ಮಾಡಿದ್ದುಣ್ಣೋ ಮಹರಾಯ.. ವಿದ್ಯಾರ್ಥಿಗೆ ರೂ.1.33 ಲಕ್ಷ ದಂಡ ವಿಧಿಸಿದ ಪೊಲೀಸರು, Hyundai ಕಾರು ಸೀಜ್
ಜನ ಸಂಚಾರಿ ರಸ್ತೆಯಲ್ಲಿ ತಮ್ಮ ಕಾರು ಅಥವಾ ಬೈಕ್ ಬಳಸಿ, ಸ್ಟಂಟ್ ಮಾಡುವುದು ಅಪರಾಧವಾಗಿದೆ. ಆದರೂ, ಕೆಲವರು ಈ ರೀತಿಯ ಕೆಲಸ ಮಾಡಿ, ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿರುತ್ತಾರೆ. ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದೆ. ಆ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸರಿಯಾಗಿಯೇ ಬುದ್ದಿ ಕಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೋಯ್ಡಾ ರಸ್ತೆಗಳಲ್ಲಿ ಹ್ಯುಂಡೈ ಕಾರಿನಲ್ಲಿ ವ್ಯಕ್ತಿಯೊಬ್ಬ ಸ್ಟಂಟ್ ಮಾಡುತ್ತಿದ್ದ ವಿಡಿಯೋಗಳು ಭಾರೀ ವೈರಲ್ ಆಗಿವೆ. ಇದನ್ನು ಗಮನಿಸಿದ ಸ್ಥಳೀಯರು, ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಾಹನ ಪ್ರದರ್ಶನ ಮಾಡಲು ಬಳಸಿದ್ದ ಕಾರು ಹಾಗೂ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಆದರೆ, ಈ ಕಾರಿನ ಮೇಲಿದ್ದ ಪ್ರಕರಣಗಳಿಗೆ ಸಂಬಂಧಿಸಿದ ದಂಡದ ಮೊತ್ತವನ್ನು ಕಂಡು ಒಂದುಕ್ಷಣ ಬೆರಗಾಗಿದ್ದಾರೆ.

ಈ ಕೆಂಪು ಬಣ್ಣದ ಹ್ಯುಂಡೈ ಐ20 ಎಲೈಟ್ ಹ್ಯಾಚ್‌ಬ್ಯಾಕ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ವರ್ಷಗಳಿಂದ ನಿಯಮಗಳನ್ನು ಬ್ರೇಕ್ ಮಾಡಲಾಗಿದೆ. ಆದರೆ, ಯಾವುದೇ ದಂಡವನ್ನು ಪಾವತಿಸದೇ ರಸ್ತೆಯಲ್ಲಿ ಸಂಚರಿಸಲು ಬಳಸಲಾಗಿದೆ. ಇದೀಗ ಪೊಲೀಸರು, ಸ್ಟಂಟ್ ಮಾಡುತ್ತಿದ್ದ ಚಾಲಕನನ್ನು ಬಂಧಿಸಿದ್ದು, ಕಾರನ್ನು ಸೀಜ್ ಮಾಡಿ, ರೂ.33,000 ದಂಡ ವಿಧಿಸಿದ್ದಾರೆ. ಬಾಕಿ ಉಳಿದಿದ್ದ ದಂಡದ ಮೊತ್ತವೆಲ್ಲ ಒಟ್ಟುಗೂಡಿ ರೂ.1.33 ಲಕ್ಷವಾಗಿದೆ.
ಬಂಧಿತ ಚಾಲಕ ಓರ್ವ ವಿದ್ಯಾರ್ಥಿ ಎಂಬುದು ತಿಳಿದುಬಂದಿದ್ದು, ಆತ ತಂದೆಯ ಕಾರನ್ನು ಸ್ಟಂಟ್ ಮಾಡಲು ಬಳಕೆ ಮಾಡುತ್ತಿದ್ದನು. ಇದೀಗ, ಪೊಲೀಸರು ಚಾಲಕನ ಲೈಸೆನ್ಸ್ ಹಾಗೂ ಕಾರಿನ ನೋಂದಣಿಯನ್ನು ರದ್ದು ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿಯ ವಯಸ್ಸಿನ ಬಗ್ಗೆ ಕೆಲವೊಂದು ಅನುಮಾನಗಳು ಮೂಡಿವೆ.
ಆತ 10ನೇ ತರಗತಿ ವಿದ್ಯಾರ್ಥಿ ಎಂದು ಹೇಳಲಾಗಿದೆ. ಆದರೆ, ಡ್ರೈವಿಂಗ್ ಲೈಸೆನ್ಸ್ ನಲ್ಲಿ 19 ವರ್ಷವೆಂದು ಇದೆ. ಇದರಿಂದ ಗೊಂದಲಕ್ಕೆ ಒಳಗಾಗಿರುವ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 'ಒಂದು ವೇಳೆ ಆತ ಅಪ್ರಾಪ್ತ ವಯಸ್ಸಿನ ಹುಡುಗನೆಂದು ಸಾಬೀತಾದರೆ ಕಾರಿನ ಮಾಲೀಕನ (ತಂದೆ) ವಿರುದ್ಧ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ವಿದ್ಯಾರ್ಥಿ ನಕಲಿ ಚಾಲನಾ ಪರವಾನಗಿಯನ್ನು ಹೇಗೆ ಪಡೆದ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ' ಎಂದು ಪೊಲೀಸರು ಹೇಳಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡಲು ಯಾವುದೇ ರೀತಿಯಿಂದಲ್ಲೂ ಅವಕಾಶವಿಲ್ಲ. ಇದರಿಂದ ವಾಹನವನ್ನು ಚಲಾಯಿಸುವ ಡ್ರೈವರ್ ಅಥವಾ ಇತರ ದಾರಿ ಹೋಕರಿಗೆ ತೊಂದರೆಯಾಗಬಹುದು. ಇಂತಹ ಹುಚ್ಚು ಸಾಹಸ ಮಾಡಲು ಹೋಗಿ, ಎಷ್ಟೋ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದಿರಲಿ ಎಂದು ಪೊಲೀಸರು ಹಲವು ಬಾರಿ ದಂಡವನ್ನು ವಿಧಿಸುತ್ತಾರೆ. ಆದರೂ ಬುದ್ಧಿಯನ್ನೇ ಕಲಿಯುವುದಿಲ್ಲ.
ನಿಮಗೇನಾದರೂ ಬೈಕ್ ಅಥವಾ ಕಾರು ಬಳಿಸಿ, ಸ್ಟಂಟ್ ಮಾಡಬೇಕು ಅಂದುಕೊಂಡ್ರೆ ರೇಸ್ ಟ್ರ್ಯಾಕ್ ಅಥವಾ ನಿಮ್ಮ ಖಾಸಗಿ ಸ್ಥಳದಲ್ಲಿ ನಡೆಸಿ. ಸಾರ್ವಜನಿಕ ಸ್ಥಳದಲ್ಲಿ ಎಂದಿಗೂ ಈ ಕೆಲಸವನ್ನು ಮಾಡಬೇಡಿ. ನಿಮ್ಮ ತಪ್ಪಿನಿಂದ ಸಂಬಂಧ ಇರದವರೂ ಬಲಿಯಾಗಬಹುದು. ಈ ರೀತಿಯ ಸಾಹನ ಪ್ರದರ್ಶನ ಮಾಡುವಾಗ ಪ್ರತಿಯೊಬ್ಬರಿಗೂ ಕುಟುಂಬವಿರುತ್ತದೆ ಎಂಬುದನ್ನು ಮರೆಯಬೇಡಿ. ಒಟ್ಟಾರೆ, ವಾಹನ ಚಲಾಯಿಸುವಾಗ ಜಾಗ್ರತೆ ಇರಲಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications