Vande Bharat Express: ಭಾರತದ ಮುಕುಟಮಣಿಗೂ ವಂದೇ ಭಾರತ್ ಎಕ್ಸ್‌ಪ್ರೆಸ್.. ಕರ್ನಾಟಕದಲ್ಲಿ ಎಲ್ಲಿಗೆ?
ದೇಶದ ಪ್ರಮುಖ ನಗರಗಳನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈ - ಸ್ವೀಡ್ ರೈಲಾಗಿ ಬೆಸೆಯುತ್ತಿದೆ. ಶೀಘ್ರದಲ್ಲಿಯೇ ಭಾರತದ ಮುಕುಟಮಣಿ ಜಮ್ಮು - ಕಾಶ್ಮೀರದಲ್ಲಿಯೂ ಈ ರೈಲು ಕಾರ್ಯಾಚರಣೆ ನಡೆಸಲಿದೆ.
ನವದೆಹಲಿಯಲ್ಲಿ ಗುರುವಾರ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಜಮ್ಮು - ಶ್ರೀನಗರ (Jammu - Srinagar) ರೈಲ್ವೆ ಮಾರ್ಗವು ಸಿದ್ದಗೊಂಡ ನಂತರ, ಈ ಹಣಕಾಸು ವರ್ಷದಲ್ಲಿಯೇ ಶ್ರೀನಗರದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಚರಣೆ ನಡೆಸುವ ಸಾಧ್ಯತೆಯಿದೆ. ಈಶಾನ್ಯ ರಾಜ್ಯಗಳ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡ ಬಳಿಕ, ತ್ರಿಪುರಾಕ್ಕೂ ಈ ಸೇವೆ ವಿಸ್ತರಣೆಗೊಳ್ಳಲಿದೆ ಎಂದು ಹೇಳಿದ್ದಾರೆ.

ಮುಂದಿನ ವರ್ಷದ ಮಾರ್ಚ್ ವೇಳೆಗೆ 75 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ದೂರದ ಊರುಗಳ ಪ್ರಯಾಣಕ್ಕೆ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಓಡಿಸಲು ಸಿದ್ಧತೆ ನಡೆಸುತ್ತಿದೆ. ಹತ್ತಿರದ ನಗರಗಳ ಪ್ರಯಾಣಕ್ಕೆ ವಂದೇ ಮೆಟ್ರೋ ರೈಲುಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.
ವಿಶೇಷವಾಗಿ ಜಮ್ಮು - ಶ್ರೀನಗರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಅಲ್ಲಿನ ಎತ್ತರ ಹಾಗೂ ತಾಪಮಾನದಲ್ಲಿ ಸರಾಗವಾಗಿ ಚಲಿಸಲು ಅನುಕೂಲವಾಗವಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಸಮೀಕ್ಷೆಯ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಾಮದಾಯಕ ಪ್ರಯಾಣ ಹಾಗೂ ವೇಗಕ್ಕಾಗಿ ಯುವ ಜನರು, ಹಿರಿಯ ನಾಗರಿಕರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಕೇಂದ್ರ ಸರ್ಕಾರ ಹೇಳಿರುವಂತೆ ಮುಂದಿನ ಮಾರ್ಚ್ ವೇಳೆಗೆ ಹಲವು ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಲೋಕಾರ್ಪಣೆಗೊಂಡರೆ, ಬೆಂಗಳೂರು - ಮಂಗಳೂರು, ಬೆಂಗಳೂರು - ಶಿವಮೊಗ್ಗಕ್ಕೂ ಈ ಸೇವೆ ದೊರೆಯಬಹುದು ಎಂದು ನೀರಿಕ್ಷಿಸಲಾಗಿದೆ. ಆದರೆ, ಸ್ವಲ್ಪ ದಿನ ಕಾಯುವುದು ಅನಿವಾರ್ಯವಾಗಿದೆ. ಇಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಾರ್ಯಾಚರಣೆ ಶುರುವಾದರೆ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದೆ.
ಸದ್ಯ, ಕರ್ನಾಟಕದ ಮೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಕಾರ್ಯಾಚರಣೆ ನಡೆಸುತ್ತಿದೆ. ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಒಂದು ರೈಲು ಓಡಾಟ ಮಾಡುತ್ತಿದೆ. ಮತ್ತೊಂದು, ಬೆಂಗಳೂರು - ಹುಬ್ಬಳ್ಳಿ - ಧಾರವಾಡ ಮಧ್ಯೆ ಸಂಚಾರಿಸುತ್ತಿದೆ. ಇತ್ತೀಚೆಗೆ, ಕಾಚಿಗುಡ (ಹೈದರಾಬಾದ್) - ಯಶವಂತಪುರ (ಬೆಂಗಳೂರು) ರೈಲನ್ನು ಲೋಕಾರ್ಪಣೆಗೊಳಿಸಲಾಗಿತ್ತು.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಯಾವ ವಿಮಾನಕ್ಕೂ ಕಮ್ಮಿಯಿಲ್ಲದಂತಹ ಸೌಕರ್ಯವನ್ನು ಹೊಂದಿವೆ. ವೇಗವಾಗಿ ಸಂಚರಿಸುವ ಈ ರೈಲುಗಳು ಆರಾಮದಾಯಕ ಆಸನ ಹೊಂದಿದ್ದು, ಪ್ರಯಾಣಿಕರಿಗೆ ಸುಖಕರ ಪ್ರಯಾಣವನ್ನು ಒದಗಿಸುತ್ತವೆ. ಜೈವಿಕ ಶೌಚಾಲಯ, ವೈಫೈ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳನ್ನು ಪಡೆದಿವೆ. ಈ ಮೂಲಕ ವಂದೇ ಭಾರತ್ ಹೆಚ್ಚು ಅತ್ಯಾಧುನಿಕವಾಗಿದೆ.
ಇನ್ನು, ಭಾರತದ ಮುಕುಟಮಣಿಯಾಗಿರುವ ಜಮ್ಮು - ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆ ನೀಡಲು ಮುಂದಾಗಿದೆ. ಇದರಿಂದ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕಾಣಲಿದೆ. ಮುಂದಿನ ವರ್ಷ 75 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸುವುದಾಗಿಯೂ ಹೇಳಿದ್ದು, ಕರ್ನಾಟಕದ ಯಾವ ನಗರಕ್ಕೆ ಈ ರೈಲು ಸೇವೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications