಸ್ತೆ ಮೇಲ್ಸೇತುವೆ ಬಹುತೇಕ ಸಿದ್ಧ!
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಬಹುದೊಡ್ಡ ಸಮಸ್ಯೆಯಾಗಿದೆ. ಅದನ್ನು ಬಗೆಹರಿಸಲು ಸರ್ಕಾರದ ವತಿಯಿಂದ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಮಾರೇಹನಹಳ್ಳಿ ರಸ್ತೆಯಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೈಲು - ರಸ್ತೆ ಮಾರ್ಗದ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಬಹುತೇಕ ಕಾಮಗಾರಿ ಮುಂದಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.
ಈ ರಸ್ತೆ - ರೈಲು ಮೇಲ್ಸೇತುವೆ (rail-road flyover) ಪೂರ್ಣಗೊಳ್ಳುವತ್ತ ಬಂದಿದ್ದರೂ, ವಾಹನ ಸಂಚಾರಕ್ಕೆ ಕೊಂಚ ಸಮಯ ಬೇಕಾಗಬಹುದು ಎಂಬ ವಿವರಗಳು ಲಭ್ಯವಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಮೇಲ್ಸೇತುವೆ ಸಹಾಯಕವಾಗಲಿದೆ. ಆದರೆ, ಈ ಮಾರ್ಗದಲ್ಲಿ ರ‍್ಯಾಂಪ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದು ಮುಗಿದ ಮೇಲೆಯೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.

ಇದು, ರಾಗಿಗುಡ್ಡ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಧ್ಯೆ ಆರ್‌ವಿ ರಸ್ತೆ - ಬೊಮ್ಮಸಂದ್ರ ಮೆಟ್ರೋ ಲೈನ್ (ರೀಚ್ -5)ಗೆ ಸಂಬಂಧಿಸಿದ ಮೇಲ್ಸೇತುವೆಯಾಗಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದರ ಕಾಮಗಾರಿಯನ್ನು ನಡೆಸುತ್ತಿದೆ. ನೆಲಮಟ್ಟದಿಂದ ಎರಡು ಹಂತಗಳಲ್ಲಿ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ.
ಅದರಲ್ಲಿ ಮೊದಲ ಹಂತವು ನಾಲ್ಕು ಪಥದ ರಸ್ತೆಯನ್ನು ಹೊಂದಿದೆ. ಎರಡನೇ ಹಂತದಲ್ಲಿ ಮೆಟ್ರೋ ಟ್ರ್ಯಾಕ್‌ಗಳಿವೆ. ಫ್ಲೈಓವರ್ 3.2 ಕಿಲೋಮೀಟರ್ ಉದ್ದವಿದ್ದು, 31 ಮೀಟರ್ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ರೈಲು - ರಸ್ತೆ ಮೇಲ್ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ, ಮೆಟ್ರೋ ರೈಲು ಕಾರ್ಯಚರಿಸುವ ಮೊದಲ ಈ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತಾಯವಾಗಬಹುದು.
ಆಗ, ಹೆಚ್ಎಸ್ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಯಾವುದೇ ಸಂಚಾರ ದಟ್ಟಣೆ ಸಮಸ್ಯೆಯಿಲ್ಲದೆ, ವಾಹನ ಸವಾರರು ಸುಗಮವಾಗಿ ಸಂಚರಿಸಬಹುದು. ಮೇಲ್ಸೇತುವೆ ಕಾಮಗಾರಿಯನ್ನು ಬೇಗನೇ ಮುಗಿಸಲು, ಮೆಟ್ರೋ ನಿಗಮಕ್ಕೆ ಕೇಳಿಕೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮೇಲ್ಸೇತುವೆಯಿಂದ ಪ್ರಮುಖ ಐಟಿ ಕಚೇರಿಗಳು ಇರುವ ಸ್ಥಳಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ.
ಅದರಲ್ಲೂ, ಬಿಟಿಎಂ ಲೇಔಟ್‌ನಿಂದ ಹೊರ ವರ್ತುಲ ರಸ್ತೆಯ ಕಡೆಗೆ ತೆರಳುವವರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಅದೇ ರೀತಿಯಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಹೊಸೂರು ಕಡೆಗೆ ಹೋಗುವ ವಾಹನ ಸವಾರರಿಗೂ ನೆರವಾಗಲಿದೆ. ಜೊತೆಗೆ ಟ್ರಾಫಿಕ್ ಗಳಲ್ಲಿ ನಿಲ್ಲುವ ಸಮಯಾವಕಾಶವು ಕಡಿಮೆಯಾಗುತ್ತದೆ. ಇಲ್ಲಿರುವ ನಾಲ್ಕು ಸಿಗ್ನಲ್ ಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.
ಟ್ರಾಫಿಕ್ ಪೊಲೀಸರು, ಮೆಟ್ರೋ ನಿಗಮದ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ. ಇದರಿಂದಾಗಿ ಫ್ಲೈಓವರ್ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತೂ ಈ ರೈಲು - ರಸ್ತೆ ಮೇಲ್ಸೇತುವೆ ಕಾಮಗಾರಿ ಮುಗಿದ ಮೇಲೆ ಒಂದಷ್ಟು ಸಂಚಾರ ದಟ್ಟಣೆಯ ಸಮಸ್ಯೆ ಬಗೆಹರಿದು, ವಾಹನ ಸವಾರರಿಗೆ ಸುಗಮ ಸಂಚಾರ ಸಾಧ್ಯವಾಗುತ್ತದೆ.
ಇನ್ನು, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯಾಗಿರುವ 150 ಕಿಲೋಮೀಟರ್ ಉದ್ದದ ದ್ವಿಮುಖ ಸುರಂಗ ರಸ್ತೆ ಯೋಜನೆಗೆ ಗ್ಲೋಬಲ್ ಟೆಂಡರ್ ಆಹ್ವಾನಿಸಲಾಗಿದೆ. ಬರೊಬ್ಬರಿ 50,000 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಕೆಲವೇ ವರ್ಷಗಳಲ್ಲಿ ಪೀಣ್ಯದಿಂದ ಹೊಸೂರು ರಸ್ತೆವರೆಗೆ ಸುರಂಗ ರಸ್ತೆ ನಿರ್ಮಾಣವಾಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
Image Courtesy: @bengalurutrains/Twitter


Click it and Unblock the Notifications